ಕನ್ನಡಪ್ರಭ ವಾರ್ತೆ ಮಳವಳ್ಳಿ
ಶಾಂತಿ ಕಾಲೇಜು ಮುಂಭಾಗದ 33 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಬೃಹತ್ ವೇದಿಕೆ ಆವರಣದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸುಪ್ರಭಾತ, ಪಂಚಾಕ್ಷರಿ ಮಂತ್ರ ಪಠಣ, ಸಾಮೂಹಿಕ ಪ್ರಾರ್ಥನೆಗಳೊಂದಿಗೆ ಧಾರ್ಮಿಕ ಆಚರಣೆಗಳು ಆರಂಭಗೊಂಡವು. ನಂತರ ಮೈಸೂರಿನ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಧ್ವಜಾರೋಹಣ ನೇರವೇರಿಸಿದರು.
ಷಡಕ್ಷರ ದೇವ ಅನುಭವ ಮಂಟಪವನ್ನು ಮೈಸೂರಿನ ಸಿದ್ದಮಲ್ಲ ಸ್ವಾಮೀಜಿ ಉದ್ಘಾಟಿಸಿದರೆ, ಜಗದ್ಗುರು ಶ್ರೀ ಘನಲಿಂಗ ಶಿವಯೋಗಿ ವೇದಿಕೆಯನ್ನು ಹುಂಡಿ ಮಠದ ಗೌರಿ ಶಂಕರ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಮಂಟೇಸ್ವಾಮಿ ದ್ವಾರವನ್ನು ಬೊಪ್ಪೇಗೌಡನಪುರ ಹೋಬಳಿಯ ಮಂಟೇಸ್ವಾಮಿ ಮಠದ ಜ್ಞಾನಾನಂದ ಚೆನ್ನರಾಜೇ ಅರಸು ಉದ್ಘಾಟಿಸಿದರು.ನಂತರ ಸಿದ್ದಪ್ಪಾಜಿ ದ್ವಾರಕ್ಕೆ ಮೈಸೂರಿನ ಕಲ್ಯಾಣ ಸಿರಿ ಬಂತೇಜಿ ಅವರು ಚಾಲನೆ ನೀಡಿದರು. ನಂತರ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಎಲ್ಲರೂ ಸೇರಿ ಮುಖ್ಯ ವೇದಿಕೆಯನ್ನು ಉದ್ಘಾಟಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಕನಕಪುರ ಶ್ರೀದೇಗುಲ ಮಠದ ಚನ್ನಬಸವ ಸ್ವಾಮೀಜಿ ಸೇರಿದಂತೆ ಸಮಿತಿಯ ಸದಸ್ಯರು, ಮುಖಂಡರು ಹಾಗೂ ಹಲವಾರು ಮಠಾಧೀಶರು ಪಾಲ್ಗೊಂಡಿದ್ದರು.ಮೊದಲ ದಿನ 30 ಸಾವಿರಕ್ಕೂ ಅಧಿಕ ಮಂದಿಗೆ ದಾಸೋಹ
ಮಳವಳ್ಳಿ: ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಏಳು ದಿನಗಳ ಶ್ರೀಶಿವರಾತ್ರೀಶ್ವರರ ಜಯಂತ್ಯುತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರ ಸಮೂಹವೇ ಹರಿದು ಬಂದಿತ್ತು.ಭಕ್ತರು, ಸಾರ್ವಜನಿಕರಿಗಾಗಿ ವ್ಯವಸ್ಥಿತವಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಬೆಳಗ್ಗೆ ವಿಶೇಷವಾಗಿ ವಾಂಗಿಬಾತ್, ಕಾರಬಾತ್, ಕೇಸರಿಬಾತ್, ಮಧ್ಯಾಹ್ನ ಬಿಸಿ ಬೆಳೆಬಾತ್, ಮೊಸರನ್ನ, ಜಾಮೂನು ಹಾಗೂ ರಾತ್ರಿ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 30ಕ್ಕೂ ಅಧಿಕ ಮಂದಿ ದಾಸೋಹ ಸ್ವೀಕರಿಸಿದರು ಎಂದು ಹೇಳಲಾಗಿದೆ.ಅಘೋಷಿತ ಬಂದ್ ವಾತಾವರಣಮಳವಳ್ಳಿಗೆ ಇತಿಹಾಸದಲ್ಲೇ ರಾಷ್ಟ್ರದ ಪ್ರಥಮ ಪ್ರಜೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸ್ವಾಗತಕ್ಕೆ ಇಡೀ ಪಟ್ಟಣವೇ ಶೃಂಗಾರಗೊಂಡಿತ್ತು.
ರಾಷ್ಟ್ರಪತಿ ದ್ರೌಪತಿ ಮುರ್ಮು ಅವರ ಆಗಮನದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ರಸ್ತೆ, ಮೈಸೂರು ರಸ್ತೆಗಳಲ್ಲಿನ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಭದ್ರತಾ ದೃಷ್ಟಿಯಿಂದ ಮುಚ್ಚಿಸಿ ಅಘೋಶಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ವೇದಿಕೆ ಬಳಿಯ ರಸ್ತೆಯ ಬದಿಗಳಲ್ಲಿ ನಿಂತ ಸಾವಿರಾರು ಜನರು ದ್ರೌಪತಿ ಮುರ್ಮು ಅವರನ್ನು ನೋಡಿ ಖುಷಿಪಟ್ಟರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಲಿಪ್ಯಾಡ್ ಸ್ಥಳದಿಂದ ಪಟ್ಟಣದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಭದ್ರತೆಗಾಗಿ ಸಾವಿರಾರು ಮಂದಿ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.ಸಾವಯವ ಕೃಷಿ ಉಪನ್ಯಾಸಮಳವಳ್ಳಿ: ಶಿವರಾತ್ರೀಶ್ವರರ ಜಯಂತ್ಯುತ್ಸವ ಅಂಗವಾಗಿ ಮಂಗಳವಾರ ಸಂಜೆ ಸಾವಯವ ಕೃಷಿ-ಸಿರಿಧಾನ್ಯ ಮತ್ತು ಉತ್ಪನ್ನಗಳು ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಆರ್ಗ್ ಟ್ರೀನ ತೆಂಕಹಳ್ಳಿ ಬಿ.ಮಹೇಶ್ ಉಪನ್ಯಾಸ ನೀಡಿ, ಸಾವಯವ ಕೃಷಿ ಪದ್ದತಿ ಮೂಲಕ ಬೆಳೆಯುವ ರಾಗಿ, ನವಣೆ, ಸಾಮೆ ಸೇರಿದಂತೆ ಅನೇಕ ಸಿರಿಧಾನ್ಯಗಳಲ್ಲಿ ಪೋಷಕಾಂಶಗಳು, ನಾರಿನಾಂಶ ಹೆಚ್ಚಿದ್ದು, ಮಧುಮೇಹ, ಹೃದಯ ರೋಗ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.
ಇತ್ತೀಚಿನ ದಿನಮಾನಗಳಲ್ಲಿ ಸಾವಯವ ಕೃಷಿಯತ್ತ ಜನರು ಚಿಂತನೆ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ರಾಸಾಯನಿಕ ಗೊಬ್ಬರ ಬಳಕೆಯನ್ನು ನಿಲ್ಲಿಸುವ ಮೂಲಕ ಭೂಮಿ ಫಲವತತ್ತೆಯನ್ನು ಕಾಪಾಡಿಕೊಳ್ಳುವುದು ಅನಿವಾರ್ಯತೆ ಎಂದು ಮಹತ್ವ ಸಾರಿದರು. ಚಂದ್ರವನ ಆಶ್ರಮದ ದುರದುಂಡೇಶ್ವರ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.