- ಹರಿಹರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ । ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ ಪೂರ್ವಭಾವಿ ಸಭೆ
ಕನ್ನಡಪ್ರಭ ವಾರ್ತೆ ಹರಿಹರ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಪ್ರಾಯಪಟ್ಟರು.
ನಗರದ ಎಚ್.ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಸರ್ಕಾರದ 2ನೇ ವರ್ಷದ ಸಾಧನಾ ಸಮಾವೇಶ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಬಿಜೆಪಿಯವರು, ಗ್ಯಾರಂಟಿಗಳಿಗೆ ಬಹುಕಾಲ ಹಣ ಹೊಂದಿಸಲಾಗಲ್ಲ, ಮೂರ್ನಾಲ್ಕು ತಿಂಗಳಲ್ಲಿ ಸರ್ಕಾರ ಬೀಳುತ್ತೆ, ಈ ಯೋಜನೆ ಜನರನ್ನು ಸೋಮಾರಿ ಆಗಿಸುತ್ತದೆ ಎಂದು ವಿರೋಧಿಸಿದರು ಎಂದರು. ಕಾಂಗ್ರೆಸ್‍ನ ಗ್ಯಾರಂಟಿಗಳನ್ನು ವಿರೋಧಿಸಿದ, ಗೇಲಿ ಮಾಡಿದ ಬಿಜೆಪಿಯವರೆ, ಬಿಜೆಪಿ ಅಧಿಕಾರದಲ್ಲಿರುವ ಕೆಲವು ರಾಜ್ಯಗಳಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದೆ. ಭಾರತ ವಿಶ್ವಗುರು ಆಗಲು ಈ ಹಿಂದೆ ನಮ್ಮ ಕಾಂಗ್ರೆಸ್ ಮಾಡಿದ ಅನೇಕ ಯೋಜನೆಗಳು ಕಾರಣ. ಪ್ರಸ್ತುತ ಕೇಂದ್ರ ಸರ್ಕಾರ ಅವುಗಳನ್ನು ಕಾಪಿ ಮಾಡಿ ಇತರೆ ಹೆಸರಿನಲ್ಲಿ ಪ್ರಸ್ತುತಪಡಿಸುತ್ತಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಹರಿಹರ ವಿಧಾನಸಭಾ ಕ್ಷೇತ್ರ ಉಸ್ತುವಾರಿ ವಿಜಯ್‍ಕುಮಾರ್ ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆಯ ವಿವಿಧ ಅಂಗಗಳನ್ನು ಅಸಾಂವಿಧಾನಾತ್ಮಕವಾಗಿ ಹಿಡಿತಕ್ಕೆ ಪಡೆದಿರುವ ಬಿಜೆಪಿ ಈಗ ನ್ಯಾಯಾಂಗಕ್ಕೂ ಕೈ ಹಾಕಿದೆ. ರಾಷ್ಟ್ರಪತಿ ಮೂಲಕ 14 ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್‍ಗೆ ಕೇಳಿಸಿದ್ದಾರೆ ಎಂದರು.
ಮಾಜಿ ಶಾಸಕ ಎಸ್.ರಾಮಪ್ಪ, ಪಕ್ಷದ ಮುಖಂಡರಾದ ಎಲ್.ಬಿ. ಹನುಮಂತಪ್ಪ, ಎಂ.ಬಿ. ಅಬಿದ್ ಅಲಿ, ಟಿ.ಜೆ. ಮುರುಗೇಶಪ್ಪ, ಬಿ.ರೇವಣಸಿದ್ದಪ್ಪ, ಹಾಲೇಶ್ ಗೌಡ, ಎಚ್.ಎಚ್.ಬಸವರಾಜ್, ನಿಖಿಲ್ ಕೊಂಡಜ್ಜಿ, ಡಿ.ಜಿ.ಶಿವಾನಂದಪ್ಪ, ಹಬೀಬ್ ಉಲ್ಲಾ ಬೇಗ್, ಜಿ.ವಿ.ಪ್ರವೀಣ್, ಗುತ್ಯಪ್ಪ ಜೋಗಪ್ಪ, ಸುಭಾಷ್‍ಚಂದ್ರ ಭೋಸ್, ಅನಿತಾ, ಇಮ್ತಿಯಾಜ್ ಹಾಗೂ ಇತರರಿದ್ದರು.
(ಬಾಕ್ಸ್) * ಗ್ರೇಟರ್‍ಗೂ ಕ್ವಾರ್ಟರ್‍ಗೂ ವ್ಯತ್ಯಾಸ ಗೊತ್ತಿಲ್ಲದಷ್ಟು ಬುದ್ಧಿವಂತ ಅಶೋಕಣ್ಣ
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರನ್ನು ಕ್ವಾರ್ಟರ್ ಬೆಂಗಳೂರು ಎಂದು ಕರೆದಿರುವ ಅಶೋಕ ಅವರ ಬುದ್ಧಿಗೆ ಏನು ಹೇಳೋದು. ಕಾಮಾಲೆ ಕಣ್ಣೋರಿಕೆ ಕಾಣೋದೆಲ್ಲ ಹಳದಿ ಅನ್ನೋ ರೀತಿ ಅಶೋಕಣ್ಣನ ಮನಸ್ಥಿತಿಯೂ ಇದೆ. ಗ್ರೇಟರ್ ಬೆಂಗಳೂರು ಕಾಯ್ದೆ ವಿರೋಧಿಸುವ ಬಿಜೆಪಿ ಅವರಿಗೆ ಮಾಡಲು ಕೆಲಸ ಇಲ್ಲ ಎಂದರು.
- - -
ಹರಿಹರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಸರ್ಕಾರದ 2ನೇ ವರ್ಷದ ಸಾಧನಾ ಸಮಾವೇಶದ ಪೂರ್ವಭಾವಿ ಸಭೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು.