- ಬಾಳೆಹೊನ್ನೂರಿನ ಕಲಾರಂಗ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಆಶಯದಂತೆ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ವಿವಿಧೆಡೆಗಳಲ್ಲಿ ವಾರಕ್ಕೆ ಐದು ಕಡೆಗಳಲ್ಲಿ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿ ಮೊಬೈಲ್ ಆಸ್ಪತ್ರೆ ಮೂಲಕ ಸಂಚಾರಿ ಹೆಲ್ತ್ ಕ್ಯಾಂಪ್ ಆಯೋಜಿಸುವ ಉದ್ದೇಶ ಹೊಂದಲಾಗಿದೆ ಎಂದು ಆಸ್ಪತ್ರೆ ವೈದ್ಯ ಪ್ರವೀಣ್ ತಿಳಿಸಿದರು.ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್, ಲಯನ್ಸ್ ಕ್ಲಬ್ ಹಾಗೂ ಶೃಂಗೇರಿ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಶೃಂಗೇರಿ ಜಗದ್ಗುರುಗಳ ಆಶಯದಂತೆ ಅತ್ಯಾಧುನಿಕ ಸುಸಜ್ಜಿತ ಸೌಲಭ್ಯ ಗಳನ್ನು ಒಳಗೊಂಡ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿ ಸಂಚಾರಿ ಆಸ್ಪತ್ರೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಆರಂಭಿಸಿದ್ದು, ಈವರೆಗೆ ವಿವಿಧೆಡೆ ೮ ಕ್ಯಾಂಪ್‌ಗಳನ್ನು ನಡೆಸಲಾಗಿದೆ. ಪ್ರಸ್ತುತ ತಿಂಗಳಿಗೆ ಐದು ಕ್ಯಾಂಪ್‌ಗಳನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ವಾರಕ್ಕೆ ಐದು ಕ್ಯಾಂಪ್‌ಗಳನ್ನು ನಡೆಸುವ ಉದ್ದೇಶವಿದೆ.
ಸಂಚಾರಿ ಆಸ್ಪತ್ರೆಯಲ್ಲಿ ಸಾಮಾನ್ಯ ತಪಾಸಣೆ, ದಂತ, ಹೃದಯ ತಪಾಸಣೆ, ನೇತ್ರ ತಪಾಸಣೆ, ಮೂಳೆ ಸಮಸ್ಯೆಗಳ ತಪಾಸಣೆ ಮುಂತಾದವುಗಳು ಇವೆ. ಮುಂದಿನ ದಿನಗಳಲ್ಲಿ ಸಂಚಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯ ಸಹ ಅಳವಡಿಸುವ ಉದ್ದೇಶ ಹೊಂದಲಾಗಿದೆ. ಪ್ರಸ್ತುತ 30ರಿಂದ 60 ಕಿಮೀ ದೂರದವರೆಗೆ ಸಂಚಾರಿ ಆಸ್ಪತ್ರೆ ತಪಾಸಣೆ ನಡೆಸುತ್ತಿದ್ದು, ವೈದ್ಯರು ಸೇರಿದಂತೆ 25 ಸಿಬ್ಬಂದಿ ಸ್ಥಳದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಉಚಿತ ಔಷಧಿಗಳನ್ನು ಸಹ ನೀಡಲಾಗುತ್ತಿದೆ. ಸ್ಥಳದಲ್ಲೆ ರಿಯಾಯಿತಿ ದರದಲ್ಲಿ ರಕ್ತ ಪರೀಕ್ಷೆ, ಇಸಿಜಿ, ಎಕ್ಸ್-ರೇ ಸಹ ಮಾಡಲಾಗುತ್ತಿದೆ. ಜಗದ್ಗುರುಗಳ ಆಶಯದಂತೆ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ದೊರೆಯಬೇಕು ಎಂಬ ಉದ್ದೇಶದಿಂದ ಯಶಸ್ವಿ ಯಾಗಿ ಸಂಚಾರಿ ಆಸ್ಪತ್ರೆ ಯೋಜನೆ ನಡೆಸುತ್ತಿದ್ದು, ಇದು ಈ ಭಾಗದಲ್ಲಿ ಪ್ರಥಮ ಯೋಜನೆಯಾಗಿದೆ ಎಂದರು.ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಗ್ರಾಮೀಣ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಬೇಕು ಹಾಗೂ ಉತ್ತಮ ಆರೋಗ್ಯ ಸೌಲಭ್ಯ ದೊರಕಬೇಕು ಎಂಬ ಉದ್ದೇಶದಿಂದ ಜೇಸಿ, ಲಯನ್ಸ್ ಸಂಸ್ಥೆ ಜಂಟಿಯಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು, ಉತ್ತಮ ಸ್ಪಂದನೆ ದೊರೆತಿದೆ. ಶಿಬಿರದಲ್ಲಿ ೨೦೦ ಅಧಿಕ ಜನರು ನೋಂದಾಯಿಸಿಕೊಂಡು ಸದುಪಯೋಗಪಡಿಸಿಕೊಂಡಿದ್ದಾರೆ ಎಂದರು.ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಜೆ.ವಿಕ್ರಮ್ ಮಾತನಾಡಿ, ಮನುಷ್ಯನಿಗೆ ಆರೋಗ್ಯವೇ ಪ್ರಮುಖ ಭಾಗವಾಗಿದ್ದು, ಆರೋಗ್ಯ ವಿದ್ದರೆ ಯಾವ ಸಾಧನೆ ಬೇಕಾದರೂ ಮಾಡಬಹುದು. ಆರೋಗ್ಯವಿಲ್ಲದಿದ್ದರೆ ಜೀವನವೇ ನಶ್ವರ. ಈ ನಿಟ್ಟಿನಲ್ಲಿ ಶೃಂಗೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಂಚಾರಿ ವಾಹನದೊಂದಿಗೆ ಆರೋಗ್ಯ ತಪಾಸಣೆ ನಡೆಸಿ ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದರು.ಉದ್ಯಮಿ ಸಿ.ಎಂ.ದ್ವಿಜಯ್, ಜೇಸಿಐ ಸ್ಥಾಪಕ ಅಧ್ಯಕ್ಷ ಸೈಯ್ಯದ್ ಫಾಜಿಲ್ ಹುಸೇನ್, ಕಾರ್ಯದರ್ಶಿ ವಿ.ಅಶೋಕ್, ಚೈತನ್ಯ ವೆಂಕಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುಧಾಕರ್, ಖಜಾಂಚಿ ಕೆ.ಸಿ.ರವೀಂದ್ರ, ಪೂರ್ವಾಧ್ಯಕ್ಷ ಎಂ.ಡಿ.ಶಿವರಾಮ್, ಮಂಜುನಾಥ್ ತುಪ್ಪೂರು, ಅಭಿನವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯೆ ಅನುಪಮ, ಶಿಬಿರದ ಸಂಯೋಜಕ ಕಿರಣ್‌ಕುಮಾರ್ ಮತ್ತಿತರರು ಹಾಜರಿದ್ದರು.೨೮ಬಿಹೆಚ್‌ಆರ್ ೧:ಬಾಳೆಹೊನ್ನೂರಿನ ಜೇಸಿಐ, ಲಯನ್ಸ್ ಕ್ಲಬ್ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಯಮಿ ಸಿ.ಎಂ. ದ್ವಿಜಯ್ ಉದ್ಘಾಟಿಸಿದರು. ಡಾ.ಪ್ರವೀಣ್, ಇಬ್ರಾಹಿಂ ಶಾಫಿ, ಎಚ್.ಜೆ.ವಿಕ್ರಮ್, ಡಾ.ಅನುಪಮ, ಸುಧಾಕರ್, ಚೈತನ್ಯ ವೆಂಕಿ, ಕಿರಣ್‌ಕುಮಾರ್ ಇದ್ದರು.