ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ: ಇಲ್ಲಿನ ನವನಗರದ ಡಾ. ಪುನಿತ್ ರಾಜಕುಮಾರ ವೃತ್ತದಲ್ಲಿ ಡಾ. ಪುನಿತ್ ರಾಜಕುಮಾರ ಅಭಿಮಾನಿಗಳ ಬಳಗ, ಉತ್ತರ ಕರ್ನಾಟಕ ಸನಾತನ ಮಹಾರಾಜ್ ಗಣೇಶೋತ್ಸವ ಮಂಡಳಿ ಜಂಟಿಯಾಗಿ ಪಂಚಮುಖಿ ರೂಪದ ಗಣೇಶನನ್ನು ಪ್ರತಿಷ್ಠಾಪಿಸಿದ್ದು, ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.ಇಂದು ಯುವಕರು ಡ್ರಗ್ಸ್, ಗಾಂಜಾ, ಮದ್ಯಪಾನ, ಗುಟಕಾದಂತಹ ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ಯುವಕರು ಆರೋಗ್ಯಯುತ ಶರೀರ ಬೆಳೆಸುವಂತಾಗಲಿ ಎಂಬ ಉದ್ದೇಶದಿಂದ 11 ಅಡಿ ಎತ್ತರದ ದೇಹದಾರ್ಢ್ಯಯುಳ್ಳ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ಪಂಚಮುಖಿ ಗಣಪನ ಮುಖ್ಯ ವಿಶೇಷತೆ ಐದು ಮುಖಗಳು, ಪ್ರತಿ ಮುಖವು ವಿಭಿನ್ನ ಶಕ್ತಿ ಮತ್ತು ದೈವಿಕ ಅಂಶಗಳನ್ನು ಪ್ರತಿನಿಧಿಸುತ್ತದೆ. ಈ ಪಂಚ ಮುಖಗಳು ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶದ ಐದು ಶಕ್ತಿಗಳನ್ನು ಸಂಕೇತಿಸುತ್ತವೆ. ಈ ರೂಪವು ರಕ್ಷಣಾತ್ಮಕ ಶಕ್ತಿಗಳು ಮತ್ತು ನಕಾರಾತ್ಮಕ ಶಕ್ತಿಗಳನ್ನು ನಿವಾರಿಸುವ ಸಾಮರ್ಥ್ಯಕ್ಕಾಗಿ ಪೂಜಿಸಲ್ಪಡುತ್ತದೆ.ಏನಿದು ಪಂಚಮುಖಿ ಗಣಪ?: ಎಡಭಾಗದಲ್ಲಿ ಕುದುರೆ (ಹಯಗ್ರೀವ)ಯ ಮುಖವು ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಸಂಕೇತಿಸುತ್ತದೆ. ಎರಡನೇ ಮುಖ ನರಸಿಂಹನದಾಗಿದ್ದು, ಇದು ಶಕ್ತಿ, ಧೈರ್ಯ ಮತ್ತು ರಕ್ಷಣೆ ಪ್ರತಿನಿಧಿಸುತ್ತದೆ. ಮಧ್ಯದಲ್ಲಿ ಭಗವಾನ್ ಹನುಮಂತನ ಮುಖವಾಗಿದ್ದು, ಇದು ಶಕ್ತಿ ಮತ್ತು ಸಮರ್ಪಣೆಯನ್ನು ಸೂಚಿಸುತ್ತದೆ. ನಾಲ್ಕನೇ ಮುಖ ವರಾಹ ಮುಖ, ಇದು ಭೂಮಿ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ. ಬಲಭಾಗದ ಮುಖ ಗರುಡ ಮುಖವು ಇದು ವೇಗ, ದೃಷ್ಟಿ ಮತ್ತು ಆಧ್ಯಾತ್ಮಿಕ ಎಚ್ಚರಿಕೆಯನ್ನು ಪ್ರತಿನಿಧಿಸುತ್ತದೆ.
ಈ ಪಂಚಮುಖಿ ಗಣಪನ ರೂಪವು ನಕಾರಾತ್ಮಕ ಶಕ್ತಿಗಳು ಮತ್ತು ದುಷ್ಟಶಕ್ತಿಗಳನ್ನು ದೂರವಿರಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಸಂಕಷ್ಟ ಚತುರ್ಥಿಯಂತಹ ವಿಶೇಷ ದಿನಗಳಲ್ಲಿ ಪಂಚಮುಖಿ ಗಣಪನ ಪೂಜೆಗಳನ್ನು ಶ್ರದ್ಧಾಭಕ್ತಿಯಿಂದ ಮಾಡಲಾಗುತ್ತದೆ. ಜತೆಗೆ ಸಂಕಷ್ಟ ನಿವಾರಣೆಗಾಗಿ ಈ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದು ಗಣೇಶೋತ್ಸವ ಮಂಡಳಿಯ ಖಜಾಂಚಿ ಸುನೀಲ್ ರೇವಣಕರ ತಿಳಿಸಿದರು.ಪ್ರತ್ಯೇಕ ಉಕ ಹೋರಾಟ: ಈ ಗಣೇಶ ಮೂರ್ತಿ ಸ್ಥಾಪನೆಯ ಮೂಲಕ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ. ಈ ಭಾಗದಿಂದಲೇ ಚುನಾಯಿತರಾಗಿ ಮುಖ್ಯಮಂತ್ರಿಗಳಾಗಿ, ಸಚಿವರಾಗಿ ಅಧಿಕಾರ ನಡೆಸಿದ ರಾಜಕಾರಣಿಗಳು ಇಲ್ಲಿನ ಅಭಿವೃದ್ಧಿಗೆ ಆಸಕ್ತಿ ವಹಿಸಿಲ್ಲ. ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬುದು ಸಂಘಟಕರ ಮಾತು. ಇವರ ಈ ಹೋರಾಟಕ್ಕೆ ಉತ್ತರ ಕರ್ನಾಟಕ ಜನಶಕ್ತಿ ಸೇನೆಯೂ ಕೈಜೋಡಿಸಿದೆ.
ಜಾಗೃತಿ ಕಾರ್ಯಕ್ರಮ: 31 ದಿನಗಳ ಕಾಲ ಗಣೇಶ ಮೂರ್ತಿ ಪ್ರತಿಷ್ಠಾಪನೆಗೊಳಿಸಿದೆ. ಈ ಪ್ರತಿಷ್ಠಾಪನೆಯ 11 ದಿನಗಳ ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿರುವ ರೈತ ಹೋರಾಟಗಾರರು, ಸಂಘಟನೆಗಳು, ಈ ಭಾಗದ ಮಠಾಧೀಶರು, ಚಿತ್ರನಟರ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸಂಘಟಿಕರು ನಿರ್ಧರಿಸಿದ್ದಾರೆ. ಮೂರ್ತಿ ವಿಸರ್ಜನೆಯ ಬಳಿಕ ಮತ್ತೊಮ್ಮೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲೂ ಹಂತಹಂತವಾಗಿ ತೀವ್ರಸ್ವರೂಪದ ಹೋರಾಟಕ್ಕೆ ಸಂಘಟಕರು ಸಿದ್ಧತೆ ಮಾಡಿಕೊಂಡಿದ್ದಾರೆ.ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ರಾಜಕಾರಣಿಗಳು ಕ್ಷೇತ್ರದ ಅಭಿವೃದ್ಧಿಗೆ ಆಸಕ್ತಿ ನೀಡದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಇದನ್ನು ಖಂಡಿಸಿ ಈ ಬಾರಿ ಮಂಡಳಿಯಿಂದ ಗಣೇಶೋತ್ಸವದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಈ ಭಾಗದ ಅಭಿವೃದ್ಧಿಗಾಗಿ ಹೋರಾಟಕ್ಕೆ ಅಣಿಯಾಗಿದ್ದೇವೆ ಎಂದು ಉತ್ತರ ಕರ್ನಾಟಕ ಸನಾತನ ಮಹಾರಾಜ್ ಗಣೇಶೋತ್ಸವ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯಜ್ಜ ಹಿರೇಮಠ ಹೇಳಿದರು.