ಟೆಂಡರ್ ನೆಪದಲ್ಲಿ ಮೀನುಗಾರರಿಗೆ ಎನ್‌ಒಸಿಗೆ ತೊಂದರೆ: ಹೋರಾಟದ ಎಚ್ಚರಿಕೆ

KannadaprabhaNewsNetwork |  
Published : Oct 10, 2026, 02:00 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಗೋಕರ್ಣದಲ್ಲಿ ಒಟ್ಟು 30 ಪ್ರವಾಸಿ ಬೋಟ್‌ಗಳಿದ್ದು, ಈ ಪೈಕಿ 10 ಬೋಟ್‌ಗಳಿಗೆ ಮಾತ್ರ ಎನ್‌ಒಸಿ ನೀಡಲಾಗಿದೆ. ಉಳಿದ 20 ಬೋಟ್‌ಗಳಿಗೆ ಕಳೆದ ಒಂದು ವರ್ಷದಿಂದ ಅನುಮತಿ ನೀಡದೆ ಮೀನುಗಾರರನ್ನು ಸಂಕಷ್ಟಕ್ಕೆ ದೂಡಲಾಗಿದೆ.

ಕಾರವಾರ: ಗೋಕರ್ಣದಲ್ಲಿ ಪ್ರವಾಸಿ ಬೋಟ್‌ಗಳನ್ನು ನಡೆಸುತ್ತಿರುವ ಸ್ಥಳೀಯ ಮೀನುಗಾರರಿಗೆ ನಿರಾಕ್ಷೇಪಣಾ ಪತ್ರ ನೀಡದೇ ಸತಾಯಿಸಲಾಗುತ್ತಿದೆ ಹಾಗೂ ಅನುಮತಿ ಕೊಡಿಸುವ ನೆಪದಲ್ಲಿ ಮಧ್ಯವರ್ತಿಗಳ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬಾಕಿ ಇರುವ 20 ಬೋಟ್‌ಗಳಿಗೆ ಒಂದು ವಾರದೊಳಗೆ ಎನ್‌ಒಸಿ ನೀಡದಿದ್ದರೆ ಸಂಬಂಧಪಟ್ಟ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸುವುದಾಗಿ ಮೀನುಗಾರ ಮುಖಂಡರು ಎಚ್ಚರಿಕೆ ನೀಡಿದ್ದಾರೆ.ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಬಾವಿ ಅವರು ಮಾತನಾಡಿ, ಮೀನುಗಾರರಿಗೆ ತೊಂದರೆ ನೀಡುತ್ತಿರುವ ಕುರಿತು ವಿರೋಧ ವ್ಯಕ್ತಪಡಿಸಿದರು. ಗೋಕರ್ಣದ ಪ್ರವಾಸೋದ್ಯಮದಲ್ಲಿ ಸ್ಥಳೀಯ ಮೀನುಗಾರರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. 2002ರಿಂದ ಸಣ್ಣ ದೋಣಿಗಳ ಮೂಲಕ ಪ್ರವಾಸಿಗರಿಗೆ ಸೇವೆ ಒದಗಿಸುತ್ತಿದ್ದ ಮೀನುಗಾರರು, ಬಳಿಕ ಬ್ಯಾಂಕ್‌ಗಳಿಂದ ಸಾಲ ಪಡೆದು ಹಾಗೂ ಚಿನ್ನಾಭರಣಗಳನ್ನು ಅಡಮಾನವಿಟ್ಟು ₹15 ಲಕ್ಷದಿಂದ ₹30 ಲಕ್ಷದವರೆಗೆ ಬಂಡವಾಳ ಹೂಡಿ ಸುಸಜ್ಜಿತ ಬೋಟ್‌ಗಳನ್ನು ಖರೀದಿಸಿದ್ದಾರೆ. 2010ರಿಂದ 2024ರ ವರೆಗೆ ಯಾವುದೇ ಸಮಸ್ಯೆಯಿಲ್ಲದೆ ಎನ್‌ಒಸಿ ದೊರೆಯುತ್ತಿತ್ತು. ಆದರೆ 2025ರಿಂದ ಹೊಸ ಟೆಂಡರ್ ಪ್ರಕ್ರಿಯೆಯ ನೆಪದಲ್ಲಿ ಸ್ಥಳೀಯ ಮೀನುಗಾರರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.ಗೋಕರ್ಣದಲ್ಲಿ ಒಟ್ಟು 30 ಪ್ರವಾಸಿ ಬೋಟ್‌ಗಳಿದ್ದು, ಈ ಪೈಕಿ 10 ಬೋಟ್‌ಗಳಿಗೆ ಮಾತ್ರ ಎನ್‌ಒಸಿ ನೀಡಲಾಗಿದೆ. ಉಳಿದ 20 ಬೋಟ್‌ಗಳಿಗೆ ಕಳೆದ ಒಂದು ವರ್ಷದಿಂದ ಅನುಮತಿ ನೀಡದೆ ಮೀನುಗಾರರನ್ನು ಸಂಕಷ್ಟಕ್ಕೆ ದೂಡಲಾಗಿದೆ ಎಂದು ದೂರಿದರು.ಎನ್‌ಒಸಿ ಕೊಡಿಸುವ ನೆಪದಲ್ಲಿ ಶಿರಸಿ ಮೂಲದ ಕಾಂಗ್ರೆಸ್ ಮುಖಂಡರೊಬ್ಬರು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ಪ್ರವಾಸಿಗನಿಂದ 100ರಂತೆ ದಿನಕ್ಕೆ ₹1 ಲಕ್ಷದಿಂದ ₹1.5 ಲಕ್ಷದವರೆಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ. ಹಣ ನೀಡಿದವರಿಗೆ ಮಾತ್ರ ಅನುಮತಿ ದೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರದೀಪ ನಾಯಕ ದೂರಿದರು. ಈ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಮೀನುಗಾರ ಮುಖಂಡ ಗಣಪತಿ ಮಾಂಗ್ರೆ, ಹಿಂದೆ ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಜಲಕ್ರೀಡೆಗಳ ಚಟುವಟಿಕೆಗಳಿಂದ ಮೀನುಗಾರಿಕೆಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿ ಬೋಟ್‌ಗಳ ಉದ್ಯಮ ಸ್ಥಳೀಯರಿಗೆ ಪರ್ಯಾಯ ಜೀವನಾಧಾರವಾಗಿದೆ. ಆದರೆ ಈಗ ಸ್ಥಳೀಯರನ್ನು ಕಡೆಗಣಿಸಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಮೀನುಗಾರ ಮುಖಂಡ ಮಹೇಶ್, ಸ್ಥಳೀಯ ಮೀನುಗಾರರ ಬದುಕಿನೊಂದಿಗೆ ಚೆಲ್ಲಾಟವಾಡುವುದನ್ನು ಸಹಿಸುವುದಿಲ್ಲ. ಒಂದು ವಾರದೊಳಗೆ ಬಾಕಿ ಇರುವ 20 ಬೋಟ್‌ಗಳಿಗೆ ಎನ್‌ಒಸಿ ನೀಡದಿದ್ದರೆ ಸಂಬಂಧಪಟ್ಟ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಅಗತ್ಯಬಿದ್ದರೆ ಅರೆಬೆತ್ತಲೆ ಪ್ರತಿಭಟನೆ ಹಾಗೂ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೂ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಶಿವರಾಮ ಕಿಮಾಣಿ, ಗೋಪಾಲ, ನಾಗರಾಜ ನಾಯ್ಕ, ಗುಲಾಬಿ, ಸಂದೀಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಕನೂರ ಪರ ರೂಪಾಲಿ ನಾಯ್ಕ ಮತಯಾಚನೆ
12 ಜನರ ವಿರುದ್ಧದ ಪ್ರಕರಣಕ್ಕೆ ಪ್ರತಿಯಾಗಿ 8 ಜನರ ಮೇಲೆ ದೂರು