ಮೂರು ದಿನಗಳ ಬಳಿಕ ಮೀನುಗಾರರ ಶವ ಪತ್ತೆ

KannadaprabhaNewsNetwork |  
Published : Nov 26, 2025, 02:30 AM IST
೨೫ ವೈಎಲ್‌ಬಿ ೦೧ಯಲಬುರ್ಗಾ ತಾಲೂಕಿನ ಮಲಕಸಮುದ್ರ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ನೀರು ಪಾಲಾಗಿ ಮೃತಪಟ್ಟ ಹಿನ್ನಲೆಯಲ್ಲಿ ಸ್ಥಳಕ್ಕೆ ಶಾಸಕ ಬಸವರಾಜ ರಾಯರಡ್ಡಿ, ಎಸ್ಪಿ ಡಾ.ರಾಮ್.ಎಲ್.ಅರಸಿದ್ದಿ ಹಾಗೂ ಇತರ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. | Kannada Prabha

ಸಾರಾಂಶ

ನೀರಲ್ಲಿ ಮುಳುಗಿದವರ ಶವ ಹುಡುಕಲು ಮೂರು ದಿನಗಳ ಕಾಲ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ

ಯಲಬುರ್ಗಾ: ತಾಲೂಕಿನ ಮಲಕಸಮುದ್ರ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ತೆಪ್ಪ ಮಗುಚಿ ನೀರು ಪಾಲಾಗಿದ್ದ ವಜ್ರಬಂಡಿಯ ಫಕೀರ್‌ಸಾಬ್ ಮುಜಾವರ, ಗುತ್ತೂರಿನ ಶರಣಪ್ಪ ಎಮ್ಮೇರ್ ಶವಗಳು ಮಂಗಳವಾರ ಪತ್ತೆಯಾಗಿವೆ.

ಭಾನುವಾರ ಸಂಜೆ ಮೀನು ಹಿಡಿಯುವ ಕೆಲಸದಲ್ಲಿ ತೊಡಗಿದ್ದಾಗ ಗಾಳಿ ಬೀಸಿ, ತೆಪ್ಪ ಮಗುಚಿ ಇಬ್ಬರೂ ನೀರಲ್ಲಿ ಮುಳುಗಿದ್ದರು. ಈಜು ಬಾರದ ಶರಣಪ್ಪನನ್ನು ಕಾಪಾಡಲು ಹೋದ ಫಕೀರ್‌ಸಾಬ್ ಕೂಡ ಶರಣಪ್ಪನೊಂದಿಗೆ ನೀರು ಪಾಲಾದ ದುರಂತ ಘಟನೆ ನಡೆದಿತ್ತು. ಇವರ ಜತೆಗಿದ್ದ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದರು. ನೀರಲ್ಲಿ ಮುಳುಗಿದವರ ಶವ ಹುಡುಕಲು ಮೂರು ದಿನಗಳ ಕಾಲ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ. ಮಂಗಳವಾರ ಅಗ್ನಿಶಾಮಕ ದಳ ಮತ್ತು ಜೆಎಸ್‌ಡಬ್ಲು ಸಂಸ್ಥೆಯ ಈಜು ತಂಡದ ನಿರಂತರ ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ಮೃತ ದೇಹಗಳು ಪತ್ತೆಯಾದವು.

ಕುಟುಂಬಸ್ಥರ ಆಕ್ರಂದನ: ಘಟನೆ ನಡೆದ ದಿನದಿಂದಲೇ ಮೃತ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಗ್ರಾಮಸ್ಥರು ಸ್ಥಳದಲ್ಲಿದ್ದರು. ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಇಬ್ಬರು ಮೃತ ವ್ಯಕ್ತಿಗಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಶವ ಹೊರ ತೆಗೆಯುತ್ತಿದ್ದಂತೆ ಕುಟುಂಬಸ್ಥರು ಗೋಳಾಡಿ ಅಳುವುದನ್ನು ನೋಡಿದ ಸ್ಥಳದಲ್ಲಿ ನೆರೆದಿದ್ದ ಜನರ ಕಣ್ಣಂಚಲ್ಲಿ ಕಣ್ಣೀರು ತರಿಸಿತು. ಮೀನು ಹಿಡಿಯಲು ಕರೆತಂದ ಮೀನುಗಾರರ ಸಂಘದ ಅಧ್ಯಕ್ಷನ ಮೇಲೆ ಆಕ್ರೋಶ ಹೊರಹಾಕಿದರು.

ಕೆರೆ ಹತ್ತಿರ ಯಲಬುರ್ಗಾ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಿಂದ ಜನತೆ ಆಗಮಿಸಿ ಘಟನೆ ನೆನೆದು ಮರುಗಿದರು. ಮೀನು ಹಿಡಿಯುವ ವೇಳೆ ಮೀನುಗಾರರು ಸುರಕ್ಷಾ ಕವಚ ಧರಿಸಿದ್ದರೆ ಇಂಥ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಸಾರ್ವಜನಿಕರು ಮಾತಾಡಿಕೊಂಡರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ದೇಹಗಳ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.

ಪರಿಹಾರದ ಭರವಸೆ:ಕೆರೆಯಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ಶಾಸಕ ಬಸವರಾಜ ರಾಯರಡ್ಡಿ ಭರವಸೆ ನೀಡಿದರು.

ಘಟನೆ ಸ್ಥಳಕ್ಕೆ ಮಾಜಿ ಸಚಿವ ಹಾಲಪ್ಪ ಆಚಾರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮಂಗಳವಾರದಂದು ಶವ ಪತ್ತೆ ವೇಳೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಎಸ್ಪಿ ಡಾ. ರಾಮ್.ಎಲ್. ಅರಸಿದ್ದಿ, ಡಿವೈಎಸ್ಪಿ ಮುತ್ತಣ್ಣ ಸಾವರಗೋಳ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ತಹಸೀಲ್ದಾರ್ ಬಸವರಾಜ ತೆನ್ನಳಿ, ತಾಪಂ ಇಒ ನೀಲಗಂಗಾ ಬಬಲಾದ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಮಪ್ಪ, ಪಿಎಸ್ಐಗಳಾದ ವಿಜಯ ಪ್ರತಾಪ, ಎಸ್.ಪಿ. ನಾಯ್ಕ, ಪಿಡಿಒ ವೆಂಕಟೇಶ ನಾಯಕ, ಡಾ. ಶಿವನಗೌಡ ದಾನರಡ್ಡಿ, ಕೆರಿಬಸಪ್ಪ ನಿಡಗುಂದಿ ಸೇರಿದಂತೆ ಮತ್ತಿತರರು ಘಟನಾ ಸ್ಥಳದಲ್ಲಿದ್ದು ಮೃತ ವ್ಯಕ್ತಿಗಳ ಕುಟುಂಬಕ್ಕೆ ಸಾಂತ್ವನ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ