ಸರ್ವೇ ಇಲಾಖೆಯಲ್ಲಿನ ಭ್ರಷ್ಟಾಚಾರ,ದಲ್ಲಾಳಿಗಳ ವಿರುದ್ಧ ರೈತಸಂಘ ಆಕ್ರೋಶ
ಮಾಲೂರು: ಇಲ್ಲಿನ ಸರ್ವೇ ಇಲಾಖೆಯಲ್ಲಿ ಬಡವರ ರಕ್ತ ಹೀರುವ ದಲ್ಲಾಳಿಗಳ ಹಾವಳಿ ಹಾಗೂ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡುವ ಜತೆಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿ ರೈತ ಸಂಘವು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿತು.ರಾಜ್ಯ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಸರ್ವೇ ಇಲಾಖೆಯು ಬಡವರ ಪಾಲಿಗೆ ಮುಳ್ಳಿನ ಹಾದಿಯಾಗಿ, ಭೂಗಳ್ಳರಿಗೆ, ದಲ್ಲಾಳಿಗಳಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿದೆ ಎಂದು ಆರೋಪಿಸಿದರು.ಲಕ್ಷ ಲಕ್ಷ ಸಂಬಳ ಪಡೆದು ದೇಶಕ್ಕೆ ಅನ್ನ ಹಾಕುವ ರೈತರು ಹಾಗೂ ಜೀವನಕ್ಕಾಗಿ ಕೂಲಿ ಮಾಡುವ ಕಾರ್ಮಿಕರ ಹತ್ತಿರ ಚಿಕ್ಕಪುಟ್ಟ ಕೆಲಸಕ್ಕೂ ಲಂಚಕ್ಕಾಗಿ ಕೈಚಾಚುವ ಅಧಿಕಾರಿಗಳಿಗೆ ಬಡವರ ಶಾಪ ತಟ್ಟುತ್ತದೆ. ರೈತರು, ಸಾಮಾನ್ಯ ಜನರು ೩ ತಿಂಗಳು ಕಾದರೂ ಒಂದು ಕೆಲಸ ಆಗುವುದಿಲ್ಲ. ಆದರೆ ಭೂಗಳ್ಳರು ನೇರವಾಗಿ ಕಚೇರಿಗೆ ಹೋಗಿ ಅಧಿಕಾರಿಗಳಿಗೆ ಮುಖ ತೋರಿಸಿಕೊಂಡು ಬಂದರೆ ಸಾಕು, ೨೪ ಗಂಟೆಯಲ್ಲಿ ಕೆಲಸ ಮಾಡಿ ದಾಖಲೆಗಳನ್ನು ಸಿದ್ಧ ಮಾಡಿಕೊಡುತ್ತಾರೆ. ಭೂಗಳ್ಳರ ಭಿಕ್ಷೆಯನ್ನು ಸ್ವೀಕರಿಸುವ ಅಧಿಕಾರಿಗಳ ಮನಸ್ಥಿತಿಗೆ ಧಿಕ್ಕಾರವಿರಲಿ ಎಂದು ಆಕ್ರೋಶಗೊಂಡರು.
ರೈತಸಂಘದ ತಾಲೂಕು ಅಧ್ಯಕ್ಷ ಪೆಮ್ಮದೂಡ್ಡಿ ಯಲ್ಲಣ್ಣ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರವಾಗಬೇಕಾಗಿದ್ದ ಮಿನಿ ವಿಧಾನಸೌಧವು ದಲ್ಲಾಳಿಗಳ ಮನೆಯಾಗಿರುವುದು ಶಾಸಕರ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿ, ಹದಗೆಟ್ಟಿರುವ ಸರ್ಕಾರಿ ಕಚೇರಿಗಳು, ಅಧಿಕಾರಿಗಳ ಮೇಲೆ ಶಾಸಕರು ಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಹೊಸಹಳ್ಳಿ ವೆಂಕಟೇಶ್, ಹರೀಶ್, ಪ್ರಕಾಶ್, ರೂಪೇಶ್, ಗಿರೀಶ್ ಇನ್ನಿತರರು ಇದ್ದರು.