ಸಾರಾಂಶ
ಮುಂಡರಗಿ-ಹಡಗಲಿ ಮಾರ್ಗವಾಗಿ ದಾವಣಗೆರೆಗೆ ನೂತನ ರೈಲ್ವೆ ಮಾರ್ಗ ಮಂಜೂರು ಮಾಡಬೇಕು ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣನ ಅವರಿಗೆ ಮಾಜಿ ಸಚಿವ ಎಸ್.ಎಸ್. ಪಾಟೀಲ ಪತ್ರ ಬರೆದಿದ್ದಾರೆ.
ಮುಂಡರಗಿ: ಮುಂಡರಗಿ-ಹಡಗಲಿ ಮಾರ್ಗವಾಗಿ ದಾವಣಗೆರೆಗೆ ನೂತನ ರೈಲ್ವೆ ಮಾರ್ಗ ಮಂಜೂರು ಮಾಡಬೇಕು ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣನ ಅವರಿಗೆ ಮಾಜಿ ಸಚಿವ ಎಸ್.ಎಸ್. ಪಾಟೀಲ ಪತ್ರ ಬರೆದಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, 1953-54ರಲ್ಲಿ ಧಾರವಾಡ ಜಿಲ್ಲಾಧಿಕಾರಿ ಗದಗದಿಂದ ಮುಂಡರಗಿ ಮಾರ್ಗವಾಗಿ ದಾವಣಗೆರೆಗೆ ನೂತನ ರೈಲು ಮಾರ್ಗ ನಿರ್ಮಿಸಬೇಕು ಎಂದು ಬೇಡಿಕೆ ಸಲ್ಲಿಸಿದ್ದರು. ಅಂದಿನ ಸಭೆಯಲ್ಲಿ ಕಲಕೇರಿಯ ಮುಂದಕನಗೌಡ ಪಾಟೀಲ, ವೀರಭದ್ರಪ್ಪ ಕೊಪ್ಪಳ, ಗುರುರಾಜಗೌಡ ಅಪರಂಜಿ, ಎಸ್.ಎಂ. ಭೂಮರಡ್ಡಿ ಮತ್ತು ನಾನೂ ಕೂಡಾ ಆ ಸಭೆಯಲ್ಲಿ ಉಪಸ್ಥಿತನಿದ್ದೆ. ಮುಖ್ಯವಾಗಿ ಗದಗ ಜಿಲ್ಲೆ ಆಗಬೇಕು, ಗದಗದಿಂದ ಮುಂಡರಗಿ ಮಾರ್ಗವಾಗಿ ದಾವಣಗೇರಿಗೆ ನೂತನ ರೈಲು ಮಾರ್ಗ ನಿರ್ಮಿಸಬೇಕು. ತುಂಗಭದ್ರಾ ನದಿಗೆ ಶಿಂಗಟಾಲೂರ ಹತ್ತಿರ ಸೇತುವೆ ನಿರ್ಮಿಸಬೇಕು. ಗದಗ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು, ನೀರಾವರಿಯಾಗಬೇಕು, ಮುಂಡರಗಿ ಹಳ್ಳಕ್ಕೆ ಸೇತುವೆ ಆಗಬೇಕು ಎನ್ನುವ ಬೇಡಿಕೆಗಳನ್ನು ಪಟ್ಟಿಮಾಡಿ ಜಿಲ್ಲಾಧಿಕಾರಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ ಇದುವರೆಗೂ ರೈಲು ಮಾರ್ಗ ನಿರ್ಮಾಣವಾಗಿಲ್ಲ. ದೇವೇಗೌಡ ಪ್ರಧಾನಮಂತ್ರಿ ಇದ್ದಾಗ, ರಾಮವಿಲಾಸ ಪಾಸ್ವಾನ್ ರೈಲ್ವೆ ಮಂತ್ರಿಯಾಗಿದ್ದಾಗ ಈ ಕುರಿತು ವಿನಂತಿಸಲಾಗಿದೆ. ಆಗ ಮಂತ್ರಿಗಳು ಸಮ್ಮತಿಸಿ, ರೈಲು ಮಾರ್ಗದ ರೂಪುರೇಷಗಳನ್ನು ತರಲು ಆದೇಶ ಮಾಡಿದ್ದರು. ಅದು ವೇಳೆಗೆ ಸರಿಯಾಗಿ ಬಾರದೇ ಇರುವುದರಿಂದ ಅದು ಬಜೆಟ್‌ನಲ್ಲಿ ಸೇರ್ಪಡೆಯಾಗಲಿಲ್ಲ. ಆ ಕೆಲಸ ಇಲ್ಲಿಯವರೆಗೂ ಹಾಗೇ ನಿಂತಿದೆ. ತಾಲೂಕಿನಲ್ಲಿ ಅನೇಕ ಹೋರಾಟಗಾರರು ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ಕೂಡಲೇ ಪ್ರಾರಂಭಿಸಿ ಅನುಕೂಲ ಮಾಡಿಕೊಡಬೇಕು ಎಂದು ಎಸ್.ಎಸ್. ಪಾಟೀಲ ಪತ್ರದಲ್ಲಿ ಕೋರಿದ್ದಾರೆ.