ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪುರಸಭೆ ಟಿ.ಬಿ ಬಡಾವಣೆಗೆ ಸಂಬಂಧಿಸಿಂತೆ ಸರ್ವೇ ನಂ. 280, 281, 285, 286 ಹಾಗೂ 290 ರಲ್ಲಿ ಒಟ್ಟು 21 ಎಕರೆ 19 ಗುಂಟೆ ಕೃಷಿ ಭೂಮಿಯನ್ನು ಕಡು ಬಡವರಿಗೆ ನಿವೇಶನ ಹಂಚುವ ಉದ್ದೇಶದಿಂದ ನಂ.ಎಚ್ ಎಎಲ್ .4/1976-77 ರಂತೆ ಕಳೆದ 48 ವರ್ಷಗಳ ಹಿಂದೆ ಭೂ ಸ್ವಾಧೀನ ಮಾಡಿಕೊಂಡಿತ್ತು.
ಪುರಸಭೆ ಒಂದೇ ಒಂದು ನಿವೇಶನ ಹಂಚಿಕೆ ಮಾಡಿಲ್ಲ:70ರ ದಶಕದಲ್ಲಿ ಅಂದಿನ ಪುರಸಭೆ ಅಧ್ಯಕ್ಷರಾಗಿದ್ದ ದಿ.ಕೆ.ಜೆ.ಬೋರಲಿಂಗೇಗೌಡ ಅವರು ಪಟ್ಟಣದ ಕಡು ಬಡವರಿಗೆ ನಿವೇಶನ ಹಂಚುವ ಕಾರಣಕ್ಕೆ ಟಿ.ಬಿ.ಬಡಾವಣೆ ಜಾಗವನ್ನು ನಿಯಾಮಸಾರ ಭೂ ಸ್ವಾಧೀನ ಮಾಡಿದ್ದರು. ಭೂ ಸ್ವಾಧೀನವಾಗಿ 5 ದಶಕಗಳು ಸಮೀಪಿಸುತ್ತಿದ್ದರೂ ಪುರಸಭೆ ಆಡಳಿತ ಮಾತ್ರ ಇದುವರೆಗೂ ಕಡು ಬಡವರಿಗೆ ಒಂದೇ ಒಂದು ನಿವೇಶನ ಹಂಚಿಕೆ ಮಾಡಿಲ್ಲ.
ಲೋಕಾಯುಕ್ತರ ತನಿಖಾ ವರದಿ ಬಾಕಿ ಇರುವಾಗಲೇ ಕಡು ಬಡವರ ನಿವೇಶನಕ್ಕೆ ಮೀಸಲಾದ ಟಿ.ಬಿ.ಬಡಾವಣೆ ಮಾತ್ರ ಪಟ್ಟಣದ ಕಡು ಬಡುವರ ಕಣ್ಣ ಮುಂದೆಯೇ ಅನ್ಯಾಕ್ರಮಣಕ್ಕೆ ಒಳಗಾಗಿ ಕರಗುತ್ತಿದೆ. ಟಿ.ಬಿ.ಬಡಾವಣೆಯಲ್ಲಿ ಟೌನ್ ಪ್ಲಾನಿಂಗ್ ಮಾಡಿ ನಿವೇಶನಗಳನ್ನು ನಿರ್ಮಿಸಬೇಕಾದ ಪುರಸಭೆ ತನ್ನ ಮೂಲ ಉದ್ದೇಶವನ್ನೆ ಮರೆತಿದೆ.
ಜಿಲ್ಲಾಡಳಿತ ಮೌನ:
ಕಡು ಬಡವರಿಗೆ ಹಂಚಿಕೆ ಮಾಡಬೇಕಾದ ಜಾಗವನ್ನು ಮೂಲ ಉದ್ದೇಶಕ್ಕೆ ಬಳಕೆ ಮಾಡದೆ ಲೋಕಾಯುಕ್ತರ ತನಿಖಾ ವರದಿ ಬರುವುದಕ್ಕೂ ಮುನ್ನವೇ ಜಾತಿ ಭವನಗಳಿಗೆ, ಖಾಸಗಿ ಸಂಘಗಳಿಗೆ, ಖಾಸಗಿ ಶಾಲೆಗೆ ನೀಡಿರುವುದರ ವಿರುದ್ಧ ಪುರಸಭೆ ಸದಸ್ಯರೂ ಆದ ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಕೆ.ಸಿ.ಮಂಜುನಾಥ್ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಳೆದ ಫೆಬ್ರುವರಿ 12 ರಂದು ಲಿಖಿತ ಮನವಿ ನೀಡಿ ಟಿ.ಬಿ.ಬಡಾವಣೆಯಲ್ಲಿ ನಿಯಮಬಾಹಿರವಾಗಿ ಖಾಸಗಿ ಸಂಘಟನೆಗಳಿಗೆ ನಿವೇಶನ ನೀಡುವುದನ್ನು ತಡೆದು, ಒತ್ತುವರಿ ತೆರವುಗೊಳಿಸಿ ಭೂ ಸ್ವಾಧೀನ ಪ್ರದೇಶಕ್ಕೆ ತಂತಿ ಬೇಲಿ ಹಾಕಿಸುವಂತೆ ಒತ್ತಾಯಿಸಿದ್ದಾರೆ.
ಕೆ.ಸಿ.ಮಂಜುನಾಥ್ ಅವರ ದೂರು ಪತ್ರಕ್ಕೆ ಸ್ಪಂದಿಸಿರುವ ಉಪ ಮುಖ್ಯಮಂತ್ರಿಗಳು ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಉಪ ಮುಖ್ಯಮಂತ್ರಿಗಳ ಪತ್ರದ ಆಧಾರದ ಮೇಲೆ ಕಳೆದ ಏಪ್ರಿಲ್ 30 ರಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪುರಸಭೆಗೆ ನಿರ್ದೇಶನ ಪತ್ರ ಬಂದಿದೆ.
ಜಿಲ್ಲಾಧಿಕಾರಿಗಳ ಕಚೇರಿ ನಿರ್ದೇಶನದ ಮೇರೆಗೆ ಪುರಸಭೆ ಜೂ.4 ರಂದು ಪಟ್ಟಣದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಪತ್ರ ಬರೆದು ಟಿ.ಬಿ.ಬಡಾವಣೆಯ ಸರ್ವೇ ನಂ.280, 281, 285, 286 ಹಾಗೂ 290 ರಲ್ಲಿ ಪೋಡ್ ನಂಬರುಗಳನ್ನು ಅಳತೆ ಮಾಡಿ ಗಡಿ ಗುರುತಿಸಿ ಕೊಡುವಂತೆ ಕೋರಿದೆ. ಆದರೆ, ತಿಂಗಳು ಕಳೆದರೂ ಭೂ ಮಾಪನ ಇಲಾಖೆ ಮಾತ್ರ ಇತ್ತ ತಲೆಹಾಕಿಲ್ಲ. ಪುರಸಭೆ ಮತ್ತು ಜಿಲ್ಲಾಡಳಿತ ಈಗಲಾದರೂ ಸಕ್ರಿಯವಾಗಿ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಆಸ್ತಿಯನ್ನು ಸಂರಕ್ಷಿಸಿ ಸೂರಿನ ಕನಸು ಕಾಣುತ್ತಿರುವ ಪಟ್ಟಣದ ಕಡು ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡುವುದೇ ಎಂಬುದನ್ನು ಕಾದು ನೋಡಬೇಕಿದೆ.
--
ಕೆ.ಸಿ.ಮಂಜುನಾಥ್, ಪುರಸಭೆ ಸದಸ್ಯ.
‘ಗ್ರಾಮಿಣ ಪ್ರದೇಶದಲ್ಲೂ ಬಡ ಕುಟುಂಬಗಳಿಗೆ ನಿವೇಶನದ ಕೊರತೆಯಿದೆ. ತಾಲೂಕಿನಲ್ಲಿ ಯಾವುದೇ ಗ್ರಾಮ ಪಂಚಾಯ್ತಿಯಲ್ಲಿ ಬಡವರಿಗೆ ನಿವೇಶನ ಹಂಚಿಕೆಗೆ ಮುಂದಾಗಿಲ್ಲ. ಗ್ರಾಮೀಣ ಭಾಗದಲ್ಲೂ ಬಡವರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯಾಧಿಕಾರಿಗಳು ಕ್ರಮ ವಹಿಸಬೇಕು.’ಬಿ.ಎಲ್ .ದೇವರಾಜು, ಕಾಂಗ್ರೆಸ್ ಮುಖಂಡರು.