ಸ್ಟಾರ್ಟ್‌ಅಪ್‌ ಉತ್ತೇಜನಕ್ಕೆ ಫ್ಲಾಟ್‌ ಫ್ಲೋರ್‌ ಫ್ಯಾಕ್ಟರಿ: ಸಚಿವ ಖರ್ಗೆ

KannadaprabhaNewsNetwork | Published : Feb 2, 2025 1:00 AM

ಸಾರಾಂಶ

ಬಿಯಾಂಡ್‌ ಬೆಂಗಳೂರು ಎಂಬುದು ಬರೀ ಘೋಷಣೆಯಾಗಬಾರದು. ಅದು ನೈಜರೂಪಕ್ಕೆ ಬರಬೇಕು. ಅದಕ್ಕೆ ಬೇಕಾದ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರ ಸಿದ್ಧವಿದೆ. ಎರಡನೆಯ ಮತ್ತು ಮೂರನೆಯ ಸ್ತರದ ನಗರಗಳಿಗೆ ಕೈಗಾರಿಕೆಗಳು ಬರಬೇಕು. ಅಂದಾಗ ಅಭಿವೃದ್ಧಿಗೆ ವೇಗ ದೊರೆಯುತ್ತದೆ.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಯಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡುವುದಕ್ಕೆ ಫ್ಲಾಟ್‌-ಫ್ಲೋರ್‌ ಫ್ಯಾಕ್ಟರಿ ಸ್ಥಾಪಿಸಲಾಗುವುದು ಎಂದು ಐಟಿ-ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಘೋಷಿಸಿದರು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಎರಡು ದಿನಗಳ ''''''''ಟೈಕಾನ್ ಹುಬ್ಬಳ್ಳಿ -2025'''''''' ವಾರ್ಷಿಕ ವಾಣಿಜ್ಯೋದ್ಯಮ ಶೃಂಗಸಭೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಿಯಾಂಡ್‌ ಬೆಂಗಳೂರು ಎಂಬುದು ಬರೀ ಘೋಷಣೆಯಾಗಬಾರದು. ಅದು ನೈಜರೂಪಕ್ಕೆ ಬರಬೇಕು. ಅದಕ್ಕೆ ಬೇಕಾದ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರ ಸಿದ್ಧವಿದೆ. ಎರಡನೆಯ ಮತ್ತು ಮೂರನೆಯ ಸ್ತರದ ನಗರಗಳಿಗೆ ಕೈಗಾರಿಕೆಗಳು ಬರಬೇಕು. ಅಂದಾಗ ಅಭಿವೃದ್ಧಿಗೆ ವೇಗ ದೊರೆಯುತ್ತದೆ. ಹಾಗಂತ ಸದ್ಯ ಟೈರ್‌-2, ಟೈರ್‌-3 ಸಿಟಿಗಳಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಯುವ ಸಮೂಹ ಮುಂದೆ ಬರುತ್ತಿಲ್ಲ ಅಂತೇನೂ ಇಲ್ಲ. ಸಾಕಷ್ಟು ಜನ ಯುವ ಸಮೂಹ ಸ್ಟಾರ್ಟ್‌ಅಪ್‌ಗಳನ್ನು ತೆರೆಯಲು ಮುಂದೆ ಬರುತ್ತಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ. ಆದರೆ, ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡಲು ಸಿದ್ಧವಿದೆ ಎಂದರು.

ಬಜೆಟ್‌ನಲ್ಲಿ ಘೋಷಣೆ:

ಪ್ರಸಕ್ತ ಬಜೆಟ್‌ನಲ್ಲಿ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಗೆ ಪ್ಲಗ್ ಮತ್ತು ಪ್ಲೇ ಸೌಲಭ್ಯದೊಂದಿಗೆ ಫ್ಲಾಟ್-ಫ್ಲೋರ್ ಫ್ಯಾಕ್ಟರಿ ಘೋಷಿಸಲಾಗುವುದು. ಒಂದು ವೇಳೆ ಬಜೆಟ್‌ನಲ್ಲಿ ಘೋಷಣೆಯಾಗದಿದ್ದರೂ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಯಲ್ಲಿ ಫ್ಲಾಟ್‌- ಫ್ಲೋರ್‌ ಸ್ಥಾಪಿಸುವುದು ಖಚಿತ ಎಂದು ಭರವಸೆ ನೀಡಿದ ಅವರು, ಸ್ಟಾರ್ಟ್‌ಅಪ್‌ಗಳು ಮತ್ತು ಎಂಎಸ್‌ಎಂಇಗಳು ಪ್ಲಗ್ ಮತ್ತು ಪ್ಲೇ ಸೌಲಭ್ಯವನ್ನು ಬಳಸಿಕೊಳ್ಳಬಹುದು, ಇದು ಬೆಳವಣಿಗೆಗೆ ಉತ್ತೇಜನ ನೀಡುತ್ತದೆ ಎಂದರು.

ಐಟಿ ಪಾರ್ಕ್‌ ನವೀಕರಣ:

ಹುಬ್ಬಳ್ಳಿಯ ಐಟಿ ಪಾರ್ಕ್ ಅನ್ನು ಸಂಪೂರ್ಣವಾಗಿ ನವೀಕರಿಸಲಾಗುವುದು. ಅಲ್ಲಿ ಸಾಮರ್ಥ್ಯ ನಿರ್ಮಾಣ ಕೇಂದ್ರ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ತೆರಯಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಈ ಪ್ರದೇಶವು ಪ್ರತಿಭಾವಂತ ಮಾನವ ಸಂಪನ್ಮೂಲವನ್ನು ಹೊಂದಿದೆ. ಆದರೆ, ಅವರಿಗೆ ಸರಿಯಾದ ಕೌಶಲ್ಯ ನೀಡಿದರೆ ಇನ್ನೂ ಉತ್ತಮ ಪ್ರತಿಭಾವಂತರಾಗಿ ಹೊರಹೊಮ್ಮುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದ ಅವರು, ನಾವೀನ್ಯತೆ ಎಂಬುದು ಬರೀ ಬೆಂಗಳೂರಿಗೆ ಸೀಮಿತವಾಗಿಲ್ಲ. ಶೇ. 32 ಸ್ಟಾರ್ಟ್‌ಅಪ್‌ಗಳು ಟೈರ್ -2 ಮತ್ತು ಟೈರ್ -3 ನಗರಗಳಿಂದ ಬಂದಿವೆ ಎಂದು ಖರ್ಗೆ ಹೇಳಿದರು.

ಉತ್ತರ ಕರ್ನಾಟಕ ಪ್ರದೇಶವು ಪ್ರತಿಭಾವಂತ ಮಾನವ ಸಂಪನ್ಮೂಲ ಹೊಂದಿದೆ ಎಂದ ಅವರು, ‘ನಿಪುಣ ಕರ್ನಾಟಕ’ ಕೌಶಲ್ಯ ಕಾರ್ಯಕ್ರಮದಡಿ ಎರಡು ಲಕ್ಷ ಜನರಿಗೆ ತರಬೇತಿ ನೀಡಲಾಗುತ್ತಿದ್ದು, ಇದಕ್ಕಾಗಿ ಸರ್ಕಾರ ₹ 300 ಕೋಟಿ ವೆಚ್ಚ ಮಾಡಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಎನ್‌.ಎಚ್‌. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಸ್ವರ್ಣ ಗ್ರೂಪ್‌ ಆಫ್‌ ಕಂಪನೀಸ್‌ ಮಾಲೀಕ ವಿಎಸ್‌ವಿ ಪ್ರಸಾದ, ಟೈಕಾನ್‌ ಅಧ್ಯಕ್ಷ ಡಾ. ವಿವೇಕ ಪಾಟೀಲ, ನಾಗರಾಜ ಕೊಟಗಿ, ವಿಜಯ ಮಾನೆ ಸೇರಿದಂತೆ ಹಲವರಿದ್ದರು.

ಇದೇ ವೇಳೆ ವಿವಿಧ ಉದ್ಯಮಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

Share this article