ವೈದ್ಯರು, ವಿವಿಧ ಸಂಘ-ಸಂಸ್ಥೆಗಳಿಂದ ಪ್ರತಿಭಟನೆ, ಆಕ್ರೋಶ । ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ
ಕನ್ನಡಪ್ರಭ ವಾರ್ತೆ ಕಾರಟಗಿಕೋಲ್ಕತ್ತಾದ ವೈದ್ಯಕೀಯ ಕಾಲೇಜಿನ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ತಾಲೂಕಿನ ವೈದ್ಯರು ಮತ್ತು ವಿವಿಧ ಸಂಘ-ಸಂಸ್ಥೆಗಳು ಪಟ್ಟಣದಲ್ಲಿ ಸೋಮವಾರ ರಾತ್ರಿ ಪಂಜಿನ ಮೆರವಣಿಗೆ, ಪ್ರತಿಭಟನೆ ನಡೆಸಿದರು.
ಇಲ್ಲಿನ ಬಯಲು ರಂಗಮಂದಿರದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಪಟ್ಟಣದ ಪ್ರಮುಖ ರಸ್ತೆಯ ಮೂಲಕ ನವಲಿ ವೃತ್ತದವರೆಗೆ ಬೃಹತ್ ಪಂಜಿನ ಮೆರವಣಿಗೆ ನಡೆಸಿದರು. ದಾರಿಯೂದ್ದಕ್ಕೂ ಘಟನೆ ಕುರಿತು ಮತ್ತು ವೈದ್ಯೆಯ ಕೊಲೆಗೆ ಕಾರಣರಾದ ಆರೋಪಿಗಳನ್ನು ಗಲ್ಲಿಗೆ ಏರಿಸಬೇಕೆಂದು ಘೋಷಣೆ ಕೂಗಿ ಒತ್ತಾಯಿಸಿದರು. ನೂತನ ಬಸ್ ನಿಲ್ದಾಣದವರೆಗೆ ಪಂಜಿನ ಮೆರಣಿಗೆ ಮತ್ತು ಮೆಣದಬತ್ತಿ ಹಿಡಿದ ವೈದ್ಯರು ಅಲ್ಲಿ ಸಮಾವೇಶಗೊಂಡರು.ಈ ವೇಳೆ ಭಾರತೀಯ ವೈದ್ಯಕೀಯ ಸಂಸ್ಥೆಯ ರಾಜ್ಯ ಸದಸ್ಯೆ ಡಾ. ಸುಲೋಚನಾ ಚಿನಿವಾಲರ್ ಮಾತನಾಡಿ, ವೈದ್ಯ ವಿದ್ಯಾರ್ಥಿನಿ ಮೇಲಿನ ಈ ದುಷ್ಕೃತ್ಯ ದೇಶದ ನಾಗರೀಕರಲ್ಲಿ ತೀವ್ರವಾದ ಆತಂಕ, ಗಾಬರಿ ಮತ್ತು ಆಘಾತವನ್ನುಂಟು ಮಾಡಿದೆ. ಜನರ ಜೀವವನ್ನು ರಕ್ಷಿಸಬೇಕಾದ ವೈದ್ಯರಿಗೆ ರಕ್ಷಣೆ ಇಲ್ಲದಿರುವುದು ಶೋಚನೀಯ. ಇಂಥ ಘಟನೆಗಳನ್ನು ತಡೆಯಲು ಕೇಂದ್ರ ಸರ್ಕಾರ ರಚನಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಪೊಲೀಸ್ ಮತ್ತು ಆರೋಗ್ಯ ಇಲಾಖೆಯಿಂದ ಸೂಕ್ತ ಭದ್ರತೆ ಕಲ್ಪಿಸಬೇಕು. ಕರ್ತವ್ಯ ನಿರತ ವೈದ್ಯರನ್ನು ಗೌರವದಿಂದ ನೋಡಬೇಕು. ಆರೋಗ್ಯ ಸೇವೆಯಲ್ಲಿ ನಿರತರಾಗಿರುವವರಿಗೆ ರಕ್ಷಣೆ ನೀಡಲು ಕಠಿಣ ಕಾನೂನು ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹೆಜ್ಜೆ ಮಹಿಳಾ ಸಂಘಟನೆಯ ಅಧ್ಯಕ್ಷೆ ಡಾ. ಶಿಲ್ಪಾ ದಿವಟರ್ ಮಾತನಾಡಿ, ವೈದ್ಯರು ದಿನದ ೨೪ ಘಂಟೆ ತುರ್ತು ಸೇವೆ ಮಾಡಬೇಕಿರುತ್ತದೆ. ಆದರೆ, ವೈದ್ಯರಿಗೆ ಇತ್ತೀಚಿನ ದಿನಗಳಲ್ಲಿ ರಕ್ಷಣೆ ಇಲ್ಲವಾಗಿದೆ. ಮಹಿಳಾ ವೈದ್ಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಭಯಪಡುತ್ತಿದ್ದಾರೆ. ಮಹಿಳಾ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು. ವೈದ್ಯಕೀಯ ನಿಯಮಾವಳಿಗಳನ್ನು ಕೂಡಲೇ ಜಾರಿಗೊಳಿಸಬೇಕು ಎಂದರು.ಡಾ. ಮಧುಸೂಧನ ಹುಲಗಿ, ಮಂಜುನಾಥ್ ಮಸ್ಕಿ, ಮರುಳಸಿದ್ದಯ್ಯಸ್ವಾಮಿ ಹಿರೇಮಠ ಮಾತನಾಡಿದರು. ಸ್ಥಳದಲ್ಲಿದ್ದ ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ ಮೂಲಕ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.ಈ ಸಂದರ್ಭ ಡಾ. ಎಂ.ಐ. ಮುದುಗಲ್, ಡಾ. ಎಸ್.ಬಿ. ಶೆಟ್ಟರ್, ಡಾ. ವೀರಣ್ಣ, ಡಾ. ಆನಂದ ದಿವಟರ್, ಡಾ. ಅವಿನಾಶ್ ಬಾವಿ, ಡಾ. ಶ್ರೀಹರಿ, ಡಾ. ಸಚಿನ್, ಡಾ. ವಿಜಯಭಾಸ್ಕರ್, ಡಾ. ವೆಂಕಟೇಶ್, ಡಾ. ಜಿತೇಂದ್ರ, ಡಾ. ಅಶೋಕಬಾಬು, ಡಾ. ಸೀಮಾ, ಡಾ. ಸುಶ್ಮಿತಾ, ವೈದ್ಯ ಅಧಿಕಾರಿಗಳಾದ ಡಾ. ನಾಗರಾಜ್, ಡಾ. ರಾಮಣ್ಣ, ಡಾ. ವೆಂಕಟೇಶ್, ರಮೇಶ್ ಇಲ್ಲೂರು, ಹನುಮಂತಪ್ಪ ಗುರಿಕಾರ್, ಶರಣಪ್ಪ ಮಾವಿನಮಡಗು, ಪುರಸಭೆ ಸದಸ್ಯೆ ಅರುಣಾದೇವಿ, ಜಾಗೃತ ಯುವಕ ಸಂಘದ ಅಧ್ಯಕ್ಷ ಬಸವರಾಜ್ ಶೆಟ್ಟರ್, ಗೌರವಾಧ್ಯಕ್ಷ ಶರಣಪ್ಪ ಕೋಟ್ಯಾಳ, ಪ್ರಹ್ಲಾದ ಜೋಷಿ, ಪ್ರಮುಖರಾದ ಸರಸ್ವತಿ ವಿಶ್ವನಾಥ್ ಪಾಟೀಲ್, ರತ್ನಕುಮಾರಿ, ರಾಜೇಶ್ವರಿ ನಾಯಕ್, ರತ್ನಕುಮಾರಿ, ರೈತ ಸಂಘದ ಬಸವರಾಜ್ ಬಿಲ್ಗಾರ್, ನಾರಾಯಣ ಈಡಿಗೇರ್, ವೀರಣ್ಣ ಕಾರಂಜಿ, ರಜಬ್ ಅಲಿ, ಜಿಲಾನಿಸಾಬ್, ಖಾದರಬಾಷಾ ಸೇರಿದಂತೆ ಶುಶ್ರೂಷಕಿಯರು ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.