ಉಪ್ಪಿನಂಗಡಿ ನದಿ ಮೀನು ದೋಚುವ ತಂಡ ಸಕ್ರಿಯ

KannadaprabhaNewsNetwork |  
Published : Nov 06, 2025, 03:00 AM IST
ಮತ್ಸ÷್ಯ  ಸಂಪತ್ತನ್ನು ಕೊಳ್ಳೆ ಹೊಡೆಯುವ ತಂಡ ಉಪ್ಪಿನಂಗಡಿಯಲ್ಲಿ ಬೀಡು ಬಿಟ್ಟಿದ್ದು, | Kannada Prabha

ಸಾರಾಂಶ

ನದಿಯ ನೀರಿನ ಶುದ್ಧತೆಗೆ ಕಾರಣೀಕೃತವಾಗಿರುವ ಮತ್ಸ್ಯ ಸಂಪತ್ತು ಕೊಳ್ಳೆ ಹೊಡೆಯುವ ತಂಡ ಉಪ್ಪಿನಂಗಡಿಯಲ್ಲಿ ಬೀಡು ಬಿಟ್ಟಿದ್ದು, ನಿತ್ಯ ಸಾವಿರಾರು ಮೀನುಗಳು ನದಿಯಿಂದ ಖಾಲಿಯಾಗತೊಡಗಿವೆ.

ಉಪ್ಪಿನಂಗಡಿ: ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಕೊಳಚೆ ನೀರು ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಸೇರುತ್ತಿದೆ ಎಂಬ ಅಧಿಕೃತ ವರದಿಗಳ ನಡುವೆ ನದಿಯ ನೀರಿನ ಶುದ್ಧತೆಗೆ ಕಾರಣೀಕೃತವಾಗಿರುವ ಮತ್ಸ್ಯ ಸಂಪತ್ತು ಕೊಳ್ಳೆ ಹೊಡೆಯುವ ತಂಡ ಉಪ್ಪಿನಂಗಡಿಯಲ್ಲಿ ಬೀಡು ಬಿಟ್ಟಿದ್ದು, ನಿತ್ಯ ಸಾವಿರಾರು ಮೀನುಗಳು ನದಿಯಿಂದ ಖಾಲಿಯಾಗತೊಡಗಿವೆ.

ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳೆರಡು ಸಂಗಮಿಸುವ ಉಪ್ಪಿನಂಗಡಿಯಲ್ಲಿ ಪವಿತ್ರ ತೀರ್ಥಕ್ಷೇತ್ರವಾಗಿರುವ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯವಿದೆ. ಗತಿಸಿದವರಿಗೆ ಸದ್ಗತಿ ಬಯಸಿ ನಡೆಸುವ ಪಿಂಡಪ್ರದಾನಾದಿ ಕಾರ್ಯಗಳಿಗೆ ಈ ನದಿಯ ನಂಟಿದೆ. ನದಿಯಲ್ಲಿ ಪವಿತ್ರ ತೀರ್ಥಸ್ನಾನ ನಡೆಯುತ್ತದೆ.

ಆದರೆ ನದಿಯ ಉದ್ದಗಲಕ್ಕೂ ಬೆಳೆಯುತ್ತಿರುವ ಪಟ್ತಣವಾದ ಉಪ್ಪಿನಂಗಡಿಯ ವಾಣಿಜ್ಯ ಮಳಿಗೆಗಳ, ವಸತಿ ಸಮುಚ್ಚಯಗಳ ತ್ಯಾಜ್ಯ ನೀರು ನೇರವಾಗಿ ನದಿ ಸೇರುತ್ತಿದ್ದು, ನದಿ ನೀರು ಕಲುಷಿತಗೊಳ್ಳಲು ಪ್ರಧಾನ ಕಾರಣವಾಗುತ್ತಿದೆ. ಬಿಳಿಯೂರು ಎಂಬಲ್ಲಿ ಕಟ್ಟಲಾದ ಅಣೆಕಟ್ಟಿನಿಂದಾಗಿ ಹಿನ್ನೀರು ಸಂಗ್ರಹಿಸಲ್ಪಟ್ಟಾಗ ನದಿಯ ಹಿನ್ನೀರು ಅಕ್ಷರಶಃ ಕೊಳಚೆ ನೀರಾಗಿ ದುರ್ನಾತ ಬೀರುವ ಮಟ್ಟಿಗೆ ನೀರು ಮಲಿನವಾಗಿರುತ್ತದೆ.

ಈ ಸೂಕ್ಷ್ಮ ಸ್ಥಿತಿಯಲ್ಲಿ ನದಿ ನೀರಿನಲ್ಲಿನ ಕಲ್ಮಶಗಳನ್ನು ತಿಂದು ನದಿಯ ನೀರನ್ನು ತಕ್ಕ ಮಟ್ಟಿಗೆ ಸ್ವಚ್ಚವಾಗಿರಿಸುವಲ್ಲಿ ನದಿಯ ಮೀನುಗಳು ಪ್ರಧಾನ ಪಾತ್ರವಹಿಸುತ್ತದೆ. ಇದೇ ಕಾರಣಕ್ಕೆ ಎರಡು ವರ್ಷಗಳ ಹಿಂದೆ ಬೆಳ್ತಂಗಡಿ ಶಾಸಕರು ನೇತ್ರಾವತಿ ನದಿಗೆ ಎರಡು ಲಕ್ಷ ಮೀನಿನ ಮರಿಗಳನ್ನು ಬಿಟ್ಟು ನದಿಯಲ್ಲಿ ಮತ್ಸ್ಯ ಸಂಪತ್ತು ಹೆಚ್ಚಿಸಲು ಕ್ರಮ ಕೈಗೊಂಡಿದ್ದರು. ಕಳೆದ ಬೇಸಗೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಆಡಳಿತವೂ ಕೂಡಾ ನದಿಯಲ್ಲಿ ಮೀನು ಹಿಡಿಯುವ ಕೃತ್ಯ ನಿಷೇಧಿಸಿತ್ತು.

ಆದರೆ ಈ ಬಾರಿ ಮತ್ತೆ ಹಲವಾರು ತೆಪ್ಪಗಳೊಂದಿಗೆ ಉಪ್ಪಿನಂಗಡಿಗೆ ಲಗ್ಗೆ ಇಟ್ಟಿರುವ ಹೊರ ಜಿಲ್ಲೆಯ ಮೀನುಗಾರ ಕುಟುಂಬಗಳು ಅತೀ ಸಣ್ಣ ಗಾತ್ರದಿಂದ ಹಿಡಿದು ದೊಡ್ಡ ಗಾತ್ರದ ವರೆಗಿನ ಮೀನುಗಳನ್ನು ದೊಡ್ದ ದೊಡ್ದ ಬಲೆಗಳನ್ನು ಬಳಸಿ ಹಿಡಿಯತೊಡಗಿದ್ದು, ನದಿಯಲ್ಲಿನ ಮತ್ಸ್ಯ ಸಂಪತ್ತು ಬಲು ಬೇಗನೆ ಕಡಿಮೆಯಾಗುವ ಭೀತಿ ಮೂಡಿದೆ. ತನ್ಮೂಲಕ ನದಿ ನೀರಿನ ಶುದ್ದತೆಗೂ ಸಂಚಕಾರವಾಗುವ ಭೀತಿ ಕಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು , ಉಪ್ಪಿನಂಗಡಿಯಲ್ಲಿ ಒಳಚರಂಡಿ ವ್ಯವಸ್ಥೆ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ಘಟಕ ಇಲ್ಲದಿರುವುದರಿಂದ ತ್ಯಾಜ್ಯ ನೀರೆಲ್ಲಾ ನದಿಯ ಒಡಲು ಸೇರುವುದು ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿ ನದಿಯಲ್ಲಿನ ಮೀನುಗಳೇ ನದಿ ನೀರಿನ ಸ್ವಚ್ಚತೆಗೆ ಆಶಾ ಕಿರಣವಾಗಿದ್ದು, ಅದರ ರಕ್ಷಣೆ ಪ್ರಸಕ್ತ ಸ್ಥಿತಿಯಲ್ಲಿ ಅತ್ಯಗತ್ಯವಾಗಿದ್ದು, ಈ ಕಾರಣ ಕಳೆದ ಬಾರಿಯಂತೆ ಈ ಬಾರಿಯೂ ನದಿಯಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಲು ಪಂಚಾಯಿತಿ ಆಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. --------------------------

ಧಾರ್ಮಿಕ, ಪ್ರಾಕೃತಿಕವಾಗಿಯೂ ಮಹತ್ವ ಪಡೆದಿರುವ ಉಭಯ ನದಿಗಳ ಸಂಗಮ ತಾಣ ಉಪ್ಪಿನಂಗಡಿಯಲ್ಲಿ ನದಿಯ ನೀರಿನ ಮಾಲಿನ್ಯ ತಡೆಯಲು ಎಲ್ಲಾ ಬಗೆಯ ಅಗತ್ಯ ಕ್ರಮ ಬೇಕಾಗಿದೆ. ನದಿಯ ಒಡಲಿನಿಂದ ಸಾರಾಸಗಟಾಗಿ ಮೀನುಗಳನ್ನು ದೋಚುವುದು ನದಿ ನೀರಿನ ಶುದ್ಧತೆಯ ವಿಚಾರದಲ್ಲಿ ದುಷ್ಪರಿಣಾಮ ಬೀರಲಿದೆ.

-ಕೈಲಾರ್ ರಾಜಗೋಪಾಲ ಭಟ್‌, ನೆಲಜಲ ಸಂರಕ್ಷಣಾ ಸಮಿತಿಯ ಅಧ್ಯಕ್ಷ .

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ
ರಾಜಕೀಯಕ್ಕಾಗಿ ಪಿಣರಾಯಿ ಮಾತು: ಪ್ರಿಯಾಂಕ್‌ ಆಕ್ರೋಶ