ಬ್ಯಾಡಗಿಯಲ್ಲಿ ಪಿಎಫ್‌ ನೀತಿ ವಿರೋಧಿಸಿ 5 ತಾಸು ರಸ್ತೆತಡೆ

KannadaprabhaNewsNetwork |  
Published : Oct 01, 2026, 02:15 AM IST
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಪಿಎಫ್ ನೀತಿ ವಿರೋಧಿಸಿ ಬ್ಯಾಡಗಿ ಪಟ್ಟಣದ ಶಾಹಿ ಗಾರ್ಮೆಂಟ್ಸ್ ಉದ್ಯೋಗಿಗಳು ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಸ್ತೆ ಹಾಗೂ ಬಸ್ ತಡೆ ನಡೆಸಿದರು. | Kannada Prabha

ಸಾರಾಂಶ

ಹೊಸ ಪಿಎಫ್ ನಿಯಮದಿಂದ ಕಾರ್ಮಿಕರಿಗೆ ಹಲವು ರೀತಿಯಲ್ಲಿ ತೊಂದರೆಯಾಗಲಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಏಕಾಏಕಿ ಹೊಸ ನಿಯಮಗಳನ್ನು ಜಾರಿಗೊಳಿಸುವ ಬದಲು ಈ ಹಿಂದೆ ಜಾರಿಯಲ್ಲಿದ್ದ ಪಿಎಫ್ ನಿಯಮವನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಬ್ಯಾಡಗಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಪಿಎಫ್ ನೀತಿ ವಿರೋಧಿಸಿ ಪಟ್ಟಣದ ಶಾಹಿ ಗಾರ್ಮೆಂಟ್ಸ್ ಉದ್ಯೋಗಿಗಳು ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ, ರಸ್ತೆ ಹಾಗೂ ಬಸ್ ತಡೆ ನಡೆಸಿದರು.

ಏಕಾಏಕಿ ನಡೆದ ರಸ್ತೆ ತಡೆಯಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಾಹನ ಸವಾರರು ಕೆಲಕಾಲ ಪರದಾಡುವಂತಾಯಿತು.

ಪಟ್ಟಣದ ಶಾಹಿ ಗಾರ್ಮೆಂಟ್ಸ್ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಸಾವಿರಾರು ಕಾರ್ಮಿಕರು ಗುಮ್ಮನಹಳ್ಳಿ ರಸ್ತೆ, ಬೀರೇಶ್ವರ ದೇವಸ್ಥಾನ ಮಾರ್ಗವಾಗಿ ಬಸ್ ನಿಲ್ದಾಣದ ಬಳಿಗೆ ಆಗಮಿಸಿದರು. ಬಳಿಕ ಹಳೆ ಪುರಸಭೆ ಎದುರು ರಸ್ತೆಯಲ್ಲಿ ಕುಳಿತು ಕೇಂದ್ರ ಸರ್ಕಾರದ ಹೊಸ ಪಿಎಫ್ ನೀತಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹಳೆಯ ನಿಯಮ ಮುಂದುವರಿಸಿ: ಹೊಸ ಪಿಎಫ್ ನಿಯಮದಿಂದ ಕಾರ್ಮಿಕರಿಗೆ ಹಲವು ರೀತಿಯಲ್ಲಿ ತೊಂದರೆಯಾಗಲಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಏಕಾಏಕಿ ಹೊಸ ನಿಯಮಗಳನ್ನು ಜಾರಿಗೊಳಿಸುವ ಬದಲು ಈ ಹಿಂದೆ ಜಾರಿಯಲ್ಲಿದ್ದ ಪಿಎಫ್ ನಿಯಮವನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಜೀವನ ದುಸ್ತರವಾಗಿದೆ: ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಈಗಾಗಲೇ ದುಸ್ತರವಾಗಿದೆ. ನಮ್ಮ ದುಡಿಮೆಯ ಹಣದಲ್ಲಿ ಭವಿಷ್ಯದ ಭದ್ರತೆಗಾಗಿ ಪಿಎಫ್ ರೂಪದಲ್ಲಿ ಉಳಿಸುವ ಮೊತ್ತವನ್ನು ಪಡೆಯಲು ಮತ್ತೆ ಷರತ್ತುಗಳನ್ನು ವಿಧಿಸಿದರೆ ಕಾರ್ಮಿಕರ ಬದುಕಿಗೆ ಮತ್ತಷ್ಟು ತೊಂದರೆಯಾಗಲಿದೆ. ಸಕಾಲಕ್ಕೆ ಸಿಗಬೇಕಾದ ಪಿಎಫ್ ಹಣವನ್ನು ಪಡೆಯಲು ಅನಗತ್ಯ ನಿರ್ಬಂಧಗಳನ್ನು ವಿಧಿಸಬಾರದು ಎಂದು ಮಹಿಳಾ ಕಾರ್ಮಿಕರು ಆಗ್ರಹಿಸಿದರು.

ಭವಿಷ್ಯಕ್ಕೆ ಕುತ್ತು: ಉದ್ಯೋಗಿ ಸುಧಾ ತಾಳೇರ ಮಾತನಾಡಿ, ಕಷ್ಟಪಟ್ಟು ದುಡಿಯುವ ಕಾರ್ಮಿಕರಿಗೆ ಪಿಎಫ್ ಹಣವೆಂದರೆ ಭವಿಷ್ಯದ ಆಸರೆ. ತುರ್ತು ಸಂದರ್ಭದಲ್ಲಿ ಈ ಹಣದ ಅವಶ್ಯಕತೆ ಇರುತ್ತದೆ. ಹೀಗಿರುವಾಗ ಪಿಎಫ್ ಪಡೆಯುವುದಕ್ಕೆ ಹೊಸ ಹೊಸ ಷರತ್ತುಗಳನ್ನು ವಿಧಿಸುವುದು ಕಾರ್ಮಿಕರಿಗೆ ಹೊರೆಯಾಗಲಿದೆ. ಕೇಂದ್ರ ಸರ್ಕಾರ ಕೂಡಲೇ ಹೊಸ ನಿಯಮವನ್ನು ಮರುಪರಿಶೀಲಿಸಿ ಹಳೆಯ ವ್ಯವಸ್ಥೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ರಸ್ತೆ ತಡೆಗೆ ಸಂಚಾರ ಅಸ್ತವ್ಯಸ್ತ: ಕಾರ್ಮಿಕರು ಬಸ್ ನಿಲ್ದಾಣದ ಸಮೀಪ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದರಿಂದ ಬಸ್‌ಗಳು ಸೇರಿದಂತೆ ವಿವಿಧ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು. ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು, ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದ ಸಾರ್ವಜನಿಕರು ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಪೊಲೀಸರ ಹರಸಾಹಸ: ಪ್ರತಿಭಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ತಹಸೀಲ್ದಾರ್‌, ಸಿಪಿಐ ಎಂ.ಬಿ. ಚಿಕ್ಕಣ್ಣವರ, ಪಿಎಸ್‌ಐ ಭಾರತಿ ಕುರಿ ಹಾಗೂ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು. ರಸ್ತೆ ತಡೆಯಿಂದ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆ ಮನವರಿಕೆ ಮಾಡಿಕೊಟ್ಟು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಆದರೂ ಪ್ರತಿಭಟನಕಾರರು ತಮ್ಮ ಬೇಡಿಕೆ ಈಡೇರುವ ವರೆಗೂ ಹೋರಾಟ ಮುಂದುವರಿಸಿದರು.

ಮಾಜಿ ಶಾಸಕ ಸುರೇಶಗೌಡ ಪಾಟೀಲ ಮನವಿ: ಸ್ಥಳಕ್ಕೆ ಮಾಜಿ ಶಾಸಕ ಸುರೇಶಗೌಡ ಪಾಟೀಲ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆಯಾಗದಂತೆ ರಸ್ತೆ ತಡೆ ಕೈಬಿಟ್ಟು ತಮ್ಮ ಬೇಡಿಕೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ ತರುವಂತೆ ಉದ್ಯೋಗಿಗಳಿಗೆ ಮನವಿ ಮಾಡಿದರು. ಆದರೆ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಕುರಿತು ಸ್ಪಷ್ಟ ಭರವಸೆ ದೊರೆಯುವ ವರೆಗೆ ಪ್ರತಿಭಟನೆ ಕೈಬಿಡಲ್ಲ ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಪಿಎಫ್ ಅಧಿಕಾರಿಗಳು: ಪ್ರತಿಭಟನೆ ಸುದ್ದಿ ತಿಳಿದು ದಾವಣಗೆರೆಯಿಂದ ಆಗಮಿಸಿದ ಪಿಎಫ್ ಅಧಿಕಾರಿ ರಾಘವೇಂದ್ರ ಹಾಗೂ ಇತರರು, ಇದು ಕೇಂದ್ರ ಸರ್ಕಾರ ಮಾಡಿರುವ ಕಾನೂನು, ಇದರ ಬಗ್ಗೆ ಮಾತುಕತೆ ನಡೆದಿದೆ. ಆದ್ದರಿಂದ ತಾಳ್ಮೆ ವಹಿಸಿ ಶೀಘ್ರದಲ್ಲೇ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಆನಂತರ ಪ್ರತಿಭಟನೆ ಕೈಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡಾಕೂಟದಲ್ಲಿ ನಿರ್ಣಾಯಕರ ಪಾತ್ರ ಮಹತ್ವದ್ದು: ತಹಸೀಲ್ದಾರ್
ಜಿಪಂ ಆವರಣದಲ್ಲಿ ಸ್ವಚ್ಛತಾ ಕಾರ್ಯ