ಒಳ ಮೀಸಲಾತಿ ಜಾರಿ ಬಗ್ಗೆ ಸ್ಪಷ್ಟಪಡಿಸದಿದ್ದರೆ ಹೋರಾಟ

KannadaprabhaNewsNetwork | Published : Dec 15, 2024 2:01 AM

ಸಾರಾಂಶ

ಚಿತ್ರದುರ್ಗ: ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ನಾವು ಬದ್ಧರಾಗಿದ್ದೇವೆ ಎಂಬುದನ್ನು ಮುಖ್ಯಮಂತ್ರಿ, ಸಚಿವರು ಹೇಳುವ ಮೂಲಕ ಸ್ಪಷ್ಟಪಡಿಸಬೇಕು. ಇಲ್ಲದಿದ್ದಲ್ಲಿ ಆಂದೋಲನ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.

ಚಿತ್ರದುರ್ಗ: ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ನಾವು ಬದ್ಧರಾಗಿದ್ದೇವೆ ಎಂಬುದನ್ನು ಮುಖ್ಯಮಂತ್ರಿ, ಸಚಿವರು ಹೇಳುವ ಮೂಲಕ ಸ್ಪಷ್ಟಪಡಿಸಬೇಕು. ಇಲ್ಲದಿದ್ದಲ್ಲಿ ಆಂದೋಲನ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯಿಂದ ಸುಪ್ರೀಂಕೋರ್ಟ್ ಆದೇಶದನ್ವಯ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗಾಗಿ ಶನಿವಾರ ಆಯೋಜಿಸಿದ್ದ ಪ್ರಥಮ ರಾಜ್ಯಮಟ್ಟದ ಮಾದಿಗ ವಕೀಲರ ಬೃಹತ್ ಸಮಾವೇಶದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ನಮ್ಮ ಸಮುದಾಯದ ಮುಖಂಡರು ಸುದ್ದಿಗೋಷ್ಠಿಗಳಲ್ಲಿ ಹೇಳಿಕೆ ನೀಡಿದರೆ ಸಮುದಾಯಕ್ಕೆ ನಂಬಿಕೆ ಬರಲಾರದು. ಆದರೆ ಸದನದಲ್ಲಿ ಸಚಿವರು, ಮುಖ್ಯಮಂತ್ರಿ ಒಂದು ಮಾತು ಹೇಳಿದರೆ ನಮಗೆ ವಿಶ್ವಾಸ ಮೂಡಲಿದೆ. ಈವರೆಗೆ ನಡೆದ ಒಳ ಮೀಸಲಾತಿ ಹೋರಾಟದಲ್ಲಿ ನಮ್ಮವರು ಏಳು ಮಂದಿ ಮೃತಪಟ್ಟಿದ್ದು, ಆ ಸಂಖ್ಯೆ ಮತ್ತೆ ಹೆಚ್ಚಬಾರದು. ಅದಕ್ಕಾಗಿ ಇಷ್ಟು ದಿನದೊಳಗೆ ಜಾರಿಗೊಳಿಸುವ ಕುರಿತು ದೃಢ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.

ಸದನದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮೀಸಲಾತಿ ಕುರಿತು ದನಿ ಎತ್ತಿದರೆ, ಅದಕ್ಕೆ ದನಿಗೂಡಿಸಬೇಕಿದ್ದ ಸಮಾಜದ ಚುನಾಯಿತ ಜನ ಪ್ರತಿನಿಧಿಗಳು ಸದನದಲ್ಲಿ ಮೌನ ವಹಿಸಿದ್ದರಿಂದ ನಮ್ಮ ಹೋರಾಟ ಮುಂದುವರೆಸಬೇಕಾಗುತ್ತದೆ. ಇದೇ ಡಿ.16 ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜೀವನಕ್ಕಾಗಿ ವೃತ್ತಿಯಲ್ಲ. ದೇಶಕ್ಕಾಗಿ ದುಡಿದರೆ ಸಮಾಜ ಬದಲಾಗಲಿದೆ. ಸಮಾಜದಲ್ಲಿ ಎಷ್ಟು ಸಂಖ್ಯೆಯಲ್ಲಿ ನೌಕರರಾಗಬೇಕು ಅಂದುಕೊಂಡಿದ್ದೀರೊ ಅಷ್ಟೇ ಪ್ರಮಾಣದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲೂ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

ಕೇಂದ್ರದ ಮಾಜಿ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಒಳ ಮೀಸಲಾತಿ ಇನ್ನು ಎರಡು ತಿಂಗಳೊಳಗೆ ಜಾರಿಯಾಗದಿದ್ದರೆ ಮಹಾರಾಷ್ಟ್ರ, ಓರಿಸ್ಸಾ ಮಾದರಿಯಲ್ಲಿ ಹೋರಾಟ ಮಾಡಲಾಗುವುದು. ಒಂಬತ್ತು ವರ್ಷ ಹರಿಯಾಣದಲ್ಲಿ ಒಳ ಮೀಸಲಾತಿ ಜಾರಿಯಲ್ಲಿತ್ತು. ದೇಶದ ರಾಷ್ಟ್ರೀಯ, ರಾಜ್ಯ ಪಕ್ಷಗಳಿಂದ ನ್ಯಾಯ ಕೊಡಲು ಸಾಧ್ಯವಾಗಿಲ್ಲ. ಮೀಸಲಾತಿ ಸೌಲಭ್ಯ ಪಡೆದು ಅಧಿಕಾರಕ್ಕೆ ಬಂದವರು ಲಾಠಿ ಏಟು ತಿಂದವರ ದನಿಯಾಗಿ ನಿಲ್ಲಲಿಲ್ಲ ಎಂದರು.

ನ್ಯಾ.ಸಂತೋಷ್ ಹೆಗ್ಡೆ ಅವರು 500ಕ್ಕೂ ಹೆಚ್ಚು ಜಾತಿಗಳು ಓಮೋಜಿನಿಯಸ್ ಎಂದು ಉಲ್ಲೇಖಿಸಿದ್ದಾರೆ. ಇದನ್ನು ಪ್ರಶ್ನಿಸುವ ಕೆಲಸ ಆಗಲಿಲ್ಲ. ಮೆಹ್ತಾ ವರದಿ ತಿರಸ್ಕರಿಸಿದ್ದನ್ನು 2008ರಲ್ಲಿ ಯಾರೂ ಪ್ರಶ್ನಿಸಲಿಲ್ಲ. ಆರ್ಟಿಕಲ್ 341 ರದ್ದು ಮಾಡಿದ ಕಾಂಗ್ರೆಸ್ಸಿಗರಿಂದಲೇ ಕಾಂಗ್ರೆಸ್ಸಿಗರಿಗೆ ಸನ್ಮಾನಿಸಲಾಯಿತು ಎಂದರು.

ಇಂಪೀರಿಯಲ್ ಡೇಟಾ ಬಗ್ಗೆ ಮಾಹಿತಿ ಇಲ್ಲದೆ ನರೇಂದ್ರಸ್ವಾಮಿ ಮೂರ್ಖರಂತೆ ಮಾತನಾಡಿದ್ದಾರೆ. 220 ಮಂದಿ ಎಂಎಲ್‍ಎಗಳು ಬದುಕಿದ್ದಾರೋ, ಸತ್ತಿದ್ದಾರೋ. ಮಾದಿಗರ ವಿರುದ್ಧ ಏನು ಮಾತನಾಡಿದರೂ ನಡೆಯುತ್ತದೆ ಎಂಬ ಭಾವನೆ ಇದೆ. ವೇದಿಕೆಗೆ ಸೀಮಿತವಾಗಿ ಹುಲಿ, ಸಿಂಹವೆಂದು ಘರ್ಜಿಸುವವರು ಹೋರಾಟಗಾರರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಹುಜನ ಚಳವಳಿಗಾರ ಮಾರಸಂದ್ರ ಮುನಿಯಪ್ಪ ಮಾತನಾಡಿ, ಒಳಮೀಸಲಾತಿ ವಿಚಾರದಲ್ಲಿ ಸರ್ಕಾರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಸುಪ್ರೀಂಕೋರ್ಟ್‌ಗೂ ಬೆಲೆ ಕೊಡದೆ ಉಪ ಚುನಾವಣೆ ಕಾರಣ ನೀಡಿ ತುರ್ತು ಸಂಪುಟದಲ್ಲಿ ಚರ್ಚೆ ನಡೆಸಿ ಮತ್ತೊಂದು ಆಯೋಗ ರಚಿಸುವ ಅಗತ್ಯವಿರಲಿಲ್ಲ ಎಂದರು.

ಒಳಮೀಸಲಾತಿ ಬಗ್ಗೆ ಸಿದ್ದರಾಮಯ್ಯನವರು ಭರವಸೆ ನೀಡಿ ಒಂದೂವರೆ ವರ್ಷವಾದರೂ ಜಾರಿ ಆಗಲಿಲ್ಲ. ಬಿಜೆಪಿ, ಜಾರಿ ಮಾಡಲಿಲ್ಲ. ದಳ ಅದರ ಕುರಿತು ಚಕಾರವೇ ಎತ್ತಲಿಲ್ಲ. ಎಲ್ಲ ಸಮುದಾಯ ಸೇರಿ 10 ಪರ್ಸೆಂಟ್ ಬೇರೆಯವರು ಪಡೆಯುತ್ತಿದ್ದಾರೆ. ವಕೀಲರು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಎಂದರು.

ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಎಸ್.ಅರುಣಕುಮಾರ್ ಮಾತನಾಡಿ, ಇಂಪೀರಿಯಲ್ ಡಾಟಾ ಸದಾಶಿವ ಆಯೋಗದ ವರದಿಯೇ ಸಾಕು. ಆಯೋಗ ರಚಿಸಿದೆಯೇ ಹೊರತು ಅಧಿಕಾರ ವಹಿಸಿಕೊಂಡಿಲ್ಲ. ಒಳಮೀಸಲಾತಿ ಸಂಬಂಧ ಒಪ್ಪಿಗೆ ಇದೆ ಎಂದು ಪ್ರಣಾಳಿಕೆ ಹೇಳಿದರೂ ಕಾಂಗ್ರೆಸ್ ಮತ್ತು ಬಿಜೆಪಿ ಒಳಮೀಸಲಾತಿ ಪರ ಇವೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ ಎಂದರು.

ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಸಿ.ಶ್ಯಾಮ್‍ಪ್ರಸಾದ್, ಹಿರಿಯ ವಕೀಲ ಎಸ್.ಮಾರಪ್ಪ, ವೇದಿಕೆ ಪ್ರಧಾನ ಕಾರ್ಯದರ್ಶಿ ಬೂದಿತಿಟ್ಟುರಾಜೇಂದ್ರ, ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ವಿಜಯ್‍ಕುಮಾರ್, ಹಿರಿಯ ವಕೀಲರಾದ ಬೀಸ್ನಹಳ್ಳಿ ಜಯಪ್ಪ, ಎಂ.ದಾಸಯ್ಯ, ಶಿವಕುಮಾರ್ ಎಂ.ಬೆಳ್ತೂರು, ಮಾಳಪ್ಪ ಕುರ್ಕಿ, ಎಂ.ಆರ್.ಸುರೇಂದ್ರಕುಮಾರ್, ಟಿ.ಹನುಮಂತಪ್ಪ, ಜಿ.ಕೆ.ಮಲ್ಲಿಕಾರ್ಜುನ್, ಕುಮಾರಪ್ಪ, ಎನ್.ಚಂದ್ರಪ್ಪ, ಚಂದ್ರಸೇನಾ ಸಾಗರ್, ನರಹರಿ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ವಕೀಲರು ತಮಟೆ ಕಲಾತಂಡದೊಂದಿಗೆ ಒಳಮೀಸಲಾತಿ ಘೋಷಣೆ ಮೊಳಗಿಸುತ್ತಾ ರಂಗಮಂದಿರದಿಂದ ಅಂಬೇಡ್ಕರ್ ವೃತ್ತ, ಪ್ರವಾಸಿ ಮಂದಿರ, ಡೀಸಿ ವೃತ್ತ, ಮದಕರಿ ಸರ್ಕಲ್ ಮಾರ್ಗವಾಗಿ ಕಾಲ್ನಡಿಗೆ ಜಾಥಾ ನಡೆಸಿದರು.

Share this article