ಕನ್ನಡಪ್ರಭ ವಾರ್ತೆ, ಶೃಂಗೇರಿ
ಪ್ರತೀ ತಿಂಗಳ ಮೊದಲ ವಾರದಲ್ಲಿ ಪಡಿತರ ಕೇಂದ್ರಗಳಲ್ಲಿ ಪಡಿತರ ನೀಡಲಾಗುತ್ತಿತ್ತು. ಆದರೆ ಅಕ್ಟೋಬರ್ ತಿಂಗಳಲ್ಲಿ ಮಾತ್ರ ತಿಂಗಳ ಕೊನೆಯಲ್ಲಿ ಪಡಿತರ ನೀಡಲಾಗುತ್ತಿದ್ದರೂ ಸರ್ವರ್ ಸಮಸ್ಯೆಯಿಂದ ಜನರಿಗೆ ತೊಂದರೆಯಾಗುತ್ತಿದೆ. ಎಲ್ಲಾ ಪಡಿತರ ಕೇಂದ್ರಗಳ ಎದುರು ಜನರು ಸಾಲುಗಟ್ಟಿ, ಗುಂಪುಕಟ್ಟಿ ಬೆಳೆಗ್ಗೆಯಿಂದ ಸಂಜೆಯವರೆಗೂ ಕಾದು ನಿಲ್ಲುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ದೂರದೂರದ ಹಳ್ಳಿಗಾಡಿನಿಂದ ಬೆಳಿಗ್ಗೆಯಿಂದಲೇ ಬಂದು ಕಾದು ಕಾದು ಸರ್ವರ್ ಸಿಗದೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಿರಾಶೆಯಿಂದ ಮರಳುತ್ತಿದ್ದಾರೆ. ಕೆಲವರು ಕೂಲಿ ಕೆಲಸ ಬಿಟ್ಟು ಇತ್ತ ಪಡಿತರವೂ ಇಲ್ಲ, ಅತ್ತ ದಿನದ ಕೆಲಸವೂ ಇಲ್ಲ ಎಂಬಂತೆ ನಷ್ಟ ಅನುಭವಿಸುತ್ತಿದ್ದಾರೆ.
ಸರ್ವರ್ ಪದೇ ಪದೇ ಬಂದು ಹೋಗುವುದರಿಂದ, ಕೆಲವೆಡೆ ಸರ್ವರ್ ಸಿಗದೇ ಇರುವುದರಿಂದ ಪಡಿತರದಾರರಿಗೆ ತೊಂದರೆಯುಂಟಾಗುತ್ತಿದೆ. ದೀಪಾವಳಿ ಹಬ್ಬ ಹತ್ತಿರದಲ್ಲಿದ್ದು, ತಿಂಗಳು ಕಳೆಯುತ್ತಾ ಬಂದಿರುವುದರಿಂದ ಮತ್ತಷ್ಟು ತೊಂದರೆಯಾಗುತ್ತಿದೆ. ಸಂಬಂಧ ಪಟ್ಟ ಇಲಾಖೆ, ಆಹಾರ ಇಲಾಖೆಯವರು ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಂಡು ಪಡಿತರದಾರರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.27 ಶ್ರೀ ಚಿತ್ರ 2-ರಮೇಶ್ ಶೂನ್ಯ.