- ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಸಭೆ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಪಂಚ ಗ್ಯಾರಂಟಿ ಯೋಜನೆಗಳು ತಾಲೂಕಿನ ಜನತೆಗೆ ನೆರವು ಒದಗಿಸುವ ಮೂಲಕ ಜೀವನ ಸುಧಾರಣೆಗೆ ಆರ್ಥಿಕ ವರದಾನವಾಗಿದೆ ಎಂದು ತಾಲೂಕು ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಎಂ.ಮಲ್ಲೇಶಸ್ವಾಮಿ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಜನತೆಯನ್ನು ಸದೃಢ ಗೊಳಿಸುವ ಸಲುವಾಗಿ ಗ್ಯಾರಂಟಿ ಯೋಜನೆಗಳು ಫಲಕಾರಿಯಾಗಿವೆ. ದೇಶದ ಭವಿಷ್ಯ ರೂಪಿಸುವ ಯುವಕರಿಗೆ ಉದ್ಯೋಗ ಲಭಿಸುವ ತನಕ ಯುವನಿಧಿ ಅನುಷ್ಠಾನಗೊಳಿಸಿ ನಿರುದ್ಯೋಗದಿಂದ ಬಳಲುವ ಯುವ ಸಮೂಹವನ್ನು ಕೈಹಿಡಿದಿರುವ ಕೀರ್ತಿ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 72 ಸಾವಿರ ಅರ್ಜಿದಾರರ ಪೈಕಿ 69744 ಕುಟುಂಬಗಳ ಯಜಮಾನಿಗಳಿಗೆ ಪ್ರತಿ ತಿಂಗಳು ₹13 ಕೋಟಿಯಂತೆ ಆರಂಭದಿಂದ ಡಿಸೆಂಬರ್ ಅಂತ್ಯದವರೆಗೆ ಒಟ್ಟು ₹98 ಕೋಟಿ ಹಣ ಖಾತೆಗೆ ಜಮಾಯಿಸ ಲಾಗಿದೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಸುಮಾರು 75 ಸಾವಿರ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ವಿತರಿಸುವ ಜೊತೆಗೆ ₹35 ಕೋಟಿ ಹಣವನ್ನು ನೇರ ಖಾತೆಗೆ ಜಮಾವಣೆ ಮಾಡಲಾಗಿದೆ. ಯುವನಿಧಿ ಯೋಜನೆಯಲ್ಲಿ ಒಟ್ಟು 3772 ನಿರುದ್ಯೋಗಿ ಪದವಿ ಹಾಗೂ ಡಿಪ್ಲೋಮೋ ಪದವೀಧರರಿಗೆ ಒಂದು ಕೋಟಿ ಭತ್ಯೆ ನೀಡಲಾಗಿದೆ ಎಂದರು.
ಸ್ವಾವಲಂಬಿ ಜೀವನ ಕೈಗೊಳ್ಳುವ ಸಲುವಾಗಿ ಸರ್ಕಾರ ಹೆಣ್ಣು ಮಕ್ಕಳಿಗೆ ಮೊದಲ ಆದ್ಯತೆ ನೀಡಿ ಸಹಕರಿಸುತ್ತಿದೆ. ಅಲ್ಲದೇ ಕುಟುಂಬದ ಅತ್ಯಂತ ಹೆಚ್ಚು ಜವಾಬ್ದಾರಿ ನಿಭಾಯಿಸುವ ಹೆಣ್ಣು ಎಲ್ಲಾ ರಂಗದಲ್ಲೂ ಛಾಪು ಮೂಡಿಸಿರುವ ಕಾರಣ ಪಂಚ ಗ್ಯಾರಂಟಿಗಳು ಮಹಿಳಾ ಸಬಲೀಕರಣಕ್ಕೆ ಮುಡಿಪಿಟ್ಟಿದೆ ಎಂದು ಹೇಳಿದರು.