ಬೆಂಗಳೂರಿನಲ್ಲಿ ಫ್ಲೆಕ್ಸ್ ಹಾವಳಿ ಹಿನ್ನೆಲೆಯಲ್ಲಿ ಕೈಗೊಂಡ ಕ್ರಮಗಳ ವರದಿ ನೀಡುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಅಕ್ರಮವಾಗಿ ಅಳವಡಿಸಿರುವ ಜಾಹೀರಾತು ಫಲಕ, ಬ್ಯಾನರ್/ಹೋರ್ಡಿಂಗ್‌ಗಳನ್ನು ತೆರವುಗೊಳಿಸಿರುವ ಹಾಗೂ ತಪ್ಪಿತ್ಥರ ವಿರುದ್ಧ ಕೈಗೊಂಡಿರುವ ಕ್ರಮದ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆಯನ್ನು ಆಕ್ಷೇಪಿಸಿ ಬೆಂಗಳೂರಿನ ಮಾಯಿಗೇಗೌಡ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಬಿಬಿಎಂಪಿಯ ಅನುಮತಿ ಪಡೆಯದೆ ಮತ್ತು ಶುಲ್ಕ ಪಾವತಿಸದೇ ಅಕ್ರಮ ಜಾಹೀರಾತು/ಹೋರ್ಡಿಂಗ್‌ಗಳನ್ನು ಅಳವಡಿಸಿದ್ದರೆ ತಪ್ಪಿತಸ್ಥ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಮುಂದಿನ ದಿನಗಳಲ್ಲಿ ಸೂಕ್ತ ಆದೇಶ ಹೊರಡಿಸಲಾಗುವುದು.
ಇದರಲ್ಲಿ ದುಬಾರಿ ದಂಡ ಅಥವಾ ವ್ಯಾಪ್ತಿ ಹೊಂದಿದ ಪೊಲೀಸರಿಗೆ ಪ್ರಕರಣದ ದಾಖಲಿಸಲು ಸೂಚಿಸಲಾಗುವುದು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಹೈಕೋರ್ಟ್ ಹಲವು ನಿರ್ದೇಶನಗಳ ಹೊರತಾಗಿಯೂ ನಗರದಲ್ಲಿ ಅನಧಿಕೃತವಾಗಿ ಜಾಹೀರಾತು ಫಲಕಗಳನ್ನು ಅಳವಡಿಕೆ ಹಾವಳಿ ಮುಂದುವರಿದಿದೆ.
ಅಕ್ರಮ ಜಾಹೀರಾತು ಮತ್ತು ಹೋರ್ಡಿಂಗ್‌ಗಳನ್ನು ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ಇದು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ತಿಳಿಸಿದ ಅರ್ಜಿದಾರರ ಪರ ವಕೀಲರು, ಆ ಕುರಿತು ಪೋಟೋ ಸಹಿತ ಸಲ್ಲಿಸಿದ ಮೆಮೊವನ್ನು ನ್ಯಾಯಪೀಠ ಪರಿಗಣಿಸಿತು.
ಅರ್ಜಿದಾರರು ತಿಳಿಸುವ ಜಾಹೀರಾತುಗಳ ಸಂಬಂಧ ಬಿಬಿಎಂಪಿಯಿಂದ ಪೂರ್ವಾನುಮತಿ ಪಡೆಯಲಾಗಿದೆಯೇ ಅಥವಾ ಇಲ್ಲವೇ? ಪೂರ್ವಾನುಮತಿ ಪಡೆಯದೇ ಹೋದರೆ ಅವರ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆ ತಡೆಯುವ ಕುರಿತು ನ್ಯಾಯಾಲಯ ನೀಡಿರುವ ಹಿಂದಿನ ಆದೇಶಗಳನ್ವಯ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸಬೇಕು.
ಜತೆಗೆ ಅನಧಿಕೃತ ಜಾಹೀರಾತು ಫಲಕಗಳನ್ನು ತಡೆಯಲು ವಿಫಲವಾಗಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವ ಕ್ರಮಕೈಗೊಳ್ಳಲಾಗಿದೆ.
ಅಕ್ರಮ ಜಾಹೀರಾತು ಅಳವಡಿಸಿರುವ ಮಾಹಿತಿಯನ್ನು ವ್ಯಾಪ್ತಿ ಹೊಂದಿದ ಪೊಲೀಸರಿಗೆ ತಿಳಿಸಿದ ನಂತರ ಅವರು ಕೈಗೊಂಡಿರುವ ಕ್ರಮವನ್ನು ತಿಳಿಸಬೇಕು ಎಂಬ ಬಗ್ಗೆಯೂ ವರದಿಯಲ್ಲಿ ಮಾಹಿತಿ ನೀಡಬೇಕು ಎಂದು ಬಿಬಿಎಂಪಿಗೆ ನ್ಯಾಯಪೀಠ ನಿರ್ದೇಶಿಸಿದೆ.