ವಿಧಾನಸಭೆ/ವಿಧಾನ ಪರಿಷತ್‌ : ‘ನಾನು ಯಾರ ಮೇಲೂ ದ್ವೇಷ ರಾಜಕಾರಣ ಮಾಡಲ್ಲ. ಅಧಿಕಾರದಲ್ಲಿದ್ದಾಗ ನಾವು ಎರಡನ್ನು ಸಂಪಾದಿಸಬಹುದು. ಒಂದು ಅತಿ ಹೆಚ್ಚು ಮಿತ್ರರು ಅಥವಾ ಅತಿ ಹೆಚ್ಚು ಶತ್ರುಗಳು. ನಾನು ಹೆಚ್ಚು ಸ್ನೇಹಿತರನ್ನು ಗಳಿಸಲು ಬಯಸುತ್ತೇನೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

‘ಆದರೆ, ನನಗೆ ಹೃದಯ ಶ್ರೀಮಂತಿಕೆ ಇದೆ ಎಂಬ ಉದ್ದೇಶದಿಂದ ಬೆಳಗ್ಗೆ-ಸಂಜೆ ನನ್ನನ್ನು ಟಾರ್ಗೆಟ್‌ ಮಾಡಿದರೆ ಸಹಿಸುವುದಿಲ್ಲ’ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಮಾಡಿದ ಮೊದಲ ವಿಧಾನಮಂಡಲ ಭಾಷಣದಲ್ಲಿ ಅವರು ತಮ್ಮ ಮುಂದಿನ ದಾರಿಯನ್ನು ಬಿಚ್ಚಿಟ್ಟಿದ್ದಾರೆ.

ಶುಕ್ರವಾರ ಉಭಯ ಸದನಗಳಲ್ಲಿ ತಮ್ಮ ಸಂಪುಟದ ಸಚಿವರನ್ನು ಪರಿಚಯಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಗೂ ಹೊಸ ಆಲೋಚನೆಗಳಿರುತ್ತವೆ. ಹೊಸ ಆಲೋಚನೆ, ಭರವಸೆ, ನಂಬಿಕೆ ಮೂಲಕ ಜನರ ವಿಶ್ವಾಸ ಗಳಿಸುವುದು ನಮ್ಮ ಕರ್ತವ್ಯ. ನಮ್ಮ ಶಾಸಕರು, ವಿರೋಧ ಪಕ್ಷದ ಶಾಸಕರು, ನಾಯಕರು, ನಮ್ಮ ಸಚಿವ ಸಂಪುಟದ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ರಾಜ್ಯದ ಜನರ ಅಭಿವೃದ್ಧಿಗೆ ಟೀಮ್ ಕರ್ನಾಟಕವಾಗಿ ಕೆಲಸ ಮಾಡಬೇಕು ಎಂದರು.


ಜನರ ತೀರ್ಮಾನ ಒಪ್ಪಬೇಕು:

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಜನರ ತೀರ್ಮಾನ ನಾವು ಒಪ್ಪಬೇಕು. ಆದರೆ ಈಗ ನನಗೆ ಸಿಕ್ಕಿರುವ ಅವಕಾಶದಲ್ಲಿ 224 ಶಾಸಕರೂ ನನ್ನ ದೃಷ್ಟಿಯಲ್ಲಿ ಒಂದೇ. ಈ ಸ್ಥಾನದಲ್ಲಿ ಕೂತು ಎಲ್ಲರನ್ನು ಒಟ್ಟಿಗೆ ಕರೆದೊಯ್ಯಬೇಕು ಎಂಬುದು ನನ್ನ ಆಸೆ. ಎಸ್‌.ಆರ್‌.ಕಂಠಿ ಅವರ ಕಾಲದಿಂದ ಸಿದ್ದರಾಮಯ್ಯವರೆಗೆ ಅನೇಕ ರಾಜಕೀಯ ಮುತ್ಸದ್ದಿಗಳ ಆಡಳಿತ ನೋಡಿದ್ದೇವೆ. ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ನಾಡಿಗೆ ಕೊಡುಗೆ ನೀಡಿದ್ದಾರೆ. ನಾನು ಯಾರನ್ನೂ ಟೀಕೆ ಮಾಡುವುದಿಲ್ಲ ಎಂದು ಹೇಳಿದರು.

ಜೆ.ಎಚ್‌.ಪಟೇಲರ ಹೃದಯ ಶ್ರೀಮಂತಿಕೆ ಬಹಳ ದೊಡ್ಡದು. ಬೇರೆಯವರ ಒತ್ತಡದಿಂದ ನನ್ನನ್ನು ಒಮ್ಮೆ ಬಂಧಿಸುವ ಸಂದರ್ಭ ಬಂದಾಗ, ನೀವು ಹೊರಗಡೆ ರಾಜಕೀಯ ಮಾಡಿಕೊಳ್ಳಿ, ವಿಧಾನಸೌಧದಲ್ಲಿ ನಾನು ಮಾಡುವುದಿಲ್ಲ. ನಿಮ್ಮ ರಾಜಕೀಯಕ್ಕೆ ಶಾಸಕನನ್ನು ಬಂಧಿಸುವುದಿಲ್ಲ. ಇಲ್ಲಿ ನನಗೆ ಪ್ರತಿಪಕ್ಷ, ಆಡಳಿತ ಪಕ್ಷ ಎಲ್ಲಾ ಶಾಸಕರೂ ಒಂದೇ ಎನ್ನುವ ಮುಖಾಂತರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದರು. ನಾನೂ ಅದೇ ಮಾದರಿ ಅನುಸರಿಸುವುದಾಗಿ ತಿಳಿಸಿದರು.

ಟಾರ್ಗೆಟ್‌ ಮಾಡಿದರೆ ಸಹಿಸಲ್ಲ:

ನಾನು ಯಾವುದೇ ದ್ವೇಷ ರಾಜಕಾರಣ ಮಾಡುವುದಿಲ್ಲ. ರಾಜಕಾರಣ ಏನೇ ಇದ್ದರೂ ಹೊರಗಿಟ್ಟುಕೊಳ್ಳೋಣ. ಇಲ್ಲಿ ನನಗೆ ಎಲ್ಲ ಪಕ್ಷಗಳ ಶಾಸಕರೂ ಒಂದೇ. ಪಕ್ಷ ಭೇದ ಮಾಡುವುದಿಲ್ಲ. ಹೃದಯ ಶ್ರೀಮಂತಿಕೆಯಿಂದ ಕೆಲಸ ಮಾಡುತ್ತೇನೆ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾ ರಂಗಗಳು ನಾಲ್ಕು ಆಧಾರ ಸ್ತಂಭಗಳು. ನಾನು ಅಥವಾ ನಮ್ಮ ಸರ್ಕಾರ ತಪ್ಪು ಮಾಡಿದರೆ ಪ್ರತಿಪಕ್ಷದವರು ತಿದ್ದಿ ತೀಡುವ ಕೆಲಸ ಮಾಡಲಿ. ಮಾಧ್ಯಮದವರೂ ತಮ್ಮ ಬರವಣಿಗೆ ಮೂಲಕ ಎಚ್ಚರಿಸುವ ಕೆಲಸ ಮಾಡಲಿ. ಆದರೆ, ನನಗೆ ಹೃದಯ ಶ್ರೀಮಂತಿಕೆ ಇದೆ ಅಂತ ಬೆಳಗ್ಗೆ-ಸಂಜೆ ನನ್ನನ್ನು ಟಾರ್ಗೆಟ್‌ ಮಾಡಿದರೆ ಸಹಿಸುವುದಿಲ್ಲ ಎಂದು ಶಿವಕುಮಾರ್‌ ಎಚ್ಚರಿಸಿದರು.

ನಮ್ಮ ರಾಜಕಾರಣ ಏನೇ ಇದ್ದರೂ ರಸ್ತೆಯಲ್ಲಿರಲಿ. ನನಗೆ ಎಲ್ಲರೂ ಒಂದೇ. ಹಳೆಯದನ್ನೆಲ್ಲ ಮರೆತು, ಹೊಸ ಪಯಣದಲ್ಲಿ ಸಾಗೋಣ. ಇಡೀ ಪ್ರಪಂಚ ಭಾರತವನ್ನು ಬೆಂಗಳೂರು ಹಾಗೂ ಕರ್ನಾಟಕ ಮುಖೇನ ನೋಡುತ್ತಿದೆ. ನಮ್ಮಲ್ಲಿರುವ ಜ್ಞಾನ, ಪ್ರತಿಭೆ, ಮಾನವ ಸಂಪನ್ಮೂಲ, ಪ್ರಕೃತಿ ಸಂಪತ್ತು ಬೇರೆ ರಾಜ್ಯಗಳಲ್ಲಿ ಇಲ್ಲ ಎಂದರು.

ವಿರೋಧಿಸುವುದು ಘನತೆಗೆ ತಕ್ಕದ್ದಲ್ಲ:

ಸಭಾಧ್ಯಕ್ಷರ ಪೀಠ ವೈಯಕ್ತಿಕ ಸ್ಥಾನವಲ್ಲ. ನಮ್ಮ ಪಕ್ಷದ ನಾಯಕರು ಈ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಸೂಚಿಸಿದ್ದರೇ ಹೊರತು ಸಭಾಧ್ಯಕ್ಷರನ್ನಾಗಿ ಘೋಷಣೆ ಮಾಡಿರಲಿಲ್ಲ. ಇದಕ್ಕೆ ವಿರೋಧ ಪಕ್ಷದ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ. ಸ್ಪೀಕರ್ ಸ್ಥಾನ ಪಕ್ಷಾತೀತ. ಎಲ್ಲರ ಮಾತಿಗೂ ಕಿವಿಗೊಡಬೇಕು. ಹೀಗಾಗಿ ವಿರೋಧ ಪಕ್ಷದವರು ವಿರೋಧ ಮಾಡುವುದನ್ನು ಬಿಟ್ಟು ಸಭಾಧ್ಯಕ್ಷರ ಆಯ್ಕೆಯಲ್ಲಿ ಭಾಗವಹಿಸಬೇಕಿತ್ತು. ವಿರೋಧ ಮಾಡುವುದು ಅವರ ಘನತೆಗೆ ತಕ್ಕುದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ವಿರೋಧ ಪಕ್ಷದ ನಾಯಕರನ್ನು ಬಿಟ್ಟು ಕೆಲಸ ಮಾಡಲು ಆಗುವುದಿಲ್ಲ. ನಮಗೆ ಯಾರ ಬಗ್ಗೆಯೂ ಹೊಟ್ಟೆ ಉರಿ ಇಲ್ಲ. ಯಾರ ವಿರುದ್ಧವೂ ಅಧಿಕಾರ ದುರುಪಯೋಗ ಮಾಡಿ ತೊಂದರೆ ನೀಡಲು ನಾನು ಬಯಸುವುದಿಲ್ಲ ಎಂದು ಹೇಳಿದರು.

25 ವರ್ಷಗಳಲ್ಲಿ ಹಸಿರು ರಾಜ್ಯ:

ಮುಂದಿನ 25 ವರ್ಷಗಳಲ್ಲಿ ರಾಜ್ಯವನ್ನು ಹಸಿರು ರಾಜ್ಯವನ್ನಾಗಿ ಮಾಡಿ, ನೀರಿನ ಪೋಲು ತಡೆಗಟ್ಟಿ ಕೃಷಿಗೆ ಬಳಸಬೇಕು. ಪ್ರತಿಯೊಬ್ಬ ರೈತರ ಬದುಕಿಗೆ ಆಸರೆಯಾಗಬೇಕು. ತೋಟಗಾರಿಕೆ, ಹೈನುಗಾರಿಕೆ ಪರ್ಯಾಯ ರೈತರ ಆರ್ಥಿಕತೆಯಾಗಿದೆ. ನಮ್ಮ ಸರ್ಕಾರ ಗ್ರಾಮೀಣ ಭಾಗದ ಜನರು, ಮಕ್ಕಳು ಶಿಕ್ಷಣಕ್ಕಾಗಿ ನಗರಕ್ಕೆ ವಲಸೆ ಬರುವುದನ್ನು ತಪ್ಪಿಸಲು ಸಿಎಸ್ಆರ್ ನಿಧಿಯನ್ನು ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ ಮೀಸಲಿಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

- ಹಾಗಂತ ಬೆಳಗ್ಗೆ- ಸಂಜೆ ಟಾರ್ಗೆಟ್‌ ಮಾಡಿದರೆ ನಾನು ಸಹಿಸೋದೂ ಇಲ್ಲ

- ಎಲ್ಲ 224 ಶಾಸಕರೂ ನನಗೆ ಒಂದೇ । ಒಂದು ಟೀಂ ಆಗಿ ಕೆಲಸ ಮಾಡೋಣ

- ಜೆ.ಎಚ್‌. ಪಟೇಲರ ಹೃದಯ ಶ್ರೀಮಂತಿಕೆಯನ್ನೇ ಅನುಸರಿಸುವೆ: ಸಿಎಂ

- ಅಧಿಕಾರದಲ್ಲಿದ್ದಾಗ ನಾವು ಎರಡನ್ನು ಸಂಪಾದಿಸಬಹುದು. 1. ಅತಿ ಹೆಚ್ಚು ಮಿತ್ರರು 2. ಅತಿ ಹೆಚ್ಚು ಶತ್ರುಗಳು. ನನಗೆ ಮಿತ್ರರು ಬೇಕು

- ಎಸ್‌.ಆರ್‌. ಕಂಠಿ ಅವರ ಕಾಲದಿಂದ ಸಿದ್ದರಾಮಯ್ಯವರೆಗೆ ಮುತ್ಸದ್ದಿಗಳ ಆಡಳಿತ ನೋಡಿದ್ದೇವೆ. ನಾನು ಯಾರನ್ನೂ ಟೀಕಿಸೋದಿಲ್ಲ

- ನಾನು ಪಕ್ಷಭೇದ ಮಾಡುವುದಿಲ್ಲ. ನಾನು ಅಥವಾ ಸರ್ಕಾರ ತಪ್ಪು ಮಾಡಿದರೆ ಪ್ರತಿಪಕ್ಷದವರು ತಿದ್ದಿ ತೀಡುವ ಕೆಲಸವನ್ನು ಮಾಡಲಿ

- ಮಾಧ್ಯಮದವರೂ ಬರವಣಿಗೆ ಮೂಲಕ ಎಚ್ಚರಿಸುವ ಕೆಲಸ ಮಾಡಲಿ. ಆದರೆ ಬೆಳಗ್ಗೆ- ಸಂಜೆ ಟಾರ್ಗೆಟ್‌ ಮಾಡಿದರೆ ಸಹಿಸುವುದಿಲ್ಲ

- ನಮ್ಮ ರಾಜಕಾರಣ ಏನೇ ಇದ್ದರೂ ರಸ್ತೆಯಲ್ಲಿರಲಿ. ನನಗೆ ಎಲ್ಲರೂ ಒಂದೇ. ಹಳೆಯದನ್ನೆಲ್ಲ ಮರೆತು, ಹೊಸ ಪಯಣದಲ್ಲಿ ಸಾಗೋಣ