ಇದುವರೆಗೆ ಸಮುದ್ರದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ನೀಡಲಾಗುತ್ತಿದ್ದ 6 ಲಕ್ಷ ರು. ಪರಿಹಾರದ ಮೊತ್ತವನ್ನು ವಿಶ್ವ ಮೀನುಗಾರಿಕೆ ದಿನದಂದು 10 ಲಕ್ಷ ರು.ಗೆ ಏರಿಕೆ ಮಾಡಲಾಗಿದೆ ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.
ಸಮುದ್ರದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ಸಚಿವರಿಂದ ಪರಿಹಾರ ವಿತರಣೆ
ಕನ್ನಡಪ್ರಭ ವಾರ್ತೆ ಉಡುಪಿಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಪಿತ್ರೋಡಿಯ ನೀಲಾಧರ ಜಿ.ತಿಂಗಳಾಯ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದು, ಮಂಗಳವಾರ ರಾಜ್ಯ ಮೀನುಗಾರಿಕಾ ಸಚಿವ ಮಂಕಾಳ ಎಸ್. ವೈದ್ಯ ಮೃತರ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿ, ಪತ್ನಿಗೆ 15 ಲಕ್ಷ ರು. ಪರಿಹಾರದ ಚೆಕ್ ವಿತರಿಸಿದರು.ಜು. 11ರಂದು ಸೈಂಟ್ ಮೇರೀಸ್ ದ್ವೀಪದಿಂದ ಸುಮಾರು 1 ಕಿ.ಮೀ.ದೂರದಲ್ಲಿ ನಾಡದೋಣಿಯಲ್ಲಿ ಮೀನುಗಾರಿಕೆ ನಡೆಸುತಿದ್ದಾಗ ಭಾರೀ ತೆರೆ ಬಡಿದ ಪರಿಣಾಮ ದೋಣಿ ಮಗುಚಿ ಬಿದ್ದು, ಸಮುದ್ರಕ್ಕೆ ಹರಡಿದ್ದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡು ತಿಂಗಳಾಯ ಮೃತಪಟ್ಟಿದ್ದಾರೆ.ಅವರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದ ಸಚಿವರು, ಸುದ್ದಿಗಾರರೊಂದಿಗೆ ಮಾತನಾಡಿ, ಇದುವರೆಗೆ ಸಮುದ್ರದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ನೀಡಲಾಗುತ್ತಿದ್ದ 6 ಲಕ್ಷ ರು. ಪರಿಹಾರದ ಮೊತ್ತವನ್ನು ವಿಶ್ವ ಮೀನುಗಾರಿಕೆ ದಿನದಂದು 10 ಲಕ್ಷ ರು.ಗೆ ಏರಿಕೆ ಮಾಡಲಾಗಿದೆ. ಅದರಂತೆ ಇಂದು ಪರಿಹಾರದ ಹಣ ಕುಟುಂಬದವರಿಗೆ ವಿತರಿಸಿದ್ದೇವೆ ಹಾಗೂ ಪ್ರಪ್ರಥಮ ಬಾರಿಗೆ ದೋಣಿ, ಇಂಜಿನ್, ಬಲೆಯ ಖರೀದಿಗೆ ಸಹ 5 ಲಕ್ಷ ರು. ನೀಡಲಾಗಿದೆ ಎಂದರು. ಭಟ್ಕಳ, ಮುರ್ಡೇಶ್ವರ, ಉಡುಪಿಯಲ್ಲಿಯೂ ಸಹ ಇಂತಹ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಿರುವುದು ಅತೀವ ನೋವು ತಂದಿದೆ. ಮೃತ ಮೀನುಗಾರರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸಹಾಯ ನೀಡಲಾಗುವುದು. ಆದರೆ ಇಂತಹ ದುರಂತ ಮರುಕಳಿಸದಂತೆ ಮೀನುಗಾರರು ಎಚ್ಚರಿಕೆಯಿಂದ ಇರಬೇಕು. ಕಾಲಕಾಲಕ್ಕೆ ಹವಾಮಾನ ಇಲಾಖೆಯಿಂದ ನೀಡಲಾಗುವ ಮುನ್ಸೂಚನೆಗಳನ್ನು ಪಾಲಿಸಬೇಕು, ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮನವಿ ಮಾಡಿದರು.
ಶಾಸಕರಾದ ಯಶ್‌ಪಾಲ್ ಎಸ್ ಸುವರ್ಣ, ಸುರೇಶ್ ಶೆಟ್ಟಿ, ಗ್ಯಾರಂಟಿ ಯೋಜನ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.