ಚಿಕ್ಕತುಮಕೂರು ಕೆರೆಯಲ್ಲಿ ಮೀನುಗಳ ಮಾರಣಹೋಮ

KannadaprabhaNewsNetwork |  
Published : May 20, 2024, 01:37 AM ISTUpdated : May 20, 2024, 12:30 PM IST
ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕತುಮಕೂರು ಕೆರೆಯಲ್ಲಿ ಮೀನುಗಳ ಮಾರಣ ಹೋಮ. | Kannada Prabha

ಸಾರಾಂಶ

ಕೆರೆಗಳಲ್ಲಿನ ಮೀನುಗಳ ಸಾವು ಸುತ್ತಮುತ್ತಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ, ಇಂದು ಮೀನುಗಳ ಸಾವು ನಂತರ ಮನುಷ್ಯ ಸಾವು ಎಂಬ ಮಾತುಗಳು ಸ್ಥಳೀಯರಿಂದ ಕೇಳಿ ಬರುತ್ತಿವೆ. ಇದೇ ವಿಚಾರ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್‌ ಆಗಿ ಹರಿದಾಡುತ್ತಿದೆ.

 ದೊಡ್ಡಬಳ್ಳಾಪುರ :  ತಾಲೂಕಿನ ಚಿಕ್ಕತುಮಕೂರು ಕೆರೆಯಲ್ಲಿ ಅಪಾರ ಪ್ರಮಾಣದ ಮೀನುಗಳು ಸಾವನ್ನಪ್ಪಿವೆ. ಕಳೆದ ಕೆಲ ದಿನಗಳಿಂದ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಸುರಿದ ಮಳೆ ಪರಿಣಾಮ ಕೆರೆಗೆ ಹರಿದು ಬಂದ ನೀರಿನ ಜೊತೆಗೆ ಕೈಗಾರಿಕೆಯ ರಾಸಾಯನಿಕ ತ್ಯಾಜ್ಯವೂ ಕೆರೆಯ ಒಡಲು ಸೇರಿರುವುದು ಘಟನೆಗೆ ಕಾರಣ ಎನ್ನಲಾಗಿದೆ.

ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಚಿಕ್ಕತುಮಕೂರು ಕೆರೆಗೆ ದೊಡ್ಡಬಳ್ಳಾಪುರ ನಗರದ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ನೀರು ಶುದ್ಧೀಕರಣವಾಗದೇ ನೇರವಾಗಿ ಬಂದು ಸೇರುತ್ತಿದೆ. ಕೆರೆಗಳಲ್ಲಿನ ಮೀನುಗಳ ಸಾವಿಗೆ ಇದೇ ಕಾರಣ ಇರಬಹುದು. ಕೆಲವು ದಿನಗಳ ಹಿಂದೆಯಷ್ಟೇ ನಾಗರಕೆರೆಯಲ್ಲೂ ಮೀನುಗಳು ಸಾವನ್ನಪ್ಪಿದ್ದು, ಈಗ ಚಿಕ್ಕತುಮಕೂರು ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿರುವ ಘಟನೆ ನಡೆದಿರುವುದು ಅರ್ಕಾವತಿ ನದಿ ಪಾತ್ರದ ಕೆರೆಗಳು ವಿಷಕಾರಿಯಾಗಿವೆ ಎಂಬುದಕ್ಕೆ ಪುಷ್ಟಿ ನೀಡಿವೆ.

ಹೋರಾಟಕ್ಕೆ ಕಿಮ್ಮತ್ತಿಲ್ಲ; ಸಮಸ್ಯೆ ಬಗೆಹರಿದಿಲ್ಲ!

ಚಿಕ್ಕತುಮಕೂರು ಮತ್ತು ದೊಡ್ಡತುಮಕೂರು ಕೆರೆಗೆ ಹರಿದು ಬರುತ್ತಿರುವ ದೊಡ್ಡಬಳ್ಳಾಪುರ ನಗರದ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಿಂದ ಬರುವ ವಿಷಕಾರಿ ನೀರನ್ನು ಶುದ್ಧೀಕರಿಸಿದ ನಂತರವೇ ಕೆರೆಗಳಿಗೆ ಬಿಡಬೇಕೆಂದು ಒತ್ತಾಯಿಸಿ, ಕಳೆದ ಕೆಲ ವರ್ಷಗಳಿಂದ ಹೋರಾಟವನ್ನು ಸ್ಥಳೀಯ ರೈತರು ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಅರ್ಕಾವತಿ ನದಿ ಹೋರಾಟ ಸಮಿತಿ ತೀವ್ರ ಸ್ವರೂಪದ ಹೋರಾಟವನ್ನು ಮಾಡಿಕೊಂಡು ಬರುತ್ತಿದೆ. ಈಗಾಗಲೇ ಅಂತರ್ಜಲ ನೀರು ಕಲುಷಿತಗೊಂಡಿದ್ದು, ಮುಂದಿನ ಪೀಳಿಗೆಯ ಜನರಿಗೆ ಶುದ್ಧ ನೀರು ಸಿಗಬೇಕೆನ್ನುವ ಕಾರಣಕ್ಕೆ ಹೋರಾಟ ಮಾಡಲಾಗುತ್ತಿದೆ. ಆದರೆ ಈ ಹೋರಾಟಕ್ಕೆ ಅಧಿಕಾರಶಾಹಿಯು ಯಾವುದೇ ಪೂರಕ ಸ್ಪಂದನೆ ನೀಡಿಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಇದು ಸಮಸ್ಯೆಯ ತೀವ್ರತೆ ಹೆಚ್ಚಲು ಕಾರಣವಾಗಿದೆ.

ಇದೇ ವೇಳೆ ಕೆರೆಗಳಲ್ಲಿನ ಮೀನುಗಳ ಸಾವು ಸುತ್ತಮುತ್ತಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ, ಇಂದು ಮೀನುಗಳ ಸಾವು ನಂತರ ಮನುಷ್ಯ ಸಾವು ಎಂಬ ಮಾತುಗಳು ಸ್ಥಳೀಯರಿಂದ ಕೇಳಿ ಬರುತ್ತಿವೆ. ಇದೇ ವಿಚಾರ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್‌ ಆಗಿ ಹರಿದಾಡುತ್ತಿದೆ.

ಮಳೆ ಬಂದಾಗ ತ್ಯಾಜ್ಯ ಬಿಡುವ ಕೈಗಾರಿಕೆಗಳು:

ಬಾಶೆಟ್ಟಿಹಳ್ಳಿಯ ಕೆಲವು ಕೈಗಾರಿಕೆಗಳ ಮಾಲೀಕರು ಮಳೆ ಬರುವುದನ್ನೇ ಕಾಯುತ್ತಾರೆ. ಅದಕ್ಕೆ ಕಾರಣ ಕೈಗಾರಿಕೆಗಳಲ್ಲಿನ ತ್ಯಾಜ್ಯ ನೀರು ಚರಂಡಿಗಳಿಗೆ ಹರಿಸಲು ಮಳೆ ಉತ್ತಮ ಅವಕಾಶ ಮಾಡಿಕೊಡುತ್ತದೆ. ಮಳೆ ನೀರು ಹರಿಯುವ ವೇಳೆ ತ್ಯಾಜ್ಯ ನೀರನ್ನೂ ಹರಿವಿನೊಂದಿಗೆ ಸೇರಿಸಿ ಜಾಣ ಅಕ್ರಮ ಎಸಗುವ ಕೈಗಾರಿಕಾ ಘಟಕಗಳ ವಿರುದ್ಧ ಕ್ರಮ ಅಗತ್ಯ ಎಂಬ ಕೂಗು ಕೇಳಿಬಂದಿದೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌