ಹಂಪಿ ಉತ್ಸವಕ್ಕೆ ಐದು ವೇದಿಕೆ ನಿರ್ಮಾಣ: ಜಮೀರ್ ಅಹಮದ್‌ ಖಾನ್

KannadaprabhaNewsNetwork |  
Published : Jan 16, 2026, 01:00 AM IST
ಹಂಪಿ ಉತ್ಸವದ ಮುಖ್ಯವೇದಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ಗುರುವಾರ ಪರಿಶೀಲಿಸಿದರು. ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಮತ್ತಿತರರಿದ್ದರು. | Kannada Prabha

ಸಾರಾಂಶ

ವಿಶ್ವವಿಖ್ಯಾತ ಹಂಪಿ ಉತ್ಸವವನ್ನುಈ ಬಾರಿ ಫೆ. 13, 14 ಮತ್ತು 15ರಂದು ವೈಭವದಿಂದ ಆಚರಿಸಲು ನಿರ್ಧರಿಸಲಾಗಿದ್ದು, ಮುಖ್ಯ ವೇದಿಕೆ ಸೇರಿದಂತೆ ಐದು ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹಮದ್‌ ಖಾನ್ ಹೇಳಿದರು.

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವವನ್ನುಈ ಬಾರಿ ಫೆ. 13, 14 ಮತ್ತು 15ರಂದು ವೈಭವದಿಂದ ಆಚರಿಸಲು ನಿರ್ಧರಿಸಲಾಗಿದ್ದು, ಮುಖ್ಯ ವೇದಿಕೆ ಸೇರಿದಂತೆ ಐದು ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹಮದ್‌ ಖಾನ್ ಹೇಳಿದರು.

ಹಂಪಿಗೆ ಗುರುವಾರ ಭೇಟಿ ನೀಡಿ ಹಂಪಿ ಉತ್ಸವ ನಡೆಯುವ ಮುಖ್ಯ ವೇದಿಕೆ ಸ್ಥಳ ಪರಿಶೀಲನೆ ನಡೆಸಿ ವಾಹನಗಳ ನಿಲುಗಡೆ ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ಆನಂತರ ದಿನಾಂಕಗಳನ್ನು ಅಂತಿಮಗೊಳಿಸಲಾಗಿದೆ. ಈ ಬಾರಿ ಕೇವಲ ಮುಖ್ಯ ವೇದಿಕೆಗೆ ಸೀಮಿತವಾಗದೆ, ಒಟ್ಟು ಐದು ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ವ್ಯಾಪಕ ಪ್ರಚಾರ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಕಲಾವಿದರ ಆಯ್ಕೆ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರನ್ನು ಆಹ್ವಾನಿಸುವ ಕುರಿತು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಧ್ರುವ ಸರ್ಜಾ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸುವ ಕುರಿತು ಚರ್ಚಿಸಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಸ್ಥಳೀಯ ಕಲಾವಿದರಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದರು.

ಹೊಸ ವಿನ್ಯಾಸ: ಕಳೆದ ಎರಡು ವರ್ಷಗಳಿಗಿಂತ ಈ ಬಾರಿ ವೇದಿಕೆಯ ವಿನ್ಯಾಸ ಮತ್ತು ಸ್ಮಾರಕಗಳ ಮಾದರಿಗಳು ವಿಭಿನ್ನವಾಗಿ ಮತ್ತು ಆಕರ್ಷಕವಾಗಿರಲಿವೆ. ಕಳೆದ ವರ್ಷದಂತೆ ಈ ಬಾರಿ ರೈತರೊಂದಿಗೆ ಚರ್ಚಿಸಿ ಹೆಚ್ಚಿನ ಪಾರ್ಕಿಂಗ್ ಸ್ಥಳಾವಕಾಶಕ್ಕೆ ಒಪ್ಪಿಗೆ ಪಡೆಯಲಾಗುತ್ತದೆ. ರೈತರ ಬೆಳೆ ನಷ್ಟವಾದಲ್ಲಿ ಅದಕ್ಕೆ ಪರಿಹಾರ ನೀಡಿ ಉತ್ಸವಕ್ಕೆ ಪಾರ್ಕಿಂಗ್‌ಗೆ ಬಳಕೆ ಮಾಡಿಕೊಂಡು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ರಸ್ತೆ ದುರಸ್ತಿ: ಹಗರಿಬೊಮ್ಮನಹಳ್ಳಿಯಿಂದ ಶಿವಮೊಗ್ಗ ರಸ್ತೆ ಸೇರಿದಂತೆ ಉತ್ಸವಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿರುವ ಬಗ್ಗೆ ದೂರುಗಳು ಬಂದಿದ್ದು, ಅವುಗಳನ್ನು ಕೂಡಲೇ ದುರಸ್ತಿ ಮಾಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ನಾಡಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ಅಕ್ರಂ ಅಲಿ ಷಾ, ಎಸ್ಪಿ ಎಸ್. ಜಾಹ್ನವಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿ ಉತ್ಸವ ನಾಡಹಬ್ಬದಂತೆ ವಿಜೃಂಭಣೆಯಿಂದ ಆಚರಿಸೋಣ: ಜಮೀರ್ ಅಹಮದ್‌ ಖಾನ್
ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮದೇವಿ ದರ್ಶನ