ಶಿಕಾರಿಪುರ ಪಟ್ಟಣದಲ್ಲಿ ಮೂಲಸೌಕರ್ಯಗಳತ್ತ ಸರಿಪಡಿಸಿ

KannadaprabhaNewsNetwork |  
Published : Feb 26, 2024, 01:31 AM IST
ಬಜೆಟ್ ಪೂರ್ವಬಾವಿ ಸಭೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ಯತೀಶ್ ಮಾತನಾಡಿದರು | Kannada Prabha

ಸಾರಾಂಶ

ಶಿಕಾರಿಪುರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬಜೆಟ್ ಕುರಿತ ಚರ್ಚೆಗಾಗಿ ಆಯೋಜಿಸಲಾಗಿದ್ದ ಸಭೆಯಲ್ಲಿ ಇ-ಸ್ವತ್ತು ಮತ್ತಿತರ ದಾಖಲೆ ಪತ್ರಗಳ ಸೌಲಭ್ಯಕ್ಕಾಗಿ ಜನತೆ ನಿರಂತರ ಕಚೇರಿಗಳಿಗೆ ಅಲೆದಾಟ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ಯತೀಶ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರು ಸಭೆಯಲ್ಲಿ ಮೂಲಸೌಕರ್ಯಗಳ ಅವ್ಯವಸ್ಥೆ ಕುರಿತು ಸಭೆ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬಜೆಟ್ ಕುರಿತ ಚರ್ಚೆಗಾಗಿ ಆಯೋಜಿಸಲಾಗಿದ್ದ ಸಭೆಯಲ್ಲಿ ಇ-ಸ್ವತ್ತು ಮತ್ತಿತರ ದಾಖಲೆ ಪತ್ರಗಳ ಸೌಲಭ್ಯಕ್ಕಾಗಿ ಜನತೆ ನಿರಂತರ ಕಚೇರಿಗಳಿಗೆ ಅಲೆದಾಟ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ಯತೀಶ್ ಅಧ್ಯಕ್ಷತೆ ವಹಿಸಿದ್ದರು.

ಸದಸ್ಯರು ಸಭೆಯಲ್ಲಿ ಮೂಲಸೌಕರ್ಯಗಳ ಅವ್ಯವಸ್ಥೆ ಕುರಿತು ಸಭೆ ಗಮನ ಸೆಳೆದರು. ಕುಡಿಯುವ ನೀರಿನ ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡಿದರೂ ಸಮಸ್ಯೆ ಪರಿಹಾರ ಆಗಿಲ್ಲ, ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಹೀಗಿದ್ದರೂ ಸಂಪರ್ಕ ನೀಡಲಾಗುತ್ತಿದೆ. ಸದಸ್ಯರ ಮನೆ ಎದುರೇ ಒಳಚರಂಡಿ ಭರ್ತಿಯಾಗಿವೆ. ಅವ್ಯವಸ್ಥೆ ಸರಿಪಡಿಸುವಂತೆ ಮುಖ್ಯಾಧಿಕಾರಿಗೆ ಮನವಿ ಮಾಡಿದ್ದೇವೆ, ವಾರ ಕಳೆದರೂ ಸಮಸ್ಯೆ ಪರಿಹಾರ ಆಗಿಲ್ಲ. ಇ-ಸ್ವತ್ತು ಸೌಲಭ್ಯಕ್ಕಾಗಿ ಯುವಕನೋರ್ವ ಕಚೇರಿ ಎದುರು ಆತ್ಮಹತ್ಯೆಗೆ ಯತ್ನಿಸಿದರೂ ಆಡಳಿತ ಎಚ್ಚೆತ್ತುಕೊಂಡಿಲ್ಲ. ಜನತೆ ಕಚೇರಿ ಅಲೆಯುವುದು ಇನ್ನೂ ತಪ್ಪಿಲ್ಲ ಎಂದು ದೂರಿದರು.

ಪಟ್ಟಣದ ಹಲವು ಕಡೆ ಬೀದಿದೀಪ ಸಮಸ್ಯೆ ಇದೆ. ಜನನಿಬಿಡ ಜಾಗದಲ್ಲಿ ಸಹ ಕತ್ತಲೆ ಆವರಿಸಿದೆ. ಇಡೀ ಪಟ್ಟಣದಲ್ಲಿ ವಿದ್ಯುತ್ ಬಲ್ಬ್‌ಗಳು ಸರಿಯಿಲ್ಲದ ಕಡೆ ಗುರುತಿಸಿ, ಅಲ್ಲಿ ಎಲ್ಇಡಿ ದೀಪಗಳನ್ನು ಅಳವಡಿಸಬೇಕು. ಬಹುತೇಕರು ರಸ್ತೆಗಳನ್ನು ಒತ್ತುವರಿ ಮಾಡಿ ಅಂಗಡಿ ಇಟ್ಟುಕೊಂಡಿದ್ದಾರೆ, ಅವುಗಳನ್ನು ತೆರವುಗೊಳಿಸಬೇಕು. ಪುರಸಭೆಗೆ ಯಾವುದೆ ಹೊಸ ವಾಹನ ಬಂದರೂ ಆರು ತಿಂಗಳಿಗೆ ರಿಪೇರಿ ಬರುತ್ತಿವೆ ಇದೊಂದು ಹುನ್ನಾರ ಇರಬೇಕು ತನಿಖೆ ನಡೆಸಬೇಕು. ಆರಂಭದಲ್ಲಿ ಒಂದು ತಿಂಗಳು ಮಾತ್ರ ಉತ್ತಮ ಕಾರ್ಯನಿರ್ವಹಿಸಿದ್ದ ಮುಖ್ಯಾಧಿಕಾರಿಗಳು ಇದೀಗ ಕೆಲಸಕ್ಕಿಂತ ಹಾರಿಕೆ ಉತ್ತರ ನೀಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ಮತ್ತೆ ಕೆಲ ಸದಸ್ಯರು ಆರೋಪಿಸಿದರು.

ಪಟ್ಟಣದ ಹಲವು ಕಡೆಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉದ್ಭವವಾಗಿದ್ದು, ಹೊಸ ಬೋರ್‌ವೆಲ್‌ಗಳ ತೆಗೆಸಿ, ತುರ್ತಾಗಿ ಕುಡಿಯುವ ನೀರಿನ ಸರಬರಾಜಿಗೆ ಹೆಚ್ಚಿನ ಆದ್ಯತೆ ನೀಡಲು ಬಜೆಟ್‌ನಲ್ಲಿ ಪ್ರಾಮುಖ್ಯತೆ ನೀಡಬೇಕು. ಪುರಸಭೆಯಲ್ಲಿನ ಏಕೈಕ ಮುಕ್ತಿವಾಹನ ದುರಸ್ತಿ ಕಾರ್ಯದಿಂದಾಗಿ ಸಮಸ್ಯೆಯಾಗಿದೆ. ಪರ್ಯಾಯವಾಗಿ ಹೊಸ ಮುಕ್ತಿವಾಹನ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಸದಸ್ಯರು, ನೂತನವಾಗಿ ಪಟ್ಟಣದ ಪ್ರಮುಖ ವೃತ್ತದಲ್ಲಿ ಪ್ರತಿಷ್ಠಾಪಿಸಲಾದ ಅಂಬೇಡ್ಕರ್, ಬಸವೇಶ್ವರರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿ ಸುತ್ತಮುತ್ತಲಿನ ಸ್ಥಳ ಮಲಿನವಾಗಿದ್ದು, ಆಗಾಗ ಸ್ವಚ್ಚಗೊಳಿಸಿ ದಾರ್ಶನಿಕರಿಗೆ ಗೌರವ ಸಲ್ಲಿಸುವಂತೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಸದಸ್ಯರ ಎಲ್ಲ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಯತೀಶ್, ಕುಡಿಯುವ ನೀರಿಗೆ ಹೆಚ್ಚಿನ ಅನುದಾನ ಮೀಸಲಿಟ್ಟು ತುರ್ತಾಗಿ ಎಲ್ಲ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡುವ ಜತೆಗೆ ಆದ್ಯತೆ ಮೇರೆಗೆ ಇತರೆ ಸಮಸ್ಯೆ ಪರಿಹರಿಸಲು ಸೂಚಿಸಿದರು.

ಸಭೆಯಲ್ಲಿ ಸದಸ್ಯ ಪಾಲಾಕ್ಷಪ್ಪ ಭದ್ರಾಪುರ, ಹುಲ್ಮಾರ್ ಮಹೇಶ್, ಉಳ್ಳಿ ದರ್ಶನ್, ಸುರೇಶ್, ಗೋಣಿ ಪ್ರಕಾಶ್, ರೇಖಾಬಾಯಿ, ರೋಷನ್, ಶೈಲಾ ಮಡ್ಡಿ, ಶ್ವೇತಾ, ಶಕುಂತಲಮ್ಮ, ಜಯಶ್ರೀ, ರೇಣುಕಸ್ವಾಮಿ, ರಮೇಶ (ಗುಂಡ), ರೂಪಕಲಾ ಹೆಗ್ಡೆ, ಪ್ರಶಾಂತ್ ಜೀನಳ್ಳಿ, ಮಹಮ್ಮದ್ ಸಾಧಿಕ್, ಉಮಾವತಿ, ಫೈರೋಜಾ ಭಾನು ಸೇರಿದಂತೆ ಸಾರ್ವಜನಿಕರು, ಸಂಘ ಸಂಸ್ಥೆ ಪದಾಧಿಕಾರಿಗಳು, ಮುಖ್ಯಾಧಿಕಾರಿ ಭರತ್, ರಾಜಕುಮಾರ್, ನವಾಜ್, ಮೋಹನ್, ಪರಶುರಾಮ ಮತ್ತು ಸಿಬ್ಬಂದಿ ಹಾಜರಿದ್ದರು.

- - -

ಟಾಪ್‌ ಕೋಟ್‌ ಶಿಕಾರಿಪುರ ಪಟ್ಟಣದ ಪ್ರಮುಖ ವೃತ್ತ ದೇವಸ್ಥಾನ ಸಮೀಪ ಸಿಸಿ ಕ್ಯಾಮರಾ ಅಳವಡಿಸಬೇಕು. ಅದಕ್ಕೆ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಬೇಕು. ಇತ್ತೀಚೆಗೆ ಯುವಕನೋರ್ವನಿಗೆ ಚಾಕು ಇರಿತ ನಡೆದಿದೆ, ವಿಠಲ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಅಂತಹ ಹಲವು ಸಮಸ್ಯೆಗೆ ಪರಿಹಾರವಾಗಿ ಸಿಸಿ ಟಿವಿ ಕ್ಯಾಮರಾಗಳ ಅಳವಡಿಕೆ ತುರ್ತು ಅಗತ್ಯವಾಗಿದೆ

- ಮಂಜುನಾಥ, ಅಧ್ಯಕ್ಷ, ಜಯಕರ್ನಾಟಕ ಸಂಘಟನೆ

- - -

-25ಕೆಎಸ್.ಕೆಪಿ1:

ಶಿಕಾರಿಪುರದ ಪುರಸಭೆಯಲ್ಲಿ ನಡೆದ ಬಜೆಟ್ ಪೂರ್ವಬಾವಿ ಸಭೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ಯತೀಶ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ