ದೇಹತ್ಯಾಗಕ್ಕೆ ಮುಂದಾಗಿದ್ದ ಐವರ ರಕ್ಷಣೆ

KannadaprabhaNewsNetwork |  
Published : Sep 09, 2025, 01:01 AM IST
ಕಾಗವಾಡ | Kannada Prabha

ಸಾರಾಂಶ

ಸೆ.8ರಂದು ದೇಹತ್ಯಾಗ ಮಾಡುವುದಾಗಿ ನಿರ್ಧರಿಸಿದ್ದ ಕುಟುಂಬವೊಂದರ ಐದು ಜನ ಸದಸ್ಯರನ್ನು ತಾಲೂಕು ಆಡಳಿತ ಹಾಗೂ ಪೊಲೀಸ್‌ ಇಲಾಖೆ ರಕ್ಷಿಸಿ, ಐವರನ್ನು ಧಾರವಾಡದ ನಿಮ್ಹಾನ್ಸ್‌ ಆಸ್ಪತ್ರೆಗೆ ರವಾನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾಗವಾಡ

ಸೆ.8ರಂದು ದೇಹತ್ಯಾಗ ಮಾಡುವುದಾಗಿ ನಿರ್ಧರಿಸಿದ್ದ ಕುಟುಂಬವೊಂದರ ಐದು ಜನ ಸದಸ್ಯರನ್ನು ತಾಲೂಕು ಆಡಳಿತ ಹಾಗೂ ಪೊಲೀಸ್‌ ಇಲಾಖೆ ರಕ್ಷಿಸಿ, ಐವರನ್ನು ಧಾರವಾಡದ ನಿಮ್ಹಾನ್ಸ್‌ ಆಸ್ಪತ್ರೆಗೆ ರವಾನಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಅನಂತಪುರ ಗ್ರಾಮದ ಹೊರವಲಯದಲ್ಲಿ ವಾಸವಾಗಿರುವ ತುಕಾರಾಮ ಇರಕರ, ಪತ್ನಿ ಸಾವಿತ್ರಿ, ಮಗ ರಮೇಶ, ಸೊಸೆ ವೈಷ್ಣವಿ ಹಾಗೂ ಮಹಾರಾಷ್ಟ್ರದ ಕುಡನೂರ ಗ್ರಾಮದಲ್ಲಿದ್ದ ಮಗಳು ಮಾಯಾ ಶಿಂಧೆ ಅವರು ದೇಹ ತ್ಯಾಗಕ್ಕೆ ಸಜ್ಜಾಗಿದ್ದರು. ರಾಮಪಾಲ್ ಮಹಾರಾಜರ ಶಿಷ್ಯರಾಗಿದ್ದ ಇರಕರ ಕುಟುಂಬಸ್ಥರು, ಕಳೆದ 15 ದಿನಗಳಿಂದ ಧಾರ್ಮಿಕ ಭಕ್ತಿಯಲ್ಲಿ ಗಾಢವಾಗಿ ತೊಡಗಿ ದೇಹತ್ಯಾಗಕ್ಕೆ ಮುಂದಾಗಿದ್ದರು.

ಈ ವಿಚಾರವಾಗಿ ಜಿಲ್ಲಾಧಿಕಾರಿ ಮಹಮ್ಮದ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮತ್ತು ಹಲವಾರು ಮಠಾಧೀಶರು, ಜನಪ್ರತಿನಿಧಿಗಳು ಸೇರಿದಂತೆ ಹಲವರು ಇರಕರ ಕುಟುಂಬವನ್ನು ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ, ಆ ಸಂದರ್ಭಕ್ಕೆ ಸ್ವಲ್ಪ ಮಟ್ಟಿಗೆ ನಿರ್ಧಾರ ಬದಲಾದರೂ ಮತ್ತೆ ಯತಾಸ್ಥಿತಿಗೆ ಮರಳಿದ್ದರು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ನಿಗಾ ವಹಿಸಿದ್ದ ಸ್ಥಳೀಯ ಅಧಿಕಾರಿ ಹಾಗೂ ಪೊಲೀಸರು ಕುಟುಂಬದವರನ್ನು ಸೆ.7ರಂದು ವಶಕ್ಕೆ ಪಡೆದು ಅನಂತಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ನಂತರ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ನಿಮ್ಹಾನ್ಸ್‌ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಪ್ರಶಾಂತ ಮುನ್ನೊಳ್ಳಿ, ತಹಸೀಲ್ದಾರ್‌ ಸಿದರಾಯ ಭೋಸಗಿ, ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ಗಿರಮಲ್ಲಪ್ಪ ಉಪ್ಪಾರ, ಆರೋಗ್ಯಾಧಿಕಾರಿ ಡಾ.ಬಸಗೌಡ ಕಾಗೆ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.

ಇರಕರ ಕುಟುಂಬದವರು ಮನೋರೋಗಕ್ಕೆ ತುತ್ತಾಗಬಹುದು ಎಂದು ಬೆಳಗಾವಿಯ ಬಿಮ್ಸ್ ವೈದ್ಯಕೀಯ ಕಾಲೇಜಿನಿಂದ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ನಿಮಾನ್ಸ್‌ಗೆ ಐವರನ್ನು ಕಳುಹಿಸಿ ಕೊಡಲಾಗಿದೆ. ಡಾ.ಬಸಗೌಡ ಕಾಗೆ, ತಾಲೂಕು ವೈದ್ಯಾಧಿಕಾರಿ, ಅಥಣಿ

ಅಥಣಿ ತಾಲೂಕಿನ ಅನಂತಪೂರ ಗ್ರಾಮದ ಈರಕರ ಕುಟುಂಬಸ್ಥರಿಗೆ ಮನೋ ವೈದ್ಯಕೀಯ ಚಿಕಿತ್ಸೆ ಅವಶ್ಯಕತೆ ಕಂಡು ಬಂದಿದ್ದರಿಂದ ತಾಲೂಕು ವೈದ್ಯಾಧಿಕಾರಿ ಸಲಹೆ ಮೇರೆಗೆ ಪೊಲೀಸ್ ಬೆಂಗಾವಲಿನಲ್ಲಿ ಕಳುಹಿಸಿ ಕೊಡಲಾಗಿದೆ. ಪ್ರಶಾಂತ ಮುನ್ನೊಳ್ಳಿ, ಡಿವೈಎಸ್‌ಪಿ ಅಥಣಿ

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು