ತಗ್ಗದ ಕೃಷ್ಣೆ ಅಬ್ಬರ ಜನತೆಯಲ್ಲಿ ಪ್ರವಾಹ ಭೀತಿ!

KannadaprabhaNewsNetwork |  
Published : Aug 24, 2025, 02:00 AM IST
ರಬಕವಿ-ಮಹೇಷವಾಡಗಿ ಕೃಷ್ಣಾ ನದಿಯಲ್ಲಿ ೨,೬೪೨೩೦ ಕ್ಯೂಸೆಕ್ ನೀರಿನ ಒಳಹರಿವಿಂದ ಒಡಲು ಮೀರಿ ಹರಿಯುತ್ತಿರುವ ಕೃಷ್ಣೆ. | Kannada Prabha

ಸಾರಾಂಶ

ಮಹಾರಾಷ್ಟ್ರದ ಕೋಯ್ನಾ ಸೇರಿದಂತೆ ಇತರೆ ಜಲಾಶಯಗಳಿಂದ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ರಬಕವಿ ನಗರದ ಬಾಗಿಲಿಗೆ ಕೃಷ್ಣೆ ದಾಪುಗಾಲಿಡುತ್ತಿದ್ದು, ನಗರದ ತಗ್ಗು ಪ್ರದೇಶಗಳು ಹಾಗೂ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಮಹಾರಾಷ್ಟ್ರದ ಕೋಯ್ನಾ ಸೇರಿದಂತೆ ಇತರೆ ಜಲಾಶಯಗಳಿಂದ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ರಬಕವಿ ನಗರದ ಬಾಗಿಲಿಗೆ ಕೃಷ್ಣೆ ದಾಪುಗಾಲಿಡುತ್ತಿದ್ದು, ನಗರದ ತಗ್ಗು ಪ್ರದೇಶಗಳು ಹಾಗೂ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ.

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿರುವುದರಿಂದ ಮಹಾರಾಷ್ಟ್ರದ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವುದರಿಂದ ಕೃಷ್ಣಾ ನದಿಯ ಒಳಹರಿವು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆ ಹೆಚ್ಚಳಗೊಂಡರೆ ನದಿ ಅಪಾಯ ಮಟ್ಟ ಮೀರಿ ಹರಿಯುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿಪಾತ್ರದಲ್ಲಿ ವಾಸಿಸುವ ಜನ, ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ಹೋಗುವುದು ಸೂಕ್ತವೆಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೂಚಿಸಿದ್ದಾರೆ.

ಹಿಪ್ಪರಗಿ ಎಲ್ಲ ಗೇಟ್‌ ಓಪನ್‌:ಹಿಪ್ಪರಗಿ ಬ್ಯಾರೇಜ್‌ನಲ್ಲಿರುವ ಎಲ್ಲ ೨೨ ಗೇಟ್‌ಗಳ ಮೂಲಕ ಬಂದಷ್ಟೇ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ೨,೬೪,೨೩೦ ಕ್ಯುಸೆಕ್ ಒಳಹರಿವಿದ್ದು, ೨,೬೩,೪೮೦ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಇದರಿಂದಾಗಿ ನದಿ ಸೆಳೆತ ಭಾರೀ ಪ್ರಮಾಣದಲ್ಲಿ ಹೆಚ್ಚಳಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಕ್ಷಣ ಕ್ಷಣದ ಮಾಹಿತಿ ಪಡೆಯುವ ಮೂಲಕ ನದಿ ಪಾತ್ರದ ಜನತೆ ಸುರಕ್ಷತೆ ಕ್ರಮ ಹಾಗೂ ಅಗತ್ಯವಾದಲ್ಲಿ ಸ್ಥಳಾಂತರಕ್ಕೆ ಸಿದ್ಧವಿರುವಂತೆ ಎಸಿ ಶ್ವೇತಾ ಆದೇಶಿಸಿದ್ದಾರೆ.

ರಬಕವಿ ನಗರದ ಜನತೆಯಲ್ಲಿ ಆತಂಕ: ಕೃಷ್ಣೆಯ ನೀರಿನ ಒಳಹರಿವು ೨.50 ಲಕ್ಷ ಕ್ಯುಸೆಕ್ ಮೀರಿದರೆ ನೆರೆ ಅಪಾಯ ಹೆಚ್ಚಾಗಲಿದೆ. ಆದರೆ ಸದ್ಯ ೨,೬೪,೨೩೦ ಕ್ಯುಸೆಕ್ ಒಳಹರಿವುಇದ್ದು, ರಬಕವಿ ನಗರದ ಹೊಸಪೇಟ, ಮುತ್ತೂರ ಗಲ್ಲಿ, ಯಾತಗೇರಿ ಲೇನ್, ಬೀಳಗಿ ಲೇನ್, ಮಟ್ಟಿಕಲ್ಲಿ ಲೇನ್, ಸಾಬೋಜಿ ಲೇನ್, ಕಡಾಲಕಟ್ಟಿ, ಘಟ್ಟಗಿ ಬಸವೇಶ್ವರ ದೇಗುಲ ಸುತ್ತಲಿನ ಪ್ರದೇಶಗಳ ಜನತೆಗೆ ಪ್ರವಾಹ ಭೀತಿ ಆವರಿಸಿದೆ. ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಸಾಂಗಲಿಯಲ್ಲಿ ಮಧ್ಯಾಹ್ನದ ಹೊತ್ತಿಗೆ ೧ ಅಡಿ ನೀರಿನ ಮಟ್ಟ ಕುಸಿತಗೊಂಡಿದೆ. ಸದ್ಯಕ್ಕೆ ಯಾವುದೇ ಅಪಾಯವಿಲ್ಲ ಎಂಬುದು ನೀರಾವರಿ ಅಭಿಯಂತರರ ಅಭಿಪ್ರಾಯ. ಕೋಯ್ನಾ ಜಲಾಶಯದ ಹೊರಹರಿವು ಹೆಚ್ಚಳಗೊಂಡಲ್ಲಿ ಅಪಾಯ ಎದುರಾಗಲಿದೆ ಎಂಬುದು ಸ್ಥಳೀಯರ ಆತಂಕವಾಗಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕ ನೀರಾವರಿ ಇಲಾಖೆ ಅಧಿಕಾರಿಗಳು ಜಲಾಶಯಗಳಲ್ಲಿನ ನೀರಿನ ಮಟ್ಟದ ಬಗ್ಗೆ ನಿಗಾ ವಹಿಸಿದ್ದು, ಯಾವುದೇ ಅವಾಂತರಕ್ಕೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಿದ್ದಾರೆ. ಆದರೆ, ನದಿಪಾತ್ರದ ಜನತೆ ಮುಂಜಾಗ್ರತೆಯಿಂದ ತಮ್ಮ ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಎಸಿ ಶ್ವೇತಾ ಬೀಡಿಕರ ಸೂಚಿಸಿದ್ದು, ಯಾವುದೇ ಪ್ರಮಾದವಾಗದಂತೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆಯೆಂದು ತಿಳಿಸಿದ್ದಾರೆ.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!