ಕನ್ನಡಪ್ರಭ ವಾರ್ತೆ ಆಲಮಟ್ಟಿ
ಮುಖ್ಯಮಂತ್ರಿ ಸಿದ್ಧರಾಮಯ್ಯ ಆಲಮಟ್ಟಿಗೆ ಆಗಮಿಸುತ್ತಿದ್ದಂತೆ ರೈತರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಲು ಮುಗಿಬಿದ್ದಿದ್ದರು.ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ಸುಪ್ರಿಂ ಕೋರ್ಟ್ ಆಯಾ ರಾಜ್ಯ ಸರ್ಕಾರಕ್ಕೆ ನೀಡಿದ ತೀರ್ಪಿನಂತೆ ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡಬೇಕು ಮತ್ತು ಸರ್ಕಾರದ ಎಲ್ಲ ಹುದ್ದೆಗಳ ನೇಮಕಾತಿ, ಬಡ್ತಿ, ವೃತ್ತಿಪರ ಕೋರ್ಸ್‌ಗಳ ಪ್ರವೇಶ ಸೇರಿ ಎಲ್ಲಾ ಕಡೆ ಜಾತಿವಾರು ಸಮಪಾಲು ಸಿಗುವವರೆಗೂ ಎಲ್ಲ ಪ್ರಕ್ರಿಯೆಗಳನ್ನು ತಕ್ಷಣದಿಂದ ತಡೆಹಿಡಿಯಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಘಟಕದ ಸದಸ್ಯರು ಮನವಿ ಸಲ್ಲಿಸಿದರು.
ದಿನಗೂಲಿಗಳ ಕಾಯಂಗೆ ಆಗ್ರಹ:ಕರ್ನಾಟಕ ಅರಣ್ಯ ಇಲಾಖೆಯ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ನ್ನು ಅನುಷ್ಠಾನಗೊಳಿಸಿ, ಆಲಮಟ್ಟಿಯ ವಿವಿಧ ಉದ್ಯಾನದಲ್ಲಿ ದುಡಿಯುತ್ತಿರುವ 250 ಕ್ಕೂ ಅಧಿಕ ದಿನಗೂಲಿಗಳನ್ನು ಕಾಯಂಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಅರಣ್ಯ ದಿನಗೂಲಿ ನೌಕರರ ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಿ ಮಾದರ, ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಗುಡಿಮನಿ ನೇತೃತ್ವದಲ್ಲಿ ಅರಣ್ಯ ಕಾರ್ಮಿಕರು ಮನವಿ ಸಲ್ಲಿಸಿದರು.
ವಂದಾಲ ಗ್ರಾಮ ಸ್ಥಳಾಂತರಕ್ಕೆ ಒತ್ತಾಯಆಲಮಟ್ಟಿ ಜಲಾಶಯವನ್ನು ಎತ್ತರಿಸಿದರೆ ಮುಳುಗಡೆಯಾಗುವ ಮೊಟ್ಟ ಮೊದಲ ಗ್ರಾಮ ನಿಡಗುಂದಿ ತಾಲ್ಲೂಕಿನ ವಂದಾಲ. ಹೊಸ ಪುನರ್ವಸತಿ ಕೇಂದ್ರಗಳ ರಚನೆಗಾಗಿ ಸ್ಥಳ ನಿಗದಿಯಾದರೂ ಯಾವುದೇ ಪ್ರಕ್ರಿಯೆಗಳು ಆರಂಭಗೊಂಡಿಲ್ಲ. ಸರ್ಕಾರದ ಯಾವುದೇ ಸೌಲಭ್ಯಗಳು ಸಿಕ್ಕಿಲ್ಲ. ಹೀಗಾಗಿ ತಕ್ಷಣವೇ ಗ್ರಾಮದ ಪ್ರತಿಯೊಬ್ಬರಿಗೂ ಯೋಗ್ಯ ಪರಿಹಾರ ನೀಡಿ, ಹೊಸ ಪುನರ್ವಸತಿ ಕೇಂದ್ರ ರಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡರಾದ ತಿಪ್ಪಣ್ಣ ಮಾದರ, ಶೇಖರ ಗೂಗಿಹಾಳ, ಗಂಗಾಧರ ರಾಂಪೂರ, ಜಿ.ಎಸ್. ಚಿಕ್ಕಮಠ, ಎಂ.ಎಚ್.ಕುರ್ಧೋಸಿ ಇತರರು ಮನವಿ ಸಲ್ಲಿಸಿದರು.ವೇತನ ಹೆಚ್ಚಳಕ್ಕೆ ಮನವಿ:
ಆರೋಗ್ಯ ಇಲಾಖೆಯ ಬಹುತೇಕ ಕೆಲಸ ನಾವೇ ಮಾಡುತ್ತಿದ್ದು, ವೇತನ ಹೆಚ್ಚಿಸಬೇಕೆಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಸಿಎಂಗೆ ಮನವಿ ಸಲ್ಲಿಸಿದರು. ಸರಸ್ವತಿ, ಸುಜಾತಾ, ಶೈಲಾ, ಸುನಿತಾ, ವಿದ್ಯಾಪೂಜಾರಿ, ರೇಣುಕಾ, ಮಮತಾ, ಮಂಜುಳಾ ಇತರರು ಇದ್ದರು.ಬೆಳೆನಾಶಕ್ಕೆ ಪರಿಹಾರ ನೀಡಿ:
ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆ ಒಡೆದು ತಾಳಿಕೋಟೆ ತಾಲ್ಲೂಕಿನ ಗಡಿಸೋಮನಾಳ ಗ್ರಾಮದ ಜಮೀನುಗಳಿಗೆ ನೀರು ಹೊಕ್ಕಿ, ಬೆಳೆ ನಾಶವಾಗಿ, ಮಣ್ಣು ಕೊಚ್ಚಿಕೊಂಡು ಹೋಗಿದೆ. ನಷ್ಟವಾದ ಬೆಳೆಗೆ ಪರಿಹಾರ ಕೊಡಬೇಕು, ಕಾಲುವೆಯನ್ನು ತಕ್ಷಣ ದುರಸ್ತಿ ಮಾಡಬೇಕು ಎಂದು ಮುದ್ದೇಬಿಹಾಳ ತಾಲ್ಲೂಕಿನ ರೈತ ಸಂಘಟನೆಯವರು ಮನವಿ ಸಲ್ಲಿಸಿದರು. ಕೃಷಿ ಕಾಯ್ದೆ ಹಿಂಪಡೆಯಲು ಒತ್ತಾಯಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದ್ದು, ರಾಜ್ಯ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ಡಾ.ಸ್ವಾಮಿನಾಥನ್ ವರದಿಯನ್ವಯ ರೈತರ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿಗೊಳಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ವಾಸುದೇವ ಬಣ) ಜಿಲ್ಲಾ ಅಧ್ಯಕ್ಷ ವಿಠ್ಠಲ ಪೂಜಾರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.