ಲೈಟ್ ಫಿಶಿಂಗ್‌ನಿಂದ ಮತ್ಸ್ಯಕ್ಷಾಮ ಎನ್ನುವುದು ಸುಳ್ಳು: ನವೀನ ಬಂಗೇರಾ

KannadaprabhaNewsNetwork |  
Published : Dec 15, 2024, 02:01 AM IST
ಪೊಟೋ ಪೈಲ್ : 14ಬಿಕೆಲ್4 | Kannada Prabha

ಸಾರಾಂಶ

ಲೈಟ್ ಫಿಶಿಂಗ್ ನಮ್ಮ ಕರಾವಳಿಯ ಸಮಸ್ಯೆ ಮಾತ್ರವಲ್ಲ, ನಾವು ಬೆಳಕು ಮೀನುಗಾರಿಕೆಯನ್ನು ಮಾಡದೇ ಇದ್ದರೂ ನಮ್ಮ ಕರಾವಳಿಯ ಹೊರಭಾಗದಲ್ಲಿ ಬೇರೆ ರಾಜ್ಯದವರು ಬಂದು ಮೀನುಗಾರಿಕೆ ಮಾಡುತ್ತಾರೆ. ಅದೇ ರೀತಿಯಾಗಿ ನಮ್ಮ ದೇಶದ ಗಡಿಭಾಗದಲ್ಲಿ ಬೇರೆ ರಾಷ್ಟ್ರದವರು ಬಂದು ಮೀನುಗಾರಿಕೆ ಮಾಡುತ್ತಾರೆ ಎಂದು ಮಲ್ಪೆಯ ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಉಪಾಧ್ಯಕ್ಷ, ಮಂಗಳೂರಿನ ನವೀನ ಬಂಗೇರಾ ಹೇಳಿದ್ದಾರೆ.

ಭಟ್ಕಳ: ಲೈಟ್ ಫಿಶಿಂಗ್‌ನಿಂದ ಮತ್ಸ್ಯಕ್ಷಾಮ ಉಂಟಾಗುತ್ತದೆ ಎನ್ನುವುದು ಸುಳ್ಳ ಆರೋಪ. ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಲೈಟ್ ಫಿಶಿಂಗ್ ನಡೆಯುತ್ತಿದೆ ಎಂದು ಮಲ್ಪೆಯ ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಉಪಾಧ್ಯಕ್ಷ, ಮಂಗಳೂರಿನ ನವೀನ ಬಂಗೇರಾ ಹೇಳಿದ್ದಾರೆ.

ಭಟ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಸಿಎಂಎಫ್‌ಆರ್‌ಐ ಸಂಸ್ಥೆ ನೀಡಿರುವ ಮಾರ್ಗಸೂಚಿಯಂತೆಯೇ ಮೀನುಗಾರಿಕೆ ಮಾಡುತ್ತಿದ್ದು, ಕ್ರಮಬದ್ಧವಾಗಿದೆ. ನಾವು ಚಿಕ್ಕ ಮೀನನ್ನು ಹಿಡಿಯುವುದಿಲ್ಲ, ಬದಲಾಗಿ ದೊಡ್ಡ ಮೀನುಗಳನ್ನು ಮಾತ್ರ ಹಿಡಿಯುತ್ತೇವೆ ಎಂದರು.

ಲೈಟ್ ಫಿಶಿಂಗ್ ನಮ್ಮ ಕರಾವಳಿಯ ಸಮಸ್ಯೆ ಮಾತ್ರವಲ್ಲ, ನಾವು ಬೆಳಕು ಮೀನುಗಾರಿಕೆಯನ್ನು ಮಾಡದೇ ಇದ್ದರೂ ನಮ್ಮ ಕರಾವಳಿಯ ಹೊರಭಾಗದಲ್ಲಿ ಬೇರೆ ರಾಜ್ಯದವರು ಬಂದು ಮೀನುಗಾರಿಕೆ ಮಾಡುತ್ತಾರೆ. ಅದೇ ರೀತಿಯಾಗಿ ನಮ್ಮ ದೇಶದ ಗಡಿಭಾಗದಲ್ಲಿ ಬೇರೆ ರಾಷ್ಟ್ರದವರು ಬಂದು ಮೀನುಗಾರಿಕೆ ಮಾಡುತ್ತಾರೆ. ನಮ್ಮ ಲೈಟ್ ಫಿಶಿಂಗ್‌ನಿಂದ ಮತ್ಸ್ಯಕ್ಷಾಮವಾಗಿದೆ ಎನ್ನುವುದು ಸಂಪೂರ್ಣ ಸುಳ್ಳು ಹಾಗೂ ಆಧಾರರಹಿತವಾಗಿರುವ ವಿಷಯ ಎಂದ ಅವರು, ಮೀನುಗಾರಿಕಾ ನಿಷೇಧವನ್ನು ಈಗಿರುವ ೬೦ ದಿನದಿಂದ ೯೧ ದಿನಕ್ಕೆ ವಿಸ್ತರಣೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ರಾಜ್ಯದಲ್ಲಿ ಮೀನುಗಾರಿಕೆ ಮಾಡುತ್ತಿರುವ ನಾಡದೋಣಿ, ಪರ್ಸಿನ್ ಬೋಟ್, ಟ್ರಾಲ್ ಬೋಟ್ ಎಲ್ಲ ವಿಭಾದಲ್ಲಿಯೂ ನಾವು ಉತ್ತಮ ಬಾಂಧವ್ಯ ಹೊಂದಿದ್ದೇವೆ. ಕೆಲವು ಸ್ಥಾಪಿತ ಹಿತಾಸಕ್ತಿಗಳು ಈ ಬಗ್ಗೆ ನಮ್ಮ ನಮ್ಮಲ್ಲಿ ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದು, ಜಿಲ್ಲಾಡಳಿತ ಹಾಗೂ ಸ್ಥಳೀಯಾಡಳಿತ ಇದಕ್ಕೆ ಅವಕಾಶ ಮಾಡಿಕೊಡಬಾರದು. ನಾವು ನಮ್ಮ ಮೀನುಗಾರಿಕೆಯನ್ನು ಆಳ ಸಮುದ್ರದಲ್ಲಿ ೧೦-೨೦ ನಾಟಿಕಲ್ ಮೈಲು ದೂರದಲ್ಲಿ ಮಾಡುತ್ತೇವೆ. ಇದರಿಂದ ಇದು ನಾಡದೋಣಿಯವರು ಮೀನುಗಾರಿಕೆ ಮಾಡುವುದಕ್ಕಿಂತ ಬಹಳ ದೂರದ ಪ್ರದೇಶವಾಗಿದ್ದು, ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಒಂದುವೇಳೆ ೧೨ ನಾಟಿಕಲ್ ಮೈಲು ದೂರಕ್ಕಿಂತ ಕಡಿಮೆ ದೂರದಲ್ಲಿ ಬೆಳಕು ಮೀನುಗಾರಿಕೆಯನ್ನು ಮಾಡಿದರೆ ಅದಕ್ಕೆ ನಾವೇ ವಿರೋಧಿಸಿ, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ವಿನಃ ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘನೆಗೆ ನಮ್ಮ ಸಂಘಟನೆ ಅವಕಾಶ ಕೊಡುವುದಿಲ್ಲ ಎಂದರು.

ಕರಾವಳಿಯ ಈ ಭಾಗದಲ್ಲಿ ಸುಮಾರು ೪೫ರಿಂದ ೫೦ ಸಾವಿರ ಮೀನುಗಾರರು ಮೀನುಗಾರಿಕೆ ಮಾಡುತ್ತಿದ್ದು, ಒಟ್ಟೂ ೫೦ ಸಾವಿರ ಕುಟುಂಬಗಳು ಮೀನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದಾರೆ. ನಮ್ಮ ದೇಶದ ಎಲ್ಲ ರಾಜ್ಯಗಳಲ್ಲಿಯೂ ಲೈಟ್ ಫಿಶಿಂಗ್ ನಡೆಯುತ್ತಿದೆ. ಲೈಟ್ ಫಿಶಿಂಗ್ ನಿಂತು ಹೋದರೆ ಕರಾವಳಿಯ ಸುಮಾರು ೫೦ ಸಾವಿರ ಕುಟುಂಬಗಳಿಗೆ ತೊಂದರೆಯಾಗುತ್ತಿದೆ. ಗ್ಲೋಬಲ್ ವಾರ್ಮಿಂಗ್‌ನಿಂದಾಗಿ ಸಮುದ್ರದ ನೀರಿನಲ್ಲಿ ಕೂಡಾ ತಾಪಮಾನ ಜಾಸ್ತಿಯಾಗಿದ್ದು, ಮೀನುಗಳು ಆಳ ಸಮುದ್ರಕ್ಕೆ ಹೋಗುತ್ತವೆ. ಆಗ ನಮ್ಮ ಲೈಟ್ ಫಿಶಿಂಗ್ ಅನುಕೂಲವಾಗುತ್ತದೆ ಎಂದು ಬಂಗೇರಾ ಹೇಳಿದರು.

ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಗೌರವಾಧ್ಯಕ್ಷ ಬಾಬು ಕುಬಾಲ ಕುಮಟಾ, ಅಧ್ಯಕ್ಷ ಗುರುದಾಸ ಬಂಗೇರ ಮಲ್ಪೆ, ಪ್ರಧಾನ ಕಾರ್ಯದರ್ಶಿ ರಮೇಶ ಕುಂದರ್ ಗಂಗೊಳ್ಳಿ, ಬಾಷಾ ಅಹಮ್ಮದ್ ಹೊನ್ನಾವರ, ಕೃಷ್ಣ ಎಸ್. ಸುವರ್ಣ ಮಲ್ಪೆ, ಅಣ್ಣಪ್ಪ ಖಾರ್ವಿ ಗಂಗೊಳ್ಳಿ, ಗೋಪಾಲ ಮೊಗೇರ, ಜಟಕಾ ಮೊಗೇರ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು
ಸಮಸ್ಯೆ ಬಗೆ ಹರಿಸದಿದ್ದರೇ ತೀವ್ರ ಹೋರಾಟ