ಐವರು ಕೈದಿಗಳು ಮಂಡ್ಯ ಕಾರಾಗೃಹಕ್ಕೆ ಸ್ಥಳಾಂತರ

KannadaprabhaNewsNetwork |  
Published : Sep 03, 2025, 01:00 AM IST
2ಕೆಆರ್ ಎಂಎನ್ 4.ಜೆಪಿಜಿಜಿಲ್ಲಾ ಕಾರಾಗೃಹ | Kannada Prabha

ಸಾರಾಂಶ

ರಾಮನಗರ: ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಐವರು ಕೈದಿಗಳನ್ನು ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.

ರಾಮನಗರ: ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಐವರು ಕೈದಿಗಳನ್ನು ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.

ವಿಚಾರಣಾಧೀನ ಕೈದಿಗಳಾದ ಪ್ರಮೋದ್ ಅಲಿಯಾಸ್ ಕರಿಯ, ಪುನೀತ್ ಕುಮಾರ್ ಅಲಿಯಾಸ್ ಔಟು, ಅಭಿಷೇಕ್ ಅಲಿಯಾಸ್ ಅಭಿ, ಅರುಣ ಹಾಗೂ ದೇವರಾಜು ಸ್ಥಳಾಂತರಗೊಂಡವರು.

ಈ ಕೈದಿಗಳು ಸಂಜಯ್ ಅಲಿಯಾಸ್ ಸಂಜು ಎಂಬಾತನ ಗುಂಪಿಗೆ ಸೇರಿದವರು. ಸಂಜಯ್ ಮತ್ತು ಸಿದ್ದರಾಜು ಅಲಿಯಾಸ್ ಸೀಜಿಂಗ್ ಸಿದ್ದ ಗುಂಪಿನ ನಡುವೆ ಜಗಳ ನಡೆದಿತ್ತು. ದಲಿತ ಯುವಕನ ಕೈ ಕತ್ತರಿಸಿದ ಪ್ರಕರಣದಲ್ಲಿ ಜೈಲು ಸೇರಿರುವ ಹರ್ಷ ಅಲಿಯಾಸ್ ಕೈಮ ಮತ್ತು ದೇವರಾಜು ವಿಷಯದಲ್ಲಿ ಕಾರಾಗೃಹದಲ್ಲಿ ಗಲಾಟೆ ನಡೆದಿತ್ತು. ಆಗ ಸಿದ್ದ, ಹರ್ಷ ಪರ ನಿಂತಿದ್ದ ಎಂದು ಮೂಲಗಳು ತಿಳಿಸಿವೆ.

ಕಾರಾಗೃಹದಲ್ಲಿ ಆ.28ರಂದು ನಡೆದಿದ್ದ ಕೈದಿಗಳ ಮಾರಾಮಾರಿ ಘಟನೆಗೆ ಸಂಬಂಧಿಸಿದಂತೆ 23 ಕೈದಿಗಳ ವಿರುದ್ಧ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ವಿರುದ್ಧ ಪ್ರಕರಣ ದಾಖಲಾಗಿದೆ. ಸೀಜಿಂಗ್ ಸಿದ್ದ ಮತ್ತು ಸಂಜಯ್ ಇಬ್ಬರು ಒಂದು ಕಾಲದಲ್ಲಿ ಸ್ನೇಹಿತರಾಗಿದ್ದರು. ನಂತರ ಇಬ್ಬರ ನಡುವೆ ವೈಷಮ್ಯ ಉಂಟಾಗಿ ಪರಸ್ಪರ ದ್ವೇಷ ಕಾರುತ್ತಿದ್ದರು. ಇದೇ ಕಾರಣಕ್ಕೆ ಸಂಜು ಗುಂಪು ಸಿದ್ದನ ಕಡೆಯ ಹುಡುಗರ ಮೇಲೆ ಜುಲೈನಲ್ಲಿ ರಾಮನಗರ ಹೊರವಲಯದ ಅಚ್ಚಲು ಗ್ರಾಮದಲ್ಲಿ ಮಚ್ಚಿನಿಂದ ಹಲ್ಲೆ ನಡೆಸಿ ಅಪಹರಿಸಿ ಚನ್ನಪಟ್ಟಣ ಬಳಿಯ ಚಾಮುಂಡೇಶ್ವರಿ ಆಸ್ಪತ್ರೆ ಬಳಿ ಬಿಟ್ಟು ಹೋಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂಜಯ್, ಪುನೀತ್ ಕುಮಾರ್, ಶಶಾಂಕ, ದೇವರಾಜು, ಅರುಣ, ಪ್ರಮೋದ ಸೇರಿದಂತೆ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸರು ಎಲ್ಲರನ್ನೂ ಬಂಧಿಸಿದ್ದರು. ಈ ಪೈಕಿ, ಸಂಜಯ್‌ನನ್ನು ಮಂಡ್ಯ ಕಾರಾಗೃಹಕ್ಕೆ ಕಳುಹಿಸಿದ್ದರು. ಇತ್ತೀಚೆಗೆ ಸಿದ್ದನನ್ನು ಸಹ ಪೊಲೀಸರು ಬಂಧಿಸಿದ್ದರು.

ರಾಮನಗರ ಕಾರಾಗೃಹದಲ್ಲಿದ್ದ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಹರ್ಷ ಮತ್ತು ದೇವರಾಜ ನಡುವಣ ವೈಷಮ್ಯ ಕಾರಾಗೃಹದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಂಜಯ್ ಗುಂಪಿನವರನ್ನು ಮಂಡ್ಯ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

2ಕೆಆರ್ ಎಂಎನ್ 4.ಜೆಪಿಜಿಜಿಲ್ಲಾ ಕಾರಾಗೃಹ.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ