ಉಪನಗರ ರೈಲು ಯೋಜನೆಯ ಮೊದಲ ನಿಲ್ದಾಣದ ಕಾಮಗಾರಿ ಆರಂಭ

| N/A | Published : Oct 21 2025, 02:00 AM IST

ಉಪನಗರ ರೈಲು ಯೋಜನೆಯ ಮೊದಲ ನಿಲ್ದಾಣದ ಕಾಮಗಾರಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಉಪ ನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಮೊದಲ ರೈಲು ನಿಲ್ದಾಣ ಕಾಮಗಾರಿ ಶುರುವಾಗಿದೆ. ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಸಂಪರ್ಕಿಸುವ ಮಲ್ಲಿಗೆ ಮಾರ್ಗದಲ್ಲಿ ‘ಕಸ್ತೂರಿನಗರ ನಿಲ್ದಾಣ’ ತಲೆ ಎತ್ತುತ್ತಿದೆ.

 ಬೆಂಗಳೂರು :  ಬೆಂಗಳೂರು ಉಪ ನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಮೊದಲ ರೈಲು ನಿಲ್ದಾಣ ಕಾಮಗಾರಿ ಶುರುವಾಗಿದೆ. ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಸಂಪರ್ಕಿಸುವ ಮಲ್ಲಿಗೆ ಮಾರ್ಗದಲ್ಲಿ ‘ಕಸ್ತೂರಿನಗರ ನಿಲ್ದಾಣ’ ತಲೆ ಎತ್ತುತ್ತಿದೆ.

ಎಲ್‌ ಆ್ಯಂಡ್‌ ಟಿ ಕಂಪನಿ ಬಿಎಸ್‌ಆರ್‌ಪಿಯ ಎರಡು ಕಾರಿಡಾರ್‌ಗಳ ಹಳಿ ನಿರ್ಮಾಣ ಕಾಮಗಾರಿ ಗುತ್ತಿಗೆಯಿಂದ ಹೊರಬಂದ ಹಿನ್ನೆಲೆಯಲ್ಲಿ ಕೆಲಸ ನಿಂತಿದೆ. ಅದರ ಮರುಟೆಂಡರ್‌ ಕರೆಯಲು ಕೆ-ರೈಡ್ (ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ) ಉದ್ದೇಶಿಸಿದೆ. ಆದರೆ, ಈ ನಡುವೆ ನಿಲ್ದಾಣಗಳ ಕಾಮಗಾರಿ ಆರಂಭವಾಗಿದೆ.

ಬೈಯಪ್ಪನಹಳ್ಳಿ ಹಾಗೂ ಸೇವಾನಗರ ನಿಲ್ದಾಣಗಳ ನಡುವಿನ ‘ಕಸ್ತೂರಿನಗರ’ ನಿಲ್ದಾಣ (ಬಿಡಬ್ಲೂಎಸ್‌ಎಸ್‌ಬಿ ವಾಟರ್‌ ಟ್ಯಾಂಕ್‌ ಬಳಿ) ನಿರ್ಮಾಣ ಆಗುತ್ತಿದೆ. ಎಲಿವೆಟೆಡ್‌ (ಎತ್ತರಿಸಿದ) ಮಾದರಿ ನಿಲ್ದಾಣ ಇದಾಗಿದ್ದು, ಮೆಟ್ರೋ ಮಾದರಿಯಲ್ಲೆ ಎರಡನೇ ಹಂತದಲ್ಲಿ ಪ್ಲಾಟ್‌ಫಾರ್ಮ್‌ ಹಾಗೂ ಮೊದಲ ಹಂತ ಅಂದರೆ ಕಾನ್‌ಕಾರ್ಸ್‌ ಮಟ್ಟದಲ್ಲಿ ಟಿಕೆಟ್‌ ಕೌಂಟರ್‌, ಮಳಿಗೆಗಳು ಇರಲಿವೆ. ಆದರೆ, ರೈಲ್ವೆ ಟ್ರ್ಯಾಕ್‌ ನೆಲಮಟ್ಟದಲ್ಲಿ ಇರಲಿದೆ.

ಹೈದರಾಬಾದ್ ಮೂಲದ ನಾಗಾರ್ಜುನ ಕನ್ ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ) ‘ಕಸ್ತೂರಿ ನಗರ ನಿಲ್ದಾಣ’ ಕಾಮಗಾರಿಯನ್ನು ಶುರು ಮಾಡಿದೆ. ನಿಲ್ದಾಣದ ಹೊರಭಾಗದಲ್ಲಿ ಪಾರ್ಕಿಂಗ್‌ ಪ್ರದೇಶ ಇರಲಿದ್ದು, ಇದಕ್ಕೆ ಫುಟ್ ಓವರ್‌ ಬ್ರಿಡ್ಜ್‌ ಮೂಲಕ ಸಂಪರ್ಕ ಇರಲಿದೆ. ಜತೆಗೆ ಈ ಎಫ್‌ಒಬಿ ಇಲ್ಲಿಯೆ ಇರಲಿರುವ ಬಿಎಂಟಿಸಿ ಬಸ್‌ ನಿಲ್ದಾಣವನ್ನೂ ಸಂಪರ್ಕಿಸಲಿದೆ.

ಕೆ-ರೈಡ್‌) ಮಲ್ಲಿಗೆ ಮಾರ್ಗದಲ್ಲಿ (ಬೈಯಪ್ಪನಹಳ್ಳಿ- ಚಿಕ್ಕಬಾಣಾವರ) 12 ನಿಲ್ದಾಣಗಳ ನಿರ್ಮಾಣಕ್ಕೆ ಎರಡು ಹಂತದಲ್ಲಿ ಟೆಂಡರ್‌ ಕರೆದಿದೆ. ಇದೇ ವರ್ಷ ಜನವರಿ 3ರಂದು ಎನ್‌ಸಿಸಿ ಸಂಸ್ಥೆಯೊಂದಿಗೆ 8 ರೈಲು ನಿಲ್ದಾಣಗಳ ನಿರ್ಮಾಣಕ್ಕೆ ₹ 501 ಕೋಟಿ ಒಪ್ಪಂದ ಮಾಡಿಕೊಂಡಿತ್ತು. ಬೆನ್ನಿಗಾನಹಳ್ಳಿ , ಕಸ್ತೂರಿ ನಗರ, ಸೇವಾನಗರ, ಬಾಣಸವಾಡಿ, ನಾಗವಾರ, ಕನಕನಗರ, ಹೆಬ್ಬಾಳ ಮತ್ತು ಮತ್ತಿಕೆರೆ ಸೇರಿದಂತೆ ಎಂಟು ನಿಲ್ದಾಣಗಳನ್ನು ಎನ್‌ಸಿಸಿ ಕಂಪನಿ ನಿರ್ಮಾಣ ಮಾಡಲಿದೆ.

24 ತಿಂಗಳಲ್ಲಿ ಕಾಮಗಾರಿ ಮುಗಿಸುವ ಒಪ್ಪಂದವಾಗಿದೆ. ಉಳಿದಂತೆ ಎರಡನೇ ಹಂತದಲ್ಲಿ ಯಶವಂತಪುರ, ಶೆಟ್ಟಿಹಳ್ಳಿ, ಮೈದರಹಳ್ಳಿ ಮತ್ತು ಚಿಕ್ಕಬಾಣಾವರ ನಿಲ್ದಾಣ ತಲೆ ಎತ್ತಲಿವೆ ಎಂದು ಕೆ-ರೈಡ್‌ ತಿಳಿಸಿದೆ.

9 ಬೋಗಿ ರೈಲು ನಿಲುಗಡೆ

2019ರ ವಿಸ್ತೃತ ಯೋಜನಾ ವರದಿ ಪ್ರಕಾರ 9 ಬೋಗಿಯ ರೈಲು ನಿಲುಗಡೆ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಲ್ದಾಣದ ಉದ್ದ ಇರಲಿದೆ. ಆದರೆ, ಉಪನಗರ ರೈಲು ಯೋಜನೆಯಲ್ಲಿ ರೈಲುಗಳು ಎಷ್ಟು ಬೋಗಿ ಹೊಂದಿರಬೇಕು ಎಂಬುದು ಈವರೆಗೆ ತೀರ್ಮಾನ ಆಗಿಲ್ಲ. ಜತೆಗೆ ವಂದೇ ಭಾರತ್‌ ಮಾದರಿಯಲ್ಲಿ ಇರಬೇಕೆ? ಮೆಟ್ರೋ ರೈಲಿನ ಮಾದರಿಯಲ್ಲಿ ಇರಬೇಕೆ ಎಂಬುದೂ ತೀರ್ಮಾನ ಆಗಿಲ್ಲ.

ನಿಲ್ದಾಣ ಪರಿಸರ ಸ್ನೇಹಿ

ಉಪನಗರ ರೈಲು ನಿಲ್ದಾಣಗಳು ಪರಿಸರ ಸ್ನೇಹಿಯಾಗಿರಲಿವೆ. ಸೌರಶಕ್ತಿ ಅಳವಡಿಕೆ, ಮಳೆನೀರು ಕೊಯ್ಲು ತಂತ್ರಜ್ಞಾನ ಅಳವಡಿಕೆ ಆಗಲಿದೆ. ಈ ಮೂಲಕ ಪರಿಸರ ಸ್ನೇಹಿಯಾಗಿ ಉಪನಗರ ರೈಲ್ವೆ ನಿಲ್ದಾಣಗಳು ನಿರ್ಮಾಣ ಆಗಲಿವೆ. ವಿದ್ಯುತ್ ಬಳಕೆ ಸ್ವಾವಲಂಬನೆ ಸಾಧಿಸಲು ನಿಲ್ದಾಣಗಳ ಮೇಲೆ ಸೋಲಾರ್ ಪ್ಯಾನಲ್‌ ಅಳವಡಿಕೆ ಮಾಡಲಾಗುವುದು. ಎಲಿವೇಟೆಡ್ ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸುವ ಫುಟ್‌ಓವರ್‌ ಬ್ರಿಡ್ಜ್‌ ಮೇಲೆಯೂ ಸೋಲಾರ್ ರೂಫ್ ಟಾಪ್ ಅಳವಡಿಸಲು ಯೋಜಿಸಲಾಗಿದೆ. ಪ್ರತಿ ನಿಲ್ದಾಣದ ಶೇ.20-30ರಷ್ಟು ವಿದ್ಯುತ್ ಉಳಿತಾಯಕ್ಕೆ ಕ್ರಮ ವಹಿಸಲಾಗುವುದು ಎಂದು ಕೆ-ರೈಡ್ ಅಧಿಕಾರಿಗಳು ತಿಳಿಸಿದರು.

ಇಂಗಾಲದ ಹೊರಸೂಸುವಿಕೆ ಕಡಿಮೆಗೊಳಿಸುವ ಉದ್ದೇಶದಿಂದ ಹಸಿರೀಕರಣ ಮಾನದಂಡ ಐಬಿಜಿಸಿ ಪ್ಲಾಟಿನಂ ದರ್ಜೆಯಲ್ಲಿ ನಿಲ್ದಾಣಗಳನ್ನು ನಿರ್ಮಿಸಲು ಕೆ-ರೈಡ್‌ ತೀರ್ಮಾನಿಸಿದೆ.

Read more Articles on