ಐದು ದಿನಗಳ ಮಾವು ಮಾರಾಟ, ಪ್ರದರ್ಶನಕ್ಕೆ ಚಾಲನೆ

KannadaprabhaNewsNetwork |  
Published : May 14, 2025, 01:52 AM IST
13ಡಿಡೂಬ್ಲೂಡಿ4ಮಂಗಳವಾರ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಮಾವು ಮೇಳವನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಸಾನ್ವಿ ಆರ್‌. ಎಂಬ ಬಾಲಕಿಗೆ ಮಾವಿನ ಹಣ್ಣು ತಿನ್ನಿಸಿ ಮೇಳಕ್ಕೆ ಚಾಲನೆ ನೀಡಿದರು.  | Kannada Prabha

ಸಾರಾಂಶ

ಮಾವು ಬೆಳೆಗಾರರಿಂದ ಮತ್ತು ಸಾರ್ವಜನಿಕರಿಂದ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಮಾವು ಮೇಳವನ್ನು ಆಯೋಜಿಸಲಾಗಿದೆ. ಧಾರವಾಡ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಇದು ಸಹ ಒಂದಾಗಿದೆ. ಮೇಳದಲ್ಲಿ ಸುಮಾರು 30 ಮಾವು ಬೆಳೆಗಾರರು ಮಳಿಗೆಗಳನ್ನು ಹಾಕಿದ್ದಾರೆ. ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

ಧಾರವಾಡ: ಮಾವು ಬೆಳೆಗಾರರಿಗೆ ಮಾವು ಮಾರಾಟ ಮತ್ತು ವಿವಿಧ ತಳಿ ಮಾವುಗಳ ಪ್ರದರ್ಶನಕ್ಕೆ ಅವಕಾಶವಾಗುವಂತೆ ಐದು ದಿನಗಳ ವರೆಗೆ ತೋಟಗಾರಿಕೆ ಕಚೇರಿ ಆವರಣದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಮಂಗಳವಾರ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಮಾವು ಮೇಳವನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಸಾನ್ವಿ ಎಂಬ ಬಾಲಕಿಗೆ ಮಾವಿನ ಹಣ್ಣು ತಿನ್ನಿಸಿ ಉದ್ಘಾಟಿಸಿದರು. ಮಾವು ಬೆಳೆಗಾರರಿಂದ ಮತ್ತು ಸಾರ್ವಜನಿಕರಿಂದ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಮಾವು ಮೇಳವನ್ನು ಆಯೋಜಿಸಲಾಗಿದೆ. ಧಾರವಾಡ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಇದು ಸಹ ಒಂದಾಗಿದೆ. ಮೇಳದಲ್ಲಿ ಸುಮಾರು 30 ಮಾವು ಬೆಳೆಗಾರರು ಮಳಿಗೆಗಳನ್ನು ಹಾಕಿದ್ದಾರೆ. ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇದು ರೈತರಿಗೆ ಮತ್ತು ಮಾವು ಬೆಳೆಗಾರರಿಗೆ ಅನುಕೂಲ. ಸಾರ್ವಜನಿಕರಿಗೆ ಅದರಲ್ಲೂ ಗ್ರಾಹಕರಿಗೆ ಉತ್ತಮ ಬೆಲೆಗೆ, ರುಚಿಕರವಾದ ಮಾವು ಸಿಗುವುದಕ್ಕೆ ಸುವರ್ಣ ಅವಕಾಶ ಎಂದರು.

ಜಿಲ್ಲೆಯಲ್ಲಿ ಮಾವು ಒಂದು ಪ್ರಮುಖ ಬೆಳೆಯಾಗಿದ್ದು, ಒಟ್ಟು 29610 ಎಕರೆ (11844 ಹೆಕ್ಟೆರ್‌) ನಲ್ಲಿ, ಅಂದಾಜು 8881 ರೈತರು ಮಾವು ಬೆಳೆಯುತ್ತಿದ್ದಾರೆ. ಸಾಂಪ್ರದಾಯಕವಾಗಿ ಎಕರೆಗೆ 4 ಟನ್ ಇಳುವರಿ ಬರುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಇಳುವರಿಯಲ್ಲಿ ಕುಂಠಿತವಾಗಿದೆ. ಸುಮಾರು 1 ಟನ್, ಎಕರೆಯಂತೆ ಜಿಲ್ಲೆಯಿಂದ ಒಟ್ಟು 29000 ಟನ್ ಇಳುವರಿಯನ್ನು ಅಂದಾಜಿಸಬಹುದಾಗಿದೆ ಎಂದರು. ಜಿಲ್ಲೆಯು ಸಾಂಪ್ರದಾಯಕವಾಗಿ ಮಾವು ಬೆಳೆಯುವ ರಾಜ್ಯದ ಮುಖ್ಯ ಭಾಗ. ಪ್ರಮಖವಾಗಿ ಧಾರವಾಡ, ಕಲಘಟಗಿ, ಹುಬ್ಬಳ್ಳಿ ಮತ್ತು ಕುಂದಗೋಳ ತಾಲೂಕುಗಳಲ್ಲಿ ಮಾವು ಬೆಳೆಯನ್ನು ಬೆಳೆಯಲು ಸೂಕ್ತವಾದ ವಾತಾವರಣವಿರುವುದರಿಂದ ಉತ್ತಮ ಮಾವು ಬೆಳೆಯನ್ನು ಬೆಳೆಯಬಹುದಾಗಿದೆ ಎಂದರು.

ಜಿಲ್ಲೆಯಲ್ಲಿ ಮಾವು ಬೆಳೆಯನ್ನು ಪ್ಯಾಶನ್ ಆಗಿ ತೆಗೆದುಕೊಂಡು ಬೆಳೆಯುವ ಪ್ರಮೋದ ಗಾವ್ಕರ್ ಅವರು 100 ವಿಧವಾದ ಮಾವು ಬೆಳೆದಿದ್ದಾರೆ. ಅದರಲ್ಲಿ ಸ್ವರ್ಣರೇಖಾ, ಮಿಯಾಜಾಕಿ ಅದರಲ್ಲಿ ಹೈ ಕ್ವಾಲಿಟಿ, ಅತಿ ಹೆಚ್ಚು ಬೆಲೆ ಇರುವ ಮಾವುಗಳನ್ನು ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಅವುಗಳಿಗೆ ಭಾರಿ ಬೇಡಿಕೆ ಇದೆ. ಮಾವು ಬೆಳೆಗಾರರಿಗೆ ಇದರ ಬಗ್ಗೆ ಮಾಹಿತಿ ನೀಡುವ ಅಗತ್ಯವಿದ್ದು, ತೋಟಗಾರಿಕೆ ಇಲಾಖೆಯಿಂದ ಪ್ರಗತಿಪರ ಮಾವು ಬೆಳೆಗಾರ ರೈತರಿಂದ ಪ್ರಮೋದ ಗಾಂವಕರ ಅವರ ಮಾವಿನ ತೋಟಕ್ಕೆ ಭೇಟಿ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬಾಲವಿಕಾಸ ಅಕಾಡಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಪಂ ಸಿಇಓ ಭುವಮೇಶ ಪಾಟೀಲ, ಹಾಪ್ ಕಾಮ್ಸ್ ಅಧ್ಯಕ್ಷ ಸಿದ್ದಣ್ಣ ಪ್ಯಾಟಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಕೃಷಿ ಇಲಾಖೆ ಉಪ ನಿರ್ದೆಶಕ ಕೆ.ಸಿ.ಭದ್ರಣ್ಣವರ, ಹಿರಿಯ ತೋಟಗಾರಿಕೆ ನಿರ್ದೇಶಕ ಇಮ್ತಿಯಾಜ್ ಚಂಗಾಪುರಿ, ತಮ್ಮಣ್ಣ ಗುಂಡಗೋವಿ ಇದ್ದರು.

ಬಗೆಬಗೆಯ ಮಾವು ಲಭ್ಯ: ಹಣ್ಣುಗಳ ರಾಜ ಮಾವಿನ ಹಣ್ಣುಗಳ ವಿವಿಧ ಬಗೆಬಗೆಗಳಾದ ಸುಂದರ ಶಾ, ಚೈತ್ರಾಪೈರಿ, ಜಿರಗಿ ಮಾವು, ಉಪ್ಪಿನಕಾಯಿ ತಳಿ, ಅರ್ಕಾ, ನೀಲಂ, ಸುವರ್ಣರೇಖಾ, ಧಾರವಾಡ ರಸಪೂರಿ, ಕಿಶನ ಭಾಗ್, ಫಜಲಿ, ದಿಲಪಸಂದ, ಹಿಮಸಾಗರ, ಆಮ್ರಪಾಲ, ಲಕನೌ ಸಫೇದ, ನಿರಂಜನ, ಸಿಂಧು, ಕಲಪಡಿ, ನೀಲಗೋವಾ, ಮಲ್ಲಿಕಾ, ಅರ್ಕಾ ಪುನೀತ, ಲಾಂಗ್ರಾ, ನಾಜೂಕ ಪಸಂದ, ಚರಕು ರಸಂ ಅಂತಹ ಹಲವಾರು ತಳಿಗಳ ಮಾವಿನ ಹಣ್ಣುಗಳು ಮೇಳದಲ್ಲಿ ಸಾರ್ವಜನಿಕರಿಗೆ ಮಾರಾಟಕ್ಕಾಗಿವೆ.

ಜಿಲ್ಲೆಗೆ ಸರ್ಕಾರದಿಂದ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಆದೇಶ ನೀಡಿದ್ದು, ಈಗಾಗಲೇ ಸುಮಾರು ₹7 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ತಾಲೂಕಿನ ಕುಂಭಾಪುರ ಪಾರ್ಮದಲ್ಲಿ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗುವುದು. ಮಾವು ಅಭಿವೃದ್ಧಿ ಕೇಂದ್ರವು ಜಿಲ್ಲೆಯ ರೈತರಿಗೆ ಮಾತ್ರವಲ್ಲದೇ, ಸುತ್ತಲಿನ ಜಿಲ್ಲೆಗಳಲ್ಲಿ ಮಾವು ಬೆಳೆಯುವ ರೈತರಿಗೂ ಪ್ರಯೋಜನವಾಗಲಿದೆ. ಮಾವು ಅಭಿವೃದ್ಧಿ ಕೇಂದ್ರದಲ್ಲಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ, ಹಣ್ಣು ಮಾಡುವುದು, ರೈತರಿಗೆ ಗ್ರೇಡಿಂಗ್ ವ್ಯವಸ್ಥೆ, ಮಾವು ಬೆಳೆಗಳ ತರಬೇತಿ, ರೈತರಿಗೆ ಬೇಕಾದ ಎಲ್ಲ ಮಾಹಿತಿಯನ್ನು ನೀಡುವ ಸಮಗ್ರ ಮಾಹಿತಿ ಕೇಂದ್ರವಾಗಿ ನಿರ್ವಹಿಸುತ್ತದೆ.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ