ಕನ್ನಡಪ್ರಭ ವಾರ್ತೆ ಗೋಕರ್ಣ
ಪ್ರಸ್ತುತ ಇರುವ ರಸ್ತೆಯಂಚಿನ ಮೀನು ಮಾರಾಟ ವ್ಯವಸ್ಥೆಯಿಂದ ವಾಹನ ದಟ್ಟಣೆಯಾಗುತ್ತಿದೆ. ಇದರೆ ಜೊತೆ ರಸ್ತೆ ಅಂಚಿನಲ್ಲಿ ಮಳೆ, ಬಿಸಲು ಎನ್ನದೆ ಮಹಿಳೆಯರು ಕುಳಿತುಕೊಂಡು ವ್ಯಾಪಾರ ನಡೆಸುವುದು ಕಷ್ಟ. ಈ ಎಲ್ಲಾ ತೊಂದರೆ ತಪ್ಪಿಸಲು ನೂತನವಾಗಿ ನಿರ್ಮಿಸಲಾದ ಮೀನು ಮಾರುಕಟ್ಟೆಗೆ ಸ್ಥಳಾಂತರಿಸುವುದು ಅಗತ್ಯವಾಗಿದ್ದು, ಇದಕ್ಕೆ ಸಹಕರಿಸುವಂತೆ ಶಾಸಕರು ಮೀನುಗಾರರ ಪ್ರಮುಖರ ಬಳಿ ಕೋರಿದರು.
ಆದರೆ ಬಸ್ ನಿಲ್ದಾಣ ಹಾಗೂ ಪೇಟೆಗೆ ಹತ್ತಿರವಾದ ಈಗಿರುವ ಸ್ಥಳದಲ್ಲೇ ಮೀನು ಮಾರಲು ಅವಕಾಶ ನೀಡಿ ಎಂದು ಮೀನುಗಾರರ ಪ್ರಮುಖರು ಪಟ್ಟು ಹಿಡಿದರು. ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.ಶಾಸಕರು ಮಾತನಾಡಿ, ಪ್ರವಾಸಿ ತಾಣದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಸಂಚಾರ ವ್ಯವಸ್ಥೆ ಬದಲಿಸುವುದು ಮತ್ತಿತರ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದ್ದು, ಇದಕ್ಕೆ ಮೀನು ಮಾರುಕಟ್ಟೆ ಸ್ಥಳಾಂತರಿಸಲೇಬೇಕಾಗುತ್ತದೆ. ಮೀನು ಮಾರಾಟ ಮಹಿಳೆಯರೂ ಬಯಲಲ್ಲಿನಲ್ಲಿ ಕುಳಿತುಕೊಳ್ಳುವುದರ ಬದಲು ಸರಿಯಾದ ಮೂಲಭೂತ ವ್ಯವಸ್ಥೆ ಇರುವಲ್ಲಿ ವಹಿವಾಟು ನಡೆಸಿದರೆ ಅನುಕೂಲ ಎಂದರು.ಮೀನು ಮಾರುಕಟ್ಟೆ ತುಂಬಾ ಸಂಕುಚಿತ ಪ್ರದೇಶದಲ್ಲಿರುವುದರಿಂದ ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ಅಸೌಕರ್ಯದ ಕುರಿತು ಸವಿವರವಾಗಿ ತಿಳಿಸಿದರು.
ನಂತರ ನೂತನ ಮೀನುಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆದು ಒಟ್ಟು 60ಕ್ಕೂ ಹೆಚ್ಚು ಮೀನುಗಾರರು ನಿತ್ಯ ವಹಿವಾಟು ನಡೆಸುತ್ತಾರೆ, ಆದರೆ ೪೦ ಜನರು ಕುಳಿತುಕೊಳ್ಳುವ ವ್ಯವಸ್ಥೆ ಇದೆ ಎಂಬ ಮಾತು ಕೇಳಿಬಂತು. ನಂತರ ಇಪತ್ತು ಜನರಿಗೆ ಕುಳಿತುಕೊಳ್ಳಲು ಅಲ್ಲೆ ವ್ಯವಸ್ಥೆ ಕಲ್ಪಿಸಲು ಶಾಸಕರು ಸೂಚಿಸಿದರು.ಅಂತಿಮವಾಗಿ ಹದಿನೈದು ದಿನದೊಳಗೆ ನೂತನ ಮೀನು ಮಾರುಕಟ್ಟೆಯಲ್ಲಿ ಕುಡಿಯುವ ನೀರು ಶೌಚಾಲಯ ಹಾಗೂ ೨೦ ಜನರಿಗೆ ಕುಳಿತುಕೊಳ್ಳಲು ಛಾವಣಿ ಕಲ್ಪಿಸಲು ತಿಳಿಸಿದ್ದು, ನಂತರ ಅಲ್ಲೇ ವಹಿವಾಟು ನಡೆಸುವಂತೆ ತಿಳಿಸಲಾಯಿತು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ, ತಹಶೀಲ್ದಾರ ಕೃಷ್ಣ ಕಾಮಕರ, ತಾಪಂ ಕಾರ್ಯನಿರ್ವಹಣಾಧಿಕಾರಿ ಆರ್.ಎಲ್. ಭಟ್, ಪಿಐ ಶ್ರೀಧರ ಎಸ್.ಆರ್., ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರ್ ಕಲ್ಪನಾ ವಾಗ್ಮೋರೆ, ಮೀನುಗಾರಿಕೆ, ಸಿ.ಆರ್.ಝಡ್ ಹಾಗೂ ಇತರೆ ಇಲಾಖೆ ಅಧಿಕಾರಿಗಳು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಈ ಭಾಗದ ಮೀನುಗಾರ ಪ್ರಮುಖರು ಪಾಲ್ಗೊಂಡಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿ.ಎ. ಪಟಗಾರ ನಿರ್ವಹಿಸಿದರು.