ಎಸ್ಸಿ, ಎಸ್ಟಿ ಸಭೆಯಲ್ಲಿ ದೂರುಗಳ ಸುರಿಮಳೆ

KannadaprabhaNewsNetwork |  
Published : Jul 25, 2024, 01:26 AM IST
23ಕೆಜಿಎಲ್5ಕೊಳ್ಳೇಗಾಲದಲ್ಲಿ ಅಯೋಜಿಸಲಾಗಿದ್ದ ಎಸ್ಸಿ ಎಸ್ಟಿ ಸಭೆಯಲ್ಲಿ ಡಿವೈಎಸ್ಪಿ ಧಮೆ೯ಂದ್ರ ಮಾತನಾಡಿದರು. | Kannada Prabha

ಸಾರಾಂಶ

ಕೊಳ್ಳೇಗಾಲದಲ್ಲಿ ಆಯೋಜಿಸಲಾಗಿದ್ದ ಎಸ್ಸಿ, ಎಸ್ಟಿ ಸಭೆಯಲ್ಲಿ ಡಿವೈಎಸ್ಪಿ ಧರ್ಮೇಂದ್ರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲದಲಿತರೆಂದರೆ ಕಾಫಿ, ಟೀ ನೀಡುವುದಿಲ್ಲ, ದಲಿತ ಕಾಲೋನಿಗಳಲ್ಲಿ ಯುವಕರು ಗಾಂಜಾಕ್ಕೆ ದಾಸರಾಗುತ್ತಿದ್ದಾರೆ, ಬೈಕ್ ವ್ಹೀಲಿಂಗ್ ಮಾಡುವರನ್ನು ದಂಡಿಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುತ್ತ ಅಕ್ರಮ ಗಾಂಜಾ, ಡ್ರಗ್ಸ್‌ ಮಾರಾಟಗಾರರ ವಿರುದ್ಧ ಕ್ರಮಕೈಗೊಳ್ಳಿ. ಕೆಲ ಬ್ಯಾಂಕ್ ಗಳಲ್ಲಿ ದಲಿತರಿಗೆ ನೀಡಬೇಕಾದ ಸಬ್ಸಿಡಿ ನೀಡುತ್ತಿಲ್ಲ ಎಂಬಿತ್ಯಾದಿ ದೂರುಗಳು ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರಿಂದ ಕೇಳಿ ಬಂದಿವೆ. ಡಿವೈಎಸ್ಪಿ ಕಚೇರಿಯಲ್ಲಿ ಬುಧವಾರ ಕರೆಯಲಾಗಿದ್ದ ಕೊಳ್ಳೇಗಾಲ ಉಪವಿಭಾಗ ಮಟ್ಟದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಅನೇಕ ದಲಿತ ಮುಖಂಡರು ತಮ್ಮ ಕಾಲೋನಿ ಹಾಗೂ ದಲಿತ ಸಮಾಜದ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಮಂಜುನಾಥ್ ಎಂಬವರು ಸಭೆಯಲ್ಲಿ ಕೈಗಾರಿಕೆ ಇಲಾಖೆ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಎಸ್ಸಿ, ಎಸ್ಟಿಗಳಿಗೆ ನೀಡಬೇಕಾದ ಶೇ.35ರಷ್ಟು ಸಬ್ಸಿಡಿ ಮಂಜೂರಾಗಿಲ್ಲ. ಈ ಕಾರಣಕ್ಕೆ ಬ್ಯಾಂಕ್‌ಗಳಿಂದ ದಲಿತರಿಗೆ ನೋಟಿಸ್ ಜಾರಿಯಾಗುತ್ತಿದ್ದು ಇದರಿಂದ ಮಾನಸಿಕವಾಗಿ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮವಹಿಸಬೇಕು ಎಂದು ದೂರಿದರು.

ಭೀಮನಗರದ ಯಾಜಮಾನ್ ಪಾಪಣ್ಣ ಮಾತನಾಡಿ, ಜಿಲ್ಲೆಯಲ್ಲಿರುವ ಎಸ್ಸಿ, ಎಸ್ಟಿ ವಿದ್ಯಾರ್ಥಿ ನಿಲಯಗಳಿಗೆ ಖುದ್ದು ಭೇಟಿ ನೀಡಿ ಮಕ್ಕಳು ದೌರ್ಜನ್ಯ ರಹಿತವಾಗಿ ವಾಸ್ತವ್ಯ ಹೂಡಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ಕೆಲಸ ಆಗಬೇಕಿದೆ. ಪಟ್ಟಣದ ಪೊಲೀಸ್ ಠಾಣೆ, ಬಾಲಕಿಯರ ಕಾಲೇಜು ಕೂಗಳತೆಯಲ್ಲಿರುವ ಮದ್ಯದಂಗಡಿ ಸ್ಥಳಾಂತರಕ್ಕೆ ಕ್ರಮವಹಿಸಿ ಎಂದರು. ಭೀಮನಗರದ ಯಜಮಾನ ಸಿದ್ದಾರ್ಥ ಮಾತನಾಡಿ, ಪಟ್ಟಣದ ದಲಿತ ಸಮಾಜದ ಕಾಲೋನಿಗಳಲ್ಲಿ ಯುವಕರು ಗಾಂಜಾ ಸೇವನೆಗೆ ದಾಸರಾಗುತ್ತಿದ್ದಾರೆ. ಕಲಿಕೆಯನ್ನು ಮೊಟಕುಗೊಳಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದಲಿತರ ಕಾಲೋನಿಯಲ್ಲಿ ಎಸ್ಸಿ-ಎಸ್ಟಿ ಸಭೆ ನಡೆಸಬೇಕು. ಗ್ರಾಮೀಣ ಭಾಗದಲ್ಲಿ ತಲೆ ಎತ್ತಿರುವ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದರು.ಹನೂರು ಪಟ್ಟಣದ ನಾಗೇಂದ್ರ ಮಾತನಾಡಿ, 2 ತಿಂಗಳ ಹಿಂದೆ ನಾನು ಗೆಳೆಯರೊಟ್ಟಿಗೆ ಶಾಗ್ಯ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಹೋಟೇಲ್ ವೊಂದರಲ್ಲಿ ದಲಿತರೆಂದು ತಿಳಿದರೆ ಟೀ, ಕಾಫಿ ನೀಡುತ್ತಿಲ್ಲ. ಈ ತಾರತಮ್ಯ ನೀತಿಯನ್ನು ತಡೆಯಬೇಕಿದೆ ಎಂದರು. ಭೀಮನಗರದ ರಾಜೇಂದ್ರ ಮಾತನಾಡಿ, ಪಟ್ಟಣದಲ್ಲಿ ಬೈಕ್ ವ್ಹೀಲಿಂಗ್ ಮಾಡುವರ ಸಂಖ್ಯೆ ಹೆಚ್ಚಾಗುತ್ತಿದ್ದು ಪೊಲೀಸ್ ಇಲಾಖೆ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.ದಲಿತ ಮುಖಂಡ ದಿಲೀಪ್ ಸಿದ್ದಪ್ಪಾಜಿ ಮಾತನಾಡಿ, ಎಸ್ಸಿ-ಎಸ್ಟಿಗಳು ಸಭೆಗಳು ಬಿ.ಆರ್.ಹಿಲ್ಸ್, ರಾಮಾಪುರ ಭಾಗದಲ್ಲಿ ಹೆಚ್ಚು ನಡೆಯಬೇಕಿದೆ. ಪೊಲೀಸರು ಅಲ್ಲಿ ನಮ್ಮ ಜನರಿಗೆ ಜನರಿಗೆ ಧೈರ್ಯ ತುಂಬಬೇಕಿದೆ. ಅಲ್ಲದೆ, ಕುರುಬನಕಟ್ಟೆ, ಚಿಕ್ಕಲ್ಲೂರು, ಶಿವನಸಮುದ್ರ ಧಾರ್ಮಿಕ ಕ್ಷೇತ್ರಗಳಲ್ಲಿ ದಲಿತರಿಗೆ ಕೆಲಸ ಸಿಗುತ್ತಿಲ್ಲ ಎಂದು ದೂರಿದರು. ಪೊಲೀಸ್ ಅಧಿಕಾರಿಗಳಿಗೆ

ಮುಖಂಡರ ತರಾಟೆ

ಎಲ್ಲೊ ಕುಳಿತಿರುವ, ನಿಂತು ಮಾತನಾಡುವರನ್ನು ತಂದು ಕೂರಿಸಿ ಪೊಲೀಸ್ ಇಲಾಖೆ ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆ ನಡೆಸಿ ಕೈತೊಳೆದುಕೊಳ್ಳುವ ಕೆಲಸ ಮಾಡುತ್ತಿದೆ. ದಲಿತ ಸಮಾಜದ ಮುಖಂಡರ ಸಭೆಗೆ ಆಹ್ವಾನ ನೀಡದೇ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಸಭೆಯಲ್ಲಿ ಹಲವು ದಲಿತ ಮುಖಂಡರು ಅಸಮಾಧಾನ ಹೊರಹಾಕಿದರು. ಕೆಲ ಪೊಲೀಸ್ ಅಧಿಕಾರಿಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು.ಮಧುನಾಯಕ್ ಮಾತನಾಡಿ, ಪಟ್ಟಣ ಪೊಲೀಸ್ ಇಲಾಖೆ ನಡೆಸುವ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆ ಮಾಹಿತಿ ಮುಖಂಡರಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಬೆರಳೆಣಿಕೆ ಜನರು ಹಾಗೂ ಅಲ್ಲಿ ಇಲ್ಲಿ ನಿಂತಿರುವ ಸಾರ್ವಜನಿಕರನ್ನು ಕರೆತಂದು ಸಭೆ ನಡೆಸಿ ಕೈತೊಳೆದುಕೊಳ್ಳುವ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದು ತರಾಟೆ ತೆಗೆದುಕೊಂಡರು. ಸಭೆಯಲ್ಲಿ ಮಾಧ್ಯಮದವರಿಗೂ ಮಾಹಿತಿ ನೀಡದ್ದಕ್ಕೆ ಕೆಲ ಮುಖಂಡರು ಈ ತಾರತಮ್ಯ ನೀತಿ ಸರಿಯಲ್ಲ, ಸಭೆಯ ವಿಚಾರಗಳು ಮಾಧ್ಯಮದ ಮೂಲಕ ಇತರರಿಗೂ ತಿಳಿಯುವಂತಾಗಬೇಕು. ಇಂದಿನ ಸಭೆಯಲ್ಲಿ ಕೇವಲ 40-50 ಮಂದಿಯನ್ನು ಕರೆದು ಕೂರಿಸಿ ಸಭೆ ನಡೆಸುವುದು ಸರಿಯಲ್ಲ ಎಂದರು.

ದಲಿತ ಸಮಾಜದ ಮೇಲಿನ ದೌರ್ಜನ್ಯ, ತಾರತಮ್ಯ ನೀತಿ ಸಹಿಸಲ್ಲ. ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು, ಇಂದಿನ ಸಭೆಯಲ್ಲಿನ ಚರ್ಚೆಗಳನ್ನು ಆಲಿಸಿದ್ದು ಹಂತ ಹಂತವಾಗಿ ಕ್ರಮವಹಿಸಲಾಗುವುದು. ಮಾಧ್ಯಮದವರನ್ನು ಇಂದಿನ ಸಭೆಗೆ ಆಹ್ವಾನಿಸಿಲ್ಲ, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ.

- ಧರ್ಮೇಂದ್ರ, ಡಿವೈಎಸ್ಪಿ ಕೊಳ್ಳೇಗಾಲ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ