ದುರ್ಗಾಕುಮಾರ್ ನಾಯರ್ ಕೆರೆ
ಕನ್ನಡಪ್ರಭ ವಾರ್ತೆ ಸುಳ್ಯ
ಅವಳಿಗಳು ಒಂದೇ ಕಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವುದೇ ಅಪರೂಪ. ಆದರೆ ಸುಳ್ಯ ತಾಲೂಕು ಎಣ್ಮೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಸ್ತುತ ಒಟ್ಟು ಐದು ಅವಳಿಗಳು ಅಧ್ಯಯನ ನಡೆಸುತ್ತಿದ್ದಾರೆ. ಈ ಪೈಕಿ ೪ ಅವಳಿಗಳು ಎಂಟನೇ ತರಗತಿಯೊಂದರಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ.ಎಣ್ಮೂರು ಎಂದರೆ ತುಳು ನಾಡಿನ ಪ್ರಸಿದ್ಧ ಐತಿಹಾಸಿಕ ಅವಳಿ ವೀರರಾದ ಕೋಟಿ-ಚೆನ್ನಯರ ನಾಡು ಎಂಬುದು ಮತ್ತೊಂದು ವಿಶೇಷ.
ಈ ಅವಳಿಗಳಲ್ಲಿ ಮೂರು ಗಂಡು ಅವಳಿಗಳಾದರೆ ಎರಡು ಹೆಣ್ಣು ಅವಳಿಗಳು. ಎಂಟನೇ ತರಗತಿಯಲ್ಲಿ ಕೇರ್ಪಡದ ಚಂದ್ರಶೇಖರ - ಪುಷ್ಪಾವತಿ ದಂಪತಿಯ ಮಕ್ಕಳಾದ ಯಶ್ವಿನ್ ಕೆ.ಸಿ., ಯಶ್ವಿತ್ ಕೆ.ಸಿ., ನಿಡ್ಡಾಜೆಯ ದಯಾನಂದ - ಹರಿಣಾಕ್ಷಿ ದಂಪತಿಯ ಪುತ್ರರಾದ ಛಾಯಾನ್ ಮತ್ತು ಛಾಯಾಂಕ್, ಮುಚ್ಚಿಲ ಅಡಿಬಾಯಿಯ ಮಹಮ್ಮದ್ ಬಶೀರ್ - ರೆಹಮತ್ ದಂಪತಿಯ ಮಕ್ಕಳಾದ ಫಾತಿಮಾ ತಸ್ನಾ, ಅಮೀನಾ ತಸ್ನಾ, ಮುಚ್ಚಿಲದ ದಾವೂದ್ - ಕೈರುನ್ನಿಸಾ ದಂಪತಿಯ ಪುತ್ರಿಯರಾದ ಇಭಾ ಫಾತಿಮಾ ಮತ್ತು ಶಿಫಾ ಫಾತಿಮಾ ಅವಳಿಗಳಾಗಿದ್ದಾರೆ. ಹತ್ತನೇ ತರಗತಿಯಲ್ಲಿ ಪೂದೆಯ ಭುವನೇಶ್ವರ ಪೂದೆ - ಚಂದ್ರಕಲಾ ದಂಪತಿಯ ಪುತ್ರರಾದ ಭವನ್ ಪಿ. ಮತ್ತು ಭವಿನ್ ಪಿ. ಅವಳಿಗಳಾಗಿದ್ದಾರೆ.ಇವರು ರೂಪದಲ್ಲೂ ಒಂದೇ ರೀತಿ ಇದ್ದು, ಹೀಗಾಗಿ ನೋಟದಲ್ಲಿ ಶಾಲೆಯ ಶಿಕ್ಷಕರಿಗೂ ಗೊಂದಲ ಆಗಿರುವುದುಂಟಂತೆ. ಒಂದರಿಂದ ಏಳನೇ ತರಗತಿ ವರೆಗೆ ನಮ್ಮನ್ನು ಶಿಕ್ಷಕರಿಗೇ ಗೊತ್ತೇ ಆಗ್ತಿರಲಿಲ್ಲ ಎನ್ನುತ್ತಾರೆ ಫಾತಿಮಾ, ಅಮೀನಾ.
ಆದರೆ ಪ್ರಸ್ತುತ ಈ ಶಾಲೆಯಲ್ಲಿ ಎಂಟನೇ ತರಗತಿಗೆ ಎರಡು ವಿಭಾಗ ಇರುವುದರಿಂದ ಅಂಥ ಸಮಸ್ಯೆಯೇನೂ ಆಗಿಲ್ಲ. ಈ ವಿದ್ಯಾರ್ಥಿಗಳ ಒಪ್ಪಿಗೆಯ ಮೇರೆಗೆ ಅವಳಿಗಳ ಪೈಕಿ ಒಬ್ಬೊಬ್ಬರನ್ನು ಒಂದೊಂದು ವಿಭಾಗದಲ್ಲಿ ಕೂರಿಸಲಾಗಿದೆ. ಆದರೆ ಹತ್ತನೇ ತರಗತಿಯಲ್ಲಿ ಒಂದೇ ಕ್ಲಾಸ್ ಇರುವುದರಿಂದ ಭವನ್, ಭವಿನ್ ಒಟ್ಟಿಗೇ ಇದ್ದಾರೆ.ಇವರ ಎತ್ತರ, ತೂಕ, ಚಹರೆ, ಗುಣ, ಸ್ವಭಾವ, ಆಸಕ್ತಿಗಳೂ ಬಹುತೇಕ ಒಂದೇ ಆಗಿದೆ. ಕಲಿಕೆಯಲ್ಲೂ ಸಮಾನವಾಗಿದ್ದಾರೆ. ಎಣ್ಮೂರು ಶಾಲೆಯಲ್ಲಿ ಪ್ರತಿ ವರ್ಷವೂ ಅವಳಿಗಳಿರುತ್ತಾರೆ. ಆದರೆ ಇಷ್ಟು ಸಂಖ್ಯೆಯಲ್ಲಿ ಇದೇ ಮೊದಲು....................ನಮ್ಮ ಸರ್ವಿಸ್‌ನಲ್ಲಿ ಅವಳಿಗಳನ್ನು ಕಂಡಿದ್ದೇವೆ. ಆದರೆ ಇಷ್ಟು ಸಂಖ್ಯೆಯಲ್ಲಿ ಒಂದೇ ಶಾಲೆಯಲ್ಲಿರುವುದು ಇದೇ ಮೊದಲು. ಇವರನ್ನೆಲ್ಲ ನೋಡುವಾಗ ಖುಷಿ ಆಗುತ್ತದೆ. ಆರಂಭದಲ್ಲಿ ಗೊಂದಲ ಆಗುವುದು ಸಹಜ. ಈಗ ಶಿಕ್ಷಕರಿಗೆ ಅಂಥ ಸಮಸ್ಯೆಯೇನೂ ಇಲ್ಲ.। ಟೈಟಸ್ ವರ್ಗೀಸ್, ಎಣ್ಮೂರು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ.---------------
ಕೋಟಿ ಚೆನ್ನಯರ ನಾಡಿನಲ್ಲೇ ಈ ವಿಶೇಷ!ಎಣ್ಮೂರು ಎಂದರೆ ತುಳು ನಾಡಿನ ಪ್ರಸಿದ್ಧ ಅವಳಿ ವೀರರಾದ ಕೋಟಿ-ಚೆನ್ನಯರ ನಾಡು. ಈ ಪರಿಸರದಾದ್ಯಂತ ಈ ಅವಳಿ ವೀರರ ಬದುಕಿನ ಅನೇಕ ಕುರುಹುಗಳು ಚರಿತ್ರೆಗಳಾಗಿ ನೆಲೆ ನಿಂತಿವೆ. ಇವರು ದೇಹತ್ಯಾಗ ಮಾಡಿದ ಸ್ಥಳವೂ ಇದಾಗಿದ್ದು, ಗರಡಿ ಹಾಗೂ ದೈವಸ್ಥಾನ ಕೂಡ ಇದೆ. ಇದೇ ಊರಿನ ಶಾಲೆಯಲ್ಲಿ ಇಷ್ಟು ಸಂಖ್ಯೆಯಲ್ಲಿ ಅವಳಿ ಮಕ್ಕಳಿರುವುದು ಕೂಡ ವಿಶೇಷ. ಮಾತ್ರವಲ್ಲ ಈ ಪ್ರದೇಶದಲ್ಲೂ ಅವಳಿಗಳ ಸಂಖ್ಯೆ ಅಧಿಕ ಎಂಬ ಮಾಹಿತಿ ಇದೆ. ಇಷ್ಟು ಸಣ್ಣ ಭೌಗೋಳಿಕ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಅವಳಿಗಳಿರುವುದು ಕುತೂಹಲಕಾರಿ ಕೂಡ.