ರಾಜ್ಯದ ಪ್ರಮುಖ ಜಿಲ್ಲೆಗಳಿಂದ ರಾಷ್ಟ್ರದ ಪ್ರಮುಖ ನಗರಗಳಿಗೆ ವೈಮಾನಿಕ ಸೇವಾ ಸಂಪರ್ಕ ಕಲ್ಪಿಸುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ವಿಮಾನಯಾನ ಸಂಸ್ಥೆಗಳ ನಿರಾಸಕ್ತಿಯಿಂದಾಗಿ ಮಂಕು ಕವಿದಿದ್ದು, ಹೊಸ ವಿಮಾನ ನಿಲ್ದಾಣಗಳಿಂದ ವಿಮಾನಗಳು ಹಾರಾಟ ನಡೆಸುವುದು ಬಹುತೇಕ ಅನುಮಾನ ಎನಿಸಿದೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರಾಜ್ಯದ ಪ್ರಮುಖ ಜಿಲ್ಲೆಗಳಿಂದ ರಾಷ್ಟ್ರದ ಪ್ರಮುಖ ನಗರಗಳಿಗೆ ವೈಮಾನಿಕ ಸೇವಾ ಸಂಪರ್ಕ ಕಲ್ಪಿಸುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ವಿಮಾನಯಾನ ಸಂಸ್ಥೆಗಳ ನಿರಾಸಕ್ತಿಯಿಂದಾಗಿ ಮಂಕು ಕವಿದಿದ್ದು, ಹೊಸ ವಿಮಾನ ನಿಲ್ದಾಣಗಳಿಂದ ವಿಮಾನಗಳು ಹಾರಾಟ ನಡೆಸುವುದು ಬಹುತೇಕ ಅನುಮಾನ ಎನಿಸಿದೆ.
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾದರೂ ಅಲ್ಲಿಂದ ವಿಮಾನಗಳು ಹಾರಾಟ ನಡೆಸಿದ್ದು ಅಷ್ಟಕಷ್ಟೆ. ಕಳೆದ 3 ದಿನಗಳಿಂದ ಇಂಡಿಗೊ ಸಂಸ್ಥೆಯು ವಿಮಾನ ಮತ್ತು ಪೈಲಟ್‌ಗಳ ಕೊರತೆಯ ನೆಪ ಹೇಳಿ ಸ್ಥಗಿತಗೊಳಿಸಿದೆ. ಈ ಹೊಸ ವಿಮಾನ ನಿಲ್ದಾಣ ಖಾಲಿ ಬೀಳಬಾರದು ಎನ್ನುವ ಕಾರಣಕ್ಕೆ ‘ಕರ್ನಾಟಕ ಔದ್ಯಮಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ’ ಏರ್ ಇಂಡಿಯಾ ಸಂಸ್ಥೆಗೆ ಪತ್ರ ಬರೆದು ಶಿವಮೊಗ್ಗ ವಿಮಾನ ನಿಲ್ದಾಣದಿಂದ ವೈಮಾನಿಕ ಸೇವೆ ಆರಂಭಿಸುವಂತೆ ಕೋರಿದೆ. ಅದೂ ಕೂಡ ವಿಮಾನ ಇಲ್ಲ-ಪೈಲಟ್ ಇಲ್ಲ ಎನ್ನುವ ಕಾರಣ ನೀಡಿದೆ.
ಹೊಸ ವಿಮಾನ ನಿಲ್ದಾಣಗಳು:
ಬಿಜೆಪಿ ಸರ್ಕಾರ ರಾಜ್ಯದ ಶಿವಮೊಗ್ಗ, ವಿಜಯಪುರ, ರಾಯಚೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿತ್ತು. ವಿಜಯಪುರ ವಿಮಾನ ನಿಲ್ದಾಣ ಪೂರ್ಣಗೊಂಡಿದ್ದರೂ ಪರಿಸರ ಇಲಾಖೆಯ ಅನುಮತಿ ಪಡೆದಿಲ್ಲ ಎನ್ನುವ ಕಾರಣಕ್ಕೆ ಸುಪ್ರೀಂ ಕೋರ್ಟಿನ ಹಸಿರು ಪೀಠದಲ್ಲಿ ಪ್ರಕರಣ ಎದುರಿಸುತ್ತಿದೆ.
ರಾಯಚೂರು ವಿಮಾಣ ನಿಲ್ದಾಣದ ಕಾಮಗಾರಿ ಶೇ.45ರಷ್ಟು ಆಗಿದ್ದು, ಇನ್ನುಳಿದ ಕಾಮಗಾರಿ ಮುಂದುವರಿದಿವೆ. ಹಾಸನ ವಿಮಾನ ನಿಲ್ದಾಣದ ಕಾಮಗಾರಿ ಮುಂದುವರಿದಿದ್ದರೂ ನಿರೀಕ್ಷಿತ ಪ್ರಗತಿ ಆಗಿಲ್ಲ. ಇದಕ್ಕೆಲ್ಲ ಕಾರಣ ಅನುದಾನದ ಕೊರತೆ ಎನ್ನಲಾಗಿದೆ.
ಕೋಟ್:
ನೂರಾರು ಕೋಟಿ ವ್ಯಯಿಸಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿದ್ದೇವೆ. ಆದಾಗ್ಯೂ ವಿಮಾನಯಾನ ಸಂಸ್ಥೆಗಳು ಅಲ್ಲಿಂದ ವಿಮಾನ ಹಾರಾಟ ನಡೆಸಲು ಆಸಕ್ತಿ ತೋರುತ್ತಿಲ್ಲ. ವಿಮಾನ ಇಲ್ಲ, ಪೈಲಟ್ ಇಲ್ಲ ಎನ್ನುವ ಕುಂಟು ನೆಪ ಹೇಳುತ್ತಿವೆ. ಇನ್ನು ವಿಜಯಪುರ, ರಾಯಚೂರು, ಹಾಸನ ವಿಮಾನ ನಿಲ್ದಾಣಗಳ ಬಗ್ಗೆ ಚಿಂತೆ ಕಾಡುತ್ತಿದೆ.
-ಎಸ್.ಜಿ.ನಂಜಯ್ಯನಮಠ, ಅಧ್ಯಕ್ಷರು-ಕರ್ನಾಟಕ ಔದ್ಯಮಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.