ಸುಬ್ರಹ್ಮಣ್ಯ ಷಷ್ಠಿ ನಿಮಿತ್ತ ಮೊದಲ ವರ್ಷದ ದೀಪಾರಾಧನಾ ಮಹೋತ್ಸವ

KannadaprabhaNewsNetwork |  
Published : Dec 09, 2024, 12:45 AM IST
8ಕೆಎಂಎನ್ ಡಿ34 | Kannada Prabha

ಸಾರಾಂಶ

ನಾಗಮಂಗಲ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಯೋಗಾನರಸಿಂಹಸ್ವಾಮಿ ದೇವಾಲಯದಲ್ಲಿ 12ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ಹಾಗೂ ಮೊದಲ ವರ್ಷದ ದೀಪಾರಾಧನ ಮಹೋತ್ಸವವು ಅಪಾರ ಭಕ್ತ ಸಮೂಹದ ನಡುವೆ ಬಹಳ ವಿಜೃಂಭಣೆಯಿಂದ ನೆರವೇರಿತು. ದೇಗುಲ ಒಳ ಪ್ರಾಕಾರದಲ್ಲಿರುವ ಆದಿಶೇಷನಿಗೆ ಹಾಲಿನ ತನಿ ಎರಸಲಾಯಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಯೋಗಾನರಸಿಂಹಸ್ವಾಮಿ ದೇವಾಲಯದಲ್ಲಿ 12ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ಹಾಗೂ ಮೊದಲ ವರ್ಷದ ದೀಪಾರಾಧನ ಮಹೋತ್ಸವವು ಅಪಾರ ಭಕ್ತ ಸಮೂಹದ ನಡುವೆ ಬಹಳ ವಿಜೃಂಭಣೆಯಿಂದ ನೆರವೇರಿತು.

ಸ್ಥಳೀಯ ವಿಪ್ರ ಸೇವಾ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಂಜಾನೆ 7ಕ್ಕೆ ತಾಲೂಕಿನ ತೆಂಗನಭಾಗ ಗ್ರಾಮದ ಖ್ಯಾತ ನಾದಸ್ವರವಾದಕ ಕೃಷ್ಣಪ್ಪ ನೇತೃತ್ವದ ತಂಡದವರಿಂದ ನಾದಸ್ವರ ಹಾಗೂ ವೇದ ಪಠಣದೊಂದಿಗೆ ಸುಬ್ರಹ್ಮಣ್ಯಸ್ವಾಮಿಗೆ ಸಂಕಲ್ಪ ಪೂಜೆ ನೆರವೇರಿಸಲಾಯಿತು.

ಬಳಿಕ ದೇಗುಲ ಒಳ ಪ್ರಾಕಾರದಲ್ಲಿರುವ ಆದಿಶೇಷನಿಗೆ ಹಾಲಿನ ತನಿ ಎರಸಲಾಯಿತು. ಭಕ್ತರು ತಮ್ಮ ಕುಟುಂಬಕ್ಕೆ ಒದಗುವ ಎಲ್ಲಾ ಕಷ್ಠ ಕಾರ್ಪಣ್ಯಗಳನ್ನು ದೂರಮಾಡುವಂತೆ ಬಕ್ತಿ ಭಾವದಿಂದ ಹಾಲು ಮೊಸರಿನ ತನಿ ಎರೆದರು. ತಿರುಪತಿಯಿಂದ ಆಗಮಿಸಿದ್ದ ಆಗಮಿಕ ಪ್ರಸಾದ್ ವೈಖಾನಸ್ ಅವರು ಮೂಲ ಸ್ಥಾನದಲ್ಲಿರುವ ಕಾರ್ತಿಕೇಯನಿಗೆ ಹಾಲು ಮೊಸರಿನ ಅಭಿಷೇಕ ಮಾಡಿದರು.

ವಿವಿಧ ಬಗೆಯ ಹೂವುಗಳಿಂದ ಅಲಂಕೃತಗೊಂಡಿದ್ದ ನಾಗರ ಪೀಠದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆ ನಡೆಸಿದ ಬಳಿಕ ಪೂಜಾ ಸ್ಥಾನಕ್ಕೆ ಕರೆತರಲಾಯಿತು. ಸ್ವಾಮಿ ಸನ್ನಿಧಿಗೆ ವಿಪ್ರ ವಟುಗಳನ್ನು ಕರೆತಂದು ಪಾದ ಪೂಜೆ ನೆರವೇರಿಸಲಾಯಿತು.

ಶ್ರೀಯೋಗಾನರಸಿಂಹನ ಸತಿ ಪ್ರಸನ್ನನಾಯಕಿಯನ್ನು ದೇವಳದ ಮುಂದೆ ಕೂರಿಸಿ ನೈವೇದ್ಯ ಅರ್ಪಿಸಲಾಯಿತು. ಸುದರ್ಶನ ದೇವರು ಮತ್ತು ಅಮ್ಮನವರ ಮಂದಿರದ ಮುಂಭಾಗದಲ್ಲಿ ಬ್ರಾಹ್ಮಣ ಸುವಾಸಿನಿಯರು ಮತ್ತು ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಮತ್ತು ವಿಪ್ರ ಸೇವಾ ಸಮಿತಿಯಿಂದ ಮೊದಲನೇ ವರ್ಷದ ಊಂಜಲೋತ್ಸವ ಹಾಗೂ ದೀಪಾರಾದನಾ ಮಹೋತ್ಸವ ನಡೆಸಲಾಯಿತು. ರಾತ್ರಿ 7 ಗಂಟೆಗೆ ನೆರೆದಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗರುಡ ಕಂಭಕ್ಕೆ ದೀಪ ಹಚ್ಚುವ ಮೂಲಕ ಉಂಜಲೋತ್ಸದ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ದೇವಸ್ಥಾನದ ಮುಂಭಾಗದಲ್ಲಿ ಬಿಡಿಸಲಾಗಿದ್ದ ಶಂಕ ಚಕ್ರ ನಾಗದೇವತೆಯ ಚಿತ್ರಗಳ ಮೇಲೆ ಭಕ್ತಾದಿಗಳು ಹಣತೆಗಳನ್ನು ಹಚ್ಚಿ ಭಕ್ತಿಭಾವ ಸಮರ್ಪಿಸಿದರು.

ಆಗಮಿಸಿದ್ದ ಎಲ್ಲ ಭಕ್ತರಿಗೆ ಹಾಲು, ಲಡ್ಡು, ರವೆ ಉಂಡೆ ಪ್ರಸಾದ ನೀಡಲಾಯಿತು. ಮಾಜಿ ಶಾಸಕ ಸುರೇಶ್‌ಗೌಡ ದಂಪತಿ ಸೇರಿದಂತೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಿಂದ ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

PREV

Recommended Stories

ವಿಕ್ಟೋರಿಯಾ ಆಸ್ಪತ್ರೆಗೆ ಸಿದ್ದರಾಮಯ್ಯ ದಿಢೀರ್ ಭೇಟಿ
ಇಂದು ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ : ಇಲ್ಲೆಲ್ಲಾ ವಾಹನಗಳಿಗೆ ನಿಷೇಧ