ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಆಗ್ರಹ

KannadaprabhaNewsNetwork |  
Published : Nov 13, 2025, 01:30 AM IST
ಫೋಟೋ :: 11ಎಚ್‌ಎನ್‌ಎಲ್3 | Kannada Prabha

ಸಾರಾಂಶ

ಹಾನಗಲ್ಲಿನ ಲೊಯೋಲಾ ವಿಕಾಸ ಕೇಂದ್ರದಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ ಸಹಯೋಗದಲ್ಲಿ ಸರ್ಕಾರಿ ಆರೋಗ್ಯ ವ್ಯವಸ್ಥೆ ಉಳಿಸಿ, ಜನರನ್ನು ರಕ್ಷಿಸಿ ಕುರಿತು ಹಾವೇರಿ ಜಿಲ್ಲಾ ಮಟ್ಟದ ಅಭಿಯಾನ ಮತ್ತು ತರಬೇತಿ ಕಾರ್ಯಾಗಾರ ನಡೆಯಿತು.

ಹಾನಗಲ್ಲ: ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ, ತಂತ್ರಜ್ಞರೂ ಇಲ್ಲ, ಔಷಧಿ ಹಾಗೂ ಮೂಲಭೂತ ಕೊರತೆಗಳನ್ನೊಳಗೊಂಡು ಆಸ್ಪತ್ರೆಗಳು ಕುಂದು-ಕೊರತೆಗಳ ಸಂಗಮವಾಗಿವೆ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ಸಂಯೋಜಕ ಎ.ಎಫ್. ನಾಯ್ಕರ ಖೇದ ವ್ಯಕ್ತಪಡಿಸಿದರು.ಇಲ್ಲಿಯ ಲೊಯೋಲಾ ವಿಕಾಸ ಕೇಂದ್ರದಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ ಸಹಯೋಗದಲ್ಲಿ ನಡೆದ ಸರ್ಕಾರಿ ಆರೋಗ್ಯ ವ್ಯವಸ್ಥೆ ಉಳಿಸಿ, ಜನರನ್ನು ರಕ್ಷಿಸಿ ಕುರಿತು ಹಾವೇರಿ ಜಿಲ್ಲಾ ಮಟ್ಟದ ಅಭಿಯಾನ ಮತ್ತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಬಡವರ ಆರೋಗ್ಯಕ್ಕಾಗಿರುವ ಆಸ್ಪತ್ರೆಗಳು ಬಡವರಿಗಾಗಿ ನಿಲುಕುತ್ತಿಲ್ಲ. ವೈದ್ಯರಿಲ್ಲದೆ ಆರೋಗ್ಯ ಕೇಂದ್ರಗಳಿದ್ದೇನು ಫಲ? ಇಲ್ಲಿ ಔಷಧಿಯೂ ಇಲ್ಲದೆ, ಅಗತ್ಯ ತಂತ್ರಜ್ಞಾನದ ಸಾಮಗ್ರಿಗಳಿಲ್ಲದೆ ಬಡವರು ಆರೋಗ್ಯ ಸೇವೆ ಹೇಗೆ ಸಾಧ್ಯ? ಸರ್ಕಾರ ಕೂಡಲೇ ಈ ಅವ್ಯವಸ್ಥೆ ಸರಿಪಡಿಸಿ ವೈದ್ಯರನ್ನು ನೇಮಿಸಬೇಕು ಎಂದರು.ಸಾಮಾಜಿಕ ಹೋರಾಟಗಾರರಾದ ಡಾ. ಅಖಿಲಾ ಮತ್ತು ಡಾ. ಶಿಲ್ವಿಯಾ, ಡಾ. ಎನ್.ಎಫ್. ಕಮ್ಮಾರ ಮಾತನಾಡಿ, ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸೌಲಭ್ಯ ಸಿಗದಿದ್ದಾಗ ಅದನ್ನು ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಈ ಬಗ್ಗೆ ಗ್ರಾಮಸ್ಥರು ಒಟ್ಟಾಗಿ ಸರ್ಕಾರದ ಗಮನ ಸೆಳೆಯಬೇಕು. ವೈದ್ಯರ ಕೊರತೆ, ಗರ್ಭಿಣಿಯರಿಗೆ ರಕ್ತದ ಕೊರತೆ, ಪೌಷ್ಟಿಕತೆಯ ಕೊರತೆ, ಮಕ್ಕಳ ಅನುಪಾತ ಮುಂತಾದ ವಿಷಯಗಳಲ್ಲಿ ಸಮೀಕ್ಷೆ ನಡೆಸಿ ಸಂಘಟನೆ ಮೂಲಕ ಸರ್ಕಾರದ ಗಮನ ಸೆಳೆಯಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮತನಾಡಿದ ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕ ವಿನ್ಸಂಟ್ ಜೇಸನ್, ಸಮುದಾಯದಲ್ಲಿ ಆರೋಗ್ಯದ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳೆಲ್ಲವನ್ನು ಪಡೆಯುವಲ್ಲಿ ಸಂಘಟನೆ ಮತ್ತು ಹೋರಾಟದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಬೇಕು. ನಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು ಎಂದರು. ಜನವೇದಿಕೆ ಮುಖಂಡರು, ಪ್ರಗತಿಪರ ಸಂಘಟನೆ ಸದಸ್ಯರು, ಗ್ರಾಮಾಭಿವೃದ್ಧಿ ,ರೈತ ಸಂಘ, ಕಟ್ಟಡ ಕಾರ್ಮಿಕ ಯುನಿಯನ್, ಆರೋಗ್ಯ ರಕ್ಷಾ ಸಮಿತಿ, ಆಶಾ ಕಾರ್ಯಕರ್ತೆಯರು, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಜೈ ಭೀಮ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದಲ್ಲಿ ಆಸ್ಪತ್ರೆಗಳ ಸೌಲಭ್ಯಗಳಿಗಾಗಿ ಹೋರಾಟ ನಡೆಸಲು ಬಸವರಾಜ ಕೋತಂಬ್ರಿ ಅವರ ಅಧ್ಯಕ್ಷತೆಯಲ್ಲಿ, ಪದ್ಮಾ ಮಾಂಗಲೇನವರ, ಗಂಗಮ್ಮ ಅಣ್ಣಣ್ಣೇರ ಅವರ ನೇತೃತ್ವದಲ್ಲಿ ಸಮಾಲೋಚಿಸಿ, ಹೋರಾಟದ ರೂಪುರೇಷೆಗಳನ್ನು ರೂಪಿಸಲು ಜವಾಬ್ದಾರಿ ನೀಡಲಾಯಿತು. ಬಿ.ಆರ್. ಶೆಟ್ಟರ, ಮಾಲಿಂಗಪ್ಪ ಅಕ್ಕಿವಳ್ಳಿ, ಕಲೀಮ ಮಾಸನಕಟ್ಟಿ, ಚೈತ್ರಾ ಕಂಬಾಳಿಮಠ, ಮಾರ್ತಂಡಪ್ಪ ತಳವಾರ, ಮಂಜುನಾಥ ಕುದರಿ, ಮಂಜುನಾಥ ಕರ್ಜಗಿ, ಮಂಜಣ್ಣ ವಾಲ್ಮೀಕಿ, ರಾಮಣ್ಣ ಮುದ್ದಕ್ಕನವರ, ಶಾರದಾ ಚನ್ನಾಪುರ, ಈರಪ್ಪ ನಾಗೋಜಿ, ರೋಶನಿ ಮತ್ತು ಲೊಯೋಲಾ ಸಂಸ್ಥೆಯ ಸಿಬ್ಬಂದಿ ಇದ್ದರು.ವೈ.ಕೆ. ಗೌರಮ್ಮ ಕಾರ್ಯಕ್ರಮ ನಿರೂಪಿಸಿದರು. ವೈ.ಎಸ್. ಹೊನ್ನಮ್ಮ ಸ್ವಾಗತಿಸಿದರು. ಎಸ್.ವಿ. ಪಾಟೀಲ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು