ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಅಪರಾಧಿಗಳಿಗೆ ಐದು ವರ್ಷ ಜೈಲು

KannadaprabhaNewsNetwork | Published : Mar 25, 2025 12:47 AM

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೨೩ ಜನ ಅಪರಾಧಿಗಳಿಗೆ ಸೋಮವಾರ ಐದು ವರ್ಷಗಳ ಶಿಕ್ಷೆ ಪ್ರಕಟಿಸಿದೆ.

ಲಕ್ಷ್ಮೇಶ್ವರ: ಪಟ್ಟಣದ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೨೩ ಜನ ಅಪರಾಧಿಗಳಿಗೆ ಸೋಮವಾರ ಐದು ವರ್ಷಗಳ ಶಿಕ್ಷೆ ಪ್ರಕಟಿಸಿದೆ.

8 ವರ್ಷಗಳ ನಂತರ ಅಪರಾಧಿಗಳಿಗೆ ಶಿಕ್ಷೆ ಘೋಷಣೆಯಾಗಿದೆ. ಸಾರ್ವಜನಿಕ ಸ್ವತ್ತು ಹಾಳು ಮಾಡಿರುವ ಆರೋಪದಡಿಯಲ್ಲಿ ಅಪರಾಧಿಗಳಿಗೆ ಶಿಕ್ಷೆ ಮತ್ತು ಪರಿಹಾರ ಪ್ರಕಟಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಯಾವೆಲ್ಲ ಶಿಕ್ಷೆ ಎನ್ನುವುದನ್ನು ಸೋಮವಾರ ಸಂಜೆ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ವರ ಶೆಟ್ಟಿ ಪ್ರಕಟಿಸಿದರು. ಪ್ರಕರಣದ ಪ್ರಮುಖ ಆರೋಪಿ ರವಿ ಹತ್ತಾಳ, ರಾಜು ಉಡಚಪ್ಪ ಹೊಳಲಾಪುರ ಅವರಿಗೆ ೫ ವರ್ಷ ಜೈಲು ಶಿಕ್ಷೆ ಜೊತೆಗೆ ತಲಾ ₹ ೫ ಲಕ್ಷ ದಂಡ ವಿಧಿಸಿ ಆದೇಶಿದ್ದಾರೆ. ಮಹಾಂತೇಶ ಉಡಚಪ್ಪ ಹೊಳಲಾಪುರ, ಪರಮೇಶ ಹತ್ತಾಳ, ಮಂಜಪ್ಪ ಮೇಟಿ, ಮಹಾಂತೇಶ ಶಿಂಧೆ, ಸುರೇಶ ಸ್ವಾದಿ, ಬಸವರಾಜ ಉಡಚಪ್ಪ ಹೊಳಲಾಪುರ, ಶರಣಪ್ಪ ಚೋಟಗಲ್, ಜೈಲಾನಿ ತಾಂಬೂಲಿ, ಶಿವಪ್ಪ ಕುರಿ ಸೇರಿದಂತೆ 9 ಅಪರಾಧಿಗಳಿಗೆ ೫ ವರ್ಷ ಜೈಲು ಮತ್ತು ತಲಾ ₹೧ ಲಕ್ಷ ದಂಡ ವಿದಿಸಲಾಗಿದೆ.

ಉಳಿದಂತೆ ಮಲ್ಲಪ್ಪ ಹತ್ತಾಳ, ಬಸವರಾಜ ಕೊರವನ್ನವರ, ಬೀರಪ್ಪ ಬಳ್ಳಾರಿ, ಪರಸಪ್ಪ ಮೇಟಿ, ಮಂಜಯ್ಯ ಬಾಳಿಹಳ್ಳಿಮಠ, ಮಂಜಪ್ಪ ಇಮ್ಮಡಿ, ಶಂಭುಲಿಂಗಯ್ಯ ಬರಗುಂಡಿಮಠ, ಇರಫಾನ ತಹಸೀಲ್ದಾರ್, ಮೈನುದ್ದೀನ ತಹಸೀಲ್ದಾರ್, ಬಸವರಾಜ ಹರಿಜನ, ರಾಜು ಹರಿಜನ, ಚಂದ್ರಶೇಖರ ಸಾಧು ಅವರಿಗೆ ಐದು ವರ್ಷ ಜೈಲು ಮತ್ತು ೫ ಸಾವಿರ ಹಾಗೂ ೧ ಸಾವಿರ ದಂಡ ವಿಧಿಸಿದ್ದಾರೆ.

3 ಜನ ಗ್ರಾಪಂ ಸದಸ್ಯರು: ಲಕ್ಷ್ಮೇಶ್ವರ ಪೊಲೀಸ್ ಠಾಣೆ ಸುಟ್ಟ ಪ್ರಕರಣದಲ್ಲಿ 3 ಜನ ಈಗ ಗ್ರಾಪಂ ಸದಸ್ಯರಾಗಿದ್ಧಾರೆ. ಶಿಗ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಶಿವಪ್ಪ ಕುರಿ, ಸದಸ್ಯ ಸುರೇಶ ಸ್ವಾದಿ ಹಾಗೂ ಬಟ್ಟೂರ ಗ್ರಾಪಂ ಸದಸ್ಯ ಮಾಲತೇಶ ಹೊಳಲಾಪುರ ಅವರನ್ನು ಅಪರಾಧಿಗಳೆಂದು ತೀರ್ಪು ಪ್ರಕಟಿಸಿದ್ದಾರೆ. ದಂಡದಿಂದ ಬಂದ ₹ ೧೨.೭೨ ಲಕ್ಷಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ, ಪಿರ್ಯಾದಿದಾರ ಪೊಲೀಸ್‌ ಸಿಬ್ಬಂದಿ ಕೆ.ಎನ್.ಮುಡಿಯಮ್ಮನವರ ಮತ್ತು ಎಫ್.ಬಿ. ತುರನೂರ ಅವರಿಗೆ ತಲಾ ₹೩೫ ಸಾವಿರ ಪರಿಹಾರ ಮತ್ತು ಸಿ.ಆರ್.ಸವಣೂರ ಅವರಿಗೆ ₹ ೧೦ ಸಾವಿರಗಳ ಪರಿಹಾರ ಹಣವನ್ನು ನ್ಯಾಯಾಲಯಕ್ಕೆ ಭರಣ ಮಾಡಬೇಕೆಂದು ತೀರ್ಪಿನಲ್ಲಿ ಆದೇಶಿಸಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ೧೧೨ ಜನರ ಮೇಲೆ ಕೇಸ್ ದಾಖಲು ಮಾಡಲಾಗಿತ್ತು. ಈ ೧೧೨ ಜನರಲ್ಲಿ ೮ ಜನರು ಮೃತಪಟ್ಟಿದ್ದು, ಓರ್ವ ಬಾಲಪರಾಧಿ ಇದ್ದಾನೆ. ಉಳಿದ ೧೦೩ ಜನರ ಮೇಲೆ ತನಿಖೆ ನಡೆಸಲಾಗಿದ್ದು, ಅದರಲ್ಲಿ ೨೩ ಜನರಿಗೆ ಮಾತ್ರ ಕೋರ್ಟ್‌ ಶಿಕ್ಷೆಯನ್ನು ನೀಡಿದೆ.

ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ದೊಡ್ಡಗೌಡರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

Share this article