ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಕುಡಿಯುವ ನೀರು ಯೋಜನೆ ಸಂಬಂಧ ಹಿಂದಿನ ಅಧಿಕಾರ ಅವಧಿಯ ಜನಪ್ರತಿನಿಧಿ ಹಾಗೂ ಆಡಳಿತಾಧಿಕಾರಿಗಳ ಲೋಪವನ್ನು ಸರಿಪಡಿಸಿ ಕಾಮಗಾರಿ ಅಂತಿಮಗೊಳಿಸುವಂತೆ ಕ್ರಮ ವಹಿಸಲಾಗಿದೆ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ 4ನೇ ಹಂತದ 3 ಕೋಟಿ ರು. ವೆಚ್ಚದಲ್ಲಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿನ ವಿವಿಧ ವಾರ್ಡ್ ಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕುಡಿಯುವ ನೀರಿನ ಯೋಜನೆ ಕಾಮಗಾರಿ ಅಂತಿಮಗೊಳ್ಳುವ ಮೊದಲೇ ಪುರಸಭೆ ಆಡಳಿತ ಮಂಡಳಿ ಇಲ್ಲದಿದ್ದಾಗ ಪುರಸಭೆಗೆ ಹಸ್ತಾಂತರ ಮಾಡಿ ಯೋಜನೆಯು ಹಳ್ಳ ಹಿಡಿಯುವಂತೆ ಮಾಡಲಾಗಿತ್ತು. ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿ ಯೋಜನೆ ಸರಿಪಡಿಸುವಂತೆ ತಾಕೀತು ಮಾಡಿದ್ದರಿಂದ ಗುತ್ತಿಗೆದಾರ ಕಾಮಗಾರಿಯನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಿದರು.ಮನವಿ ಮೇರೆಗೆ ಪೌರಾಡಳಿತ ಸಚಿವರು ವಿಶೇಷ ಅನುದಾನ ನೀಡಿದ್ದಾರೆ. ಇಂದು ಸುಮಾರು ಮೂರು ಕೋಟಿ ರು. ಹೆಚ್ಚು ಅನುದಾನದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ವಿಶೇಷ ಅನುದಾಡಿಯಲ್ಲಿ ಒಳಚರಂಡಿ ಕಾಮಗಾರಿಗೆ 10 ಕೋಟಿ ಜೊತೆಗೆ ಸದ್ಯದಲ್ಲಿಯೇ 5 ಕೋಟಿ ರು. ಅನುದಾನ ಬಿಡುಗಡೆಯಾಗಲಿದೆ. ಪ್ರಸಕ್ತ ವರ್ಷದಲ್ಲಿ ಸುಮಾರು 30 ಕೋಟಿ ಅನುದಾನದಲ್ಲಿ ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಬಸವರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿ.ರಾಜು, ದೊಡ್ಡಯ್ಯ, ದೇವರಾಜು, ಪುರಸಭೆ ಸದಸ್ಯರಾದ ಶಿವಸ್ವಾಮಿ, ಪ್ರಮೀಳ, ನಾಮನಿರ್ದೇಶಕರಾದ ಆನಂದ, ಬಸವರಾಜು, ಮಾರೇಹಳ್ಳಿ ಬಸವರಾಜು, ಸಂತೋಷ್, ಮುಖಂಡರಾದ ಮಲ್ಲಯ್ಯ, ಶಿವರಾಜು, ಶಿವಕುಮಾರ್, ಅಂಬರೀಷ್, ಮುಖ್ಯಾಧಿಕಾರಿ ನಾಗರತ್ನ, ಲೋಕಪಯೋಗಿ ಇಲಾಖೆ ಎಇ ಸೋಮಶೇಖರ್ ಸೇರಿದಂತೆ ಇತರರು ಇದ್ದರು.