ಕನ್ನಡಪ್ರಭ ವಾರ್ತೆ ಅಥಣಿ
ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಪ್ರದೇಶದ 40ಕ್ಕೂ ಅಧಿಕ ಕುಟುಂಬಗಳ 120 ಜನರು ಹಾಗೂ ಜಾನುವಾರುಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದೆ. ಶಾಶ್ವತ ನೆಲೆ ಕಲ್ಪಿಸಬೇಕೆಂದು ಪಟ್ಟು ಹಿಡಿದಿದ್ದ ಈ ಜನರನ್ನು ತಾಲೂಕು ಅಧಿಕಾರಿಗಳು ಮನವೊಲಿಸಿ ಹುಲಗಬಾಳ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
ಸಪ್ತಸಾಗರ ಗ್ರಾಮದ ಬನದ ತೋಟದ 35ಕ್ಕೂ ಅಧಿಕ ಕುಟುಂಬಗಳ ಜನರನ್ನು ಹಾಗೂ ಜಾನುವಾರುಗಳನ್ನು ಬೋಟ್ ಮೂಲಕ ಗ್ರಾಮದ ಸರ್ಕಾರಿ ಪ್ರಾಥಮಿಕ ಕೇಂದ್ರದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಅಥಣಿ ತಾಲೂಕಿನ 22 ಗ್ರಾಮಗಳಿಗೆ ಪ್ರವಾಹದ ಆತಂಕ ಎದುರಾಗಿದೆ. ದರೂರ ಬ್ರಿಡ್ಜ್‌ಗೆ ಕೆಳಹಂತಕ್ಕೆ ಕೃಷ್ಣಾ ನದಿಯ ನೀರು ಬರುತ್ತಿದ್ದು, ನೀರು ಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ ಬ್ರಿಡ್ಜ್ ಮೇಲೆ ನೀರು ಹರಿಯುವ ಆತಂಕ ಎದುರಾಗಿದೆ. ಅಲ್ಲದೆ, ತಾಲೂಕಿನ ಜನವಾಡ, ತೀರ್ಥ, ಸಪ್ತಸಾಗರ, ನದಿಇಂಗಳಗಾಂವ ಗ್ರಾಮಗಳ ಹತ್ತಿರದಲ್ಲಿಯೇ ಕೃಷ್ಣಾ ನೀರು ಬಂದಿರುವುದರಿಂದ ಈ ಗ್ರಾಮಗಳಿಗೆ ಯಾವುದೇ ಸಂದರ್ಭದಲ್ಲಿ ನೀರು ನುಗ್ಗಬಹುದು. ಹೀಗಾಗಿ ಈ ನಾಲ್ಕು ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ತಾಲೂಕು ಆಡಳಿತ ಸನ್ನದ್ಧ ಸ್ಥಿತಿಯಲ್ಲಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಡಲ್ ಅಧಿಕಾರಿಗಳು, ಪಿಡಿಒ, ಗ್ರಾಮಲೆಕ್ಕಾಧಿಕಾರಿಗಳು ಜವಾಬ್ದಾರಿ ವಹಿಸಿದ ಗ್ರಾಮಗಳಲ್ಲಿ ಇರಬೇಕು. ಜನರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪರಿಸ್ಥಿತಿಯ ಮೇಲೆ ನಿಗಾ ವಹಿಸಲು, ನಿರಂತರವಾಗಿ ತಾಲೂಕು ಆಡಳಿತದೊಂದಿಗೆ ಸಂಪರ್ಕದಲ್ಲಿರಲು ಸೂಚನೆ ನೀಡಲಾಗಿದೆ. ಈಗಾಗಲೇ ಪ್ರಥಮ ಹಂತದಲ್ಲಿ ಯಾವ ಯಾವ ಗ್ರಾಮಗಳು ಮುಳುಗಡೆ ಆಗಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ತಾಪಂ ಇಒ ಶಿವಾನಂದ ಕಲ್ಲಾಪೂರ, ಗ್ರೇಡ್ 2 ತಹಸೀಲ್ದಾರ್ ಶ್ರೀಶೈಲ್ ಗುಡಮಿ, ನೀರಾವರಿ ಇಲಾಖೆ ಎಂಜಿನಿಯರ್ ಪ್ರವೀಣ ಹುಣಸಿಕಟ್ಟಿ, ಸಿಪಿಐ ರವೀಂದ್ರ ನಾಯ್ಕೋಡಿ, ಹೋಸಕೇರಿ ಮತ್ತು ಕಂದಾಯ ನಿರೀಕ್ಷಕ ಶಿವಾನಂದ ಮೆಣಸಂಗಿ, ಎಂ.ಎಸ್. ಯೇತನಟ್ಟಿ ಉಪಸ್ಥಿತರಿದ್ದರು.
ನದಿದಡಕ್ಕೆ ಹೋಗದಂತೆ ಮನವಿ: ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಕೃಷ್ಣಾ ಹಾಗೂ ಉಪನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸಾರ್ವಜನಿಕರು ನದಿ ತೀರದತ್ತ ಹೋಗಬಾರದು. ಜಾನುವಾರಗಳನ್ನು ಬಿಡಬಾರದು. ಜಿಲ್ಲಾಡಳಿತ ಸೂಚಿಸಿದ ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲರೂ ಪಾಲಿಸಬೇಕು. ನೆರೆ ಹಾವಳಿ ಎದುರಿಸಲು ತಾಲೂಕಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಯಾರೂ ಧೈರ್ಯಗೆಡಬಾರದು, ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ಯ್ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 11ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಿದ್ದು, ಶುಕ್ರವಾರದ ವೇಳೆ ಸುಮಾರು 50 ಸಾವಿರ ಕ್ಯುಸೆಕ್ ದಾಟುವ ಸಾಧ್ಯತೆ ಇದೆ.