ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ರಾಜು ತಾಂಡೇಲ ನಿಧನ

KannadaprabhaNewsNetwork | Published : Aug 21, 2024 12:33 AM

ಸಾರಾಂಶ

ರಾಜು ತಾಂಡೇಲ ಅವರು ಗೋವಾದಿಂದ ಕಾರಿನಲ್ಲಿ ಕಾರವಾರದತ್ತ ಆಗಮಿಸುತ್ತಿದ್ದಾಗ ರಾತ್ರಿ 1.30ರ ಸುಮಾರಿಗೆ ತೀವ್ರ ಹೃದಯಾಘಾತಕ್ಕೊಳಗಾದರು. ಕೂಡಲೇ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು.

ಕಾರವಾರ: ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ, ಚಿತ್ತಾಕುಲ ಗ್ರಾಪಂ ಅಧ್ಯಕ್ಷ ಹಾಗೂ ಪರ್ಸೈನ್ ಬೋಟ್ ಯುನಿಯನ್ ಅಧ್ಯಕ್ಷ ರಾಜು ತಾಂಡೇಲ (55) ಹೃದಯಾಘಾತದಿಂದ ಸೋಮವಾರ ತಡರಾತ್ರಿ ನಿಧನರಾದರು. ಗೋವಾದಿಂದ ಕಾರಿನಲ್ಲಿ ಕಾರವಾರದತ್ತ ಆಗಮಿಸುತ್ತಿದ್ದಾಗ ರಾತ್ರಿ 1.30ರ ಸುಮಾರಿಗೆ ತೀವ್ರ ಹೃದಯಾಘಾತಕ್ಕೊಳಗಾದರು. ಕೂಡಲೇ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಪತ್ನಿ, ಮೂವರು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ ನಗರದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಸದಾಶಿವಗಡ ಅಜಾದ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ ಚಿತ್ತಾಕುಲ ಸೀಬರ್ಡ್‌ ಕಾಲನಿಯ ಸ್ವಗೃಹಕ್ಕೆ ಕೊಂಡೊಯ್ದು ಅಂತಿಮ ವಿಧಿ ವಿಧಾನ ಪೂರೈಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮೀನು ಮಾರುಕಟ್ಟೆ ಬಂದ್‌: ಮೀನುಗಾರರ ಮುಖಂಡರಾಗಿದ್ದ ರಾಜು ತಾಂಡೇಲ ನಿಧನರಾದ ಹಿನ್ನೆಲೆಯಲ್ಲಿ ಕಾರವಾರದ ಮೀನು ಮಾರುಕಟ್ಟೆಯನ್ನು ಬಂದ್ ಮಾಡಿ ಗೌರವ ಸಲ್ಲಿಸಲಾಯಿತು. ಜಿಲ್ಲಾ ಆಸ್ಪತ್ರೆಯಿಂದ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಸಹಸ್ರಾರು ಜನರು ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಮೀನುಗಾರಿಕಾ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್, ವಿಧಾನಪರಿಷತ್ ಶಾಸಕ ಗಣಪತಿ ಉಳ್ವೇಕರ್, ಮಾಜಿ ಸಚಿವ ಆನಂದ ಅಸ್ನೋಟಿಕರ್ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.

ರಾಜು ತಾಂಡೇಲ ಸಾವಿನಿಂದ ಕರಾವಳಿಯಲ್ಲಿ ಎದ್ದ ದುಃಖದ ಅಲೆ

ಕಾರವಾರ: ರಾಜು ತಾಂಡೇಲ, ಮೀನುಗಾರರ ಧ್ವನಿಯಾಗಿ, ಕೊಡುಗೈ ದಾನಿಯಾಗಿದ್ದರು. ಅವರ ಅಕಾಲಿಕ ನಿಧನದಿಂದ ಕರಾವಳಿಯಾದ್ಯಂತ ದುಃಖದ ಅಲೆಗಳು ಎದ್ದಿವೆ.ಮೀನುಗಾರರ ಭರವಸೆಯ ವ್ಯಕ್ತಿಯಾಗಿದ್ದ ರಾಜು ತಾಂಡೇಲ, ರಾಜಕೀಯದಲ್ಲಿ ಉನ್ನತ ಸ್ಥಾನಮಾನ ಗಳಿಸಿ, ಜನಮೆಚ್ಚಿದ ನಾಯಕರಾಗಲಿದ್ದಾರೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ಹಠಾತ್ತಾಗಿ ನಿರ್ಗಮಿಸಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗದಂತಾಗಿದೆ.

ಕಾರವಾರದಿಂದ ಭಟ್ಕಳ ತನಕ ಮೀನುಗಾರರಿಗೆ ಸಂಬಂಧಿಸಿದ ಯಾವುದೆ ಕಾರ್ಯಕ್ರಮ ಇರಲಿ, ಯಾರೇ ತೊಂದರೆಯಲ್ಲಿ ಇರಲಿ ಅವರಿಗೆಲ್ಲ ರಾಜು ತಾಂಡೇಲ ಆಸರೆಯಾಗುತ್ತಿದ್ದರು. ಬರಿಗೈಯಲ್ಲಿ ಕಳಿಸುವ ಜಾಯಮಾನವೇ ಅವರದ್ದಾಗಿರಲಿಲ್ಲ.

ರಾಜು ತಾಂಡೇಲ ಅವರ ಬಾಲ್ಯದ ಬದುಕು ಕಷ್ಟಕರವಾಗಿತ್ತು. ಶಿಕ್ಷಣವನ್ನು ಮುಂದುವರಿಸಲಾರದೆ ಮತ್ಸ್ಯೋದ್ಯಮಕ್ಕೆ ಬಂದರು. ಬೋಟ್‌ಗಳನ್ನು ಖರೀದಿಸಿ ಅದರಲ್ಲೇ ದುಡಿಮೆ ಆರಂಭಿಸಿ ನೆಲೆ ನಿಂತರು. ಶಿಕ್ಷಣದ ಮಹತ್ವ ಅರಿತಿದ್ದ ಅವರು ತಮಗೆ ಉನ್ನತ ಶಿಕ್ಷಣ ಸಾಧ್ಯವಾಗಲಿಲ್ಲ. ಈಗಿನ ಮಕ್ಕಳಾದರೂ ಓದಲಿ ಎಂದು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದರು.

ರಾಜು ತಾಂಡೇಲ ನಿಧನದ ಸುದ್ದಿ ಹರಡುತ್ತಿದ್ದಂತೆ ಜಿಲ್ಲಾ ಆಸ್ಪತ್ರೆಯ ಎದುರು ದುಃಖ ದುಗುಡದಿಂದ ಸಾಕಷ್ಟು ಜನರು ಸೇರಿದರು. ಅವರ ಪಾರ್ಥಿವ ಶರೀರದ ಮೆರವಣಿಗೆಯಲ್ಲಂತೂ ಇನ್ನೂ ಹೆಚ್ಚಿನ ಜನರು ಸೇರಿದ್ದರು. ಮೀನು ಮಾರುಕಟ್ಟೆ ಬಂದ್ ಮಾಡಲಾಗಿತ್ತು. ಬೋಟ್‌ಗಳು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದವು. ಕೇವಲ ಮೀನುಗಾರರಷ್ಟೇ ಅಲ್ಲ. ಎಲ್ಲ ಸಮಾಜದ ಮುಖಂಡರು, ಜನರು ಶ್ರದ್ಧಾಂಜಲಿ ಸಲ್ಲಿಸಿದರು. ರಾಜು ತಾಂಡೇಲ ಎಲ್ಲ ಸಮಾಜದವರೊಂದಿಗೆ ಅನ್ಯೋನ್ಯವಾಗಿದ್ದರು.

ಅಂತಿಮ ದರ್ಶನಕ್ಕೆ ಬಂದವರೆಲ್ಲರ ಬಾಯಿಂದ ಹೊರಬೀಳುತ್ತಿದ್ದ ಮಾತೆಂದರೆ, ರಾಜು ತಾಂಡೇಲ ಇನ್ನಷ್ಟು, ಮತ್ತಷ್ಟು ವರ್ಷ ಬದುಕಬೇಕಿತ್ತು...

Share this article