ರಾಮನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತವರು ಬೆಂಗಳೂರು ದಕ್ಷಿಣ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಜಿಲ್ಲೆಯವರೇ ಆದ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಅವರನ್ನು ನೇಮಕ ಮಾಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಉಸ್ತುವಾರಿ ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ಮತ್ತು ಎಚ್.ಸಿ.ಬಾಲಕೃಷ್ಣ ಅವರ ನಡುವೆ ಪೈಪೋಟಿ ನಡೆದಿತ್ತು. ಈಗ ಜಿಲ್ಲೆಯವರೇ ಆದ ಮಾಗಡಿ ಕ್ಷೇತ್ರ ಪ್ರತಿನಿಧಿಸುತ್ತಿರುವ ಎಚ್.ಸಿ.ಬಾಲಕೃಷ್ಣ ಅವರಿಗೆ ಜಿಲ್ಲಾ ಉಸ್ತುವಾರಿ ಸಾರಥ್ಯ ವಹಿಸಲಾಗಿದ್ದರೆ, ರಾಮಲಿಂಗಾರೆಡ್ಡಿ ಅವರನ್ನು ಕೋಲಾರ ಜಿಲ್ಲೆಗೆ ನೇಮಿಸಲಾಗಿದೆ.ಈ ಮೊದಲು ಸಿದ್ದರಾಮಯ್ಯ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದ ಡಿ.ಕೆ.ಶಿವಕುಮಾರ್ ಬೆಂಗಳೂರು ನಗರದ ಉಸ್ತುವಾರಿ ವಹಿಸಿಕೊಂಡಿದ್ದರು. ಹೀಗಾಗಿ ರಾಮಲಿಂಗಾರೆಡ್ಡಿ ಅವರೇ ಮೂರು ವರ್ಷ ಉಸ್ತುವಾರಿ ಸಚಿವರಾಗಿದ್ದರು.
ಜಿಲ್ಲೆಯ ಮನೆ ಮಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಬಳಿಕ ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡ ರಾಮಲಿಂಗಾರೆಡ್ಡಿ ಅವರಿಗೆ ಎರಡನೇ ಬಾರಿಗೂ ಜಿಲ್ಲಾ ಉಸ್ತುವಾರಿ ಹೊಣೆ ವಹಿಸಲಾಗಿತ್ತು. ಇದೀಗ ಎರಡನೇ ಪಟ್ಟಿಯಲ್ಲಿ ಸಚಿವ ಸ್ಥಾನ ಅಲಂಕರಿಸಿದ ಎಚ್.ಸಿ.ಬಾಲಕೃಷ್ಣ ಅವರಿಗೆ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ನೀಡಲಾಗಿದೆ.8ನೇ ಜಿಲ್ಲಾ ಉಸ್ತುವಾರಿ ಸಚಿವ:
ಬೆಂಗಳೂರು ದಕ್ಷಿಣ (ರಾಮನಗರ )ಜಿಲ್ಲೆಯಾಗಿ 20 ವಸಂತಗಳನ್ನು ಪೂರೈಸುತ್ತಿದೆ. ಆದರೆ, ಇಲ್ಲಿವರೆಗೆ ಜಿಲ್ಲೆಯವರೇ ಆದ ಸಿ.ಪಿ.ಯೋಗೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಉಸ್ತುವಾರಿ ಸಚಿವರಾಗುವ ಅವಕಾಶ ಸಿಕ್ಕಿತ್ತು. ಈಗ ಬಾಲಕೃಷ್ಣ ಅವರಿಗೂ ಅವಕಾಶ ಲಭಿಸಿದೆ.
ಈ ಮೊದಲು ಬಿಜೆಪಿಯಿಂದ ಶ್ರೀರಾಮುಲು, ಉಮೇಶ್ ಕತ್ತಿ, ರೇಣುಕಾಚಾರ್ಯ, ಬಚ್ಚೇಗೌಡ, ಸಿ.ಪಿ.ಯೋಗೇಶ್ವರ್ ಬಳಿಕ
ಅಶ್ವತ್ಥ ನಾರಾಯಣ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ, ಇವರೆಲ್ಲರೂ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪಟ್ಟದಿಂದ ಕೆಳಗಿಳಿದಿದ್ದರು. ಇನ್ನು ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್ 6 ರಿಂದ 7 ಬಾರಿ, ರಾಮಲಿಂಗಾರೆಡ್ಡಿ 2 ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಎಚ್.ಡಿ. ಕುಮಾರಸ್ವಾಮಿ ಸ್ಥಳೀಯ ಶಾಸಕರಾಗಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದರು. ಆದರೆ, ಉಸ್ತುವಾರಿ ಹೊಣೆ ಮಾತ್ರ ಹೊತ್ತಿರಲಿಲ್ಲ.ಬಾಕ್ಸ್ ....
ಡಿಕೆಶಿ ನಿಷ್ಠೆಗೆ ಸಿಕ್ಕ ಪ್ರತಿಫಲ?ಒಂದು ಕಾಲದಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಅತ್ಯಂತ ಆಪ್ತ ಬಳಗದಲ್ಲಿ ಬಾಲಕೃಷ್ಣ ಗುರುತಿಸಿಕೊಂಡಿದ್ದರು. ಎಚ್‌ಡಿಕೆ ಎರಡು ಬಾರಿ ಮುಖ್ಯಮಂತ್ರಿಯಾದರೂ ಈ ಆಪ್ತನಿಗೆ ಸಚಿವ ಸ್ಥಾನ ಕರುಣಿಸಿರಲಿಲ್ಲ. ಬಳಿಕ 2018ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಕೈ ಹಿಡಿದ ನಾಯಕರಲ್ಲಿ ಬಾಲಕೃಷ್ಣ ಕೂಡ ಒಬ್ಬರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಬಾಲಕೃಷ್ಣ ಕಾಂಗ್ರೆಸ್ ಬಂದಾಗಿನಿಂದಲೂ ಡಿಕೆಶಿ ಜತೆಗಿದ್ದು, ಅವರ ಪರಮ ಆಪ್ತರಾಗಿ ಗುರುತಿಸಿಕೊಂಡವರು. ಅದಕ್ಕಿಂತ ಹೆಚ್ಚಾಗಿ ಅವರು ಕಾಂಗ್ರೆಸ್ ಸೇರಲು ಡಿ.ಕೆ.ಶಿವಕುಮಾರ್ ಅವರೇ ಕಾರಣ.ಹೀಗಾಗಿ 2023ರಲ್ಲಿ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆದಾಗಿನಿಂದ ಹಿಡಿದು, ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮುನ್ನೆಲೆಗೆ ಬಂದಾಗಲೆಲ್ಲಾ ಬಾಲಕೃಷ್ಣ ಅವರು ಶಿವಕುಮಾರ್ ಪರ ಬಹಿರಂಗವಾಗಿ ಬ್ಯಾಟಿಂಗ್ ಮಾಡಿದ್ದರು. ಅಷ್ಟೇ ಅಲ್ಲ, ಸಚಿವ ಸಂಪುಟ ಪುನರ್ ರಚನೆಯ ಮಾತು ಕೇಳಿ ಬಂದಾಗಲೆಲ್ಲಾ, ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಸಾರ್ವಜನಿಕವಾಗಿಯೇ ಆಸೆ ತೋಡಿಕೊಂಡಿದ್ದರು. ಅದರಂತೆ ಸಚಿವ ಸ್ಥಾನದ ಜೊತೆಗೆ ಜಿಲ್ಲಾ ಉಸ್ತುವಾರಿ ಸ್ಥಾನವನ್ನೂ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
14ಕೆಆರ್ ಎಂಎನ್ 5.ಜೆಪಿಜಿಎಚ್.ಸಿ.ಬಾಲಕೃಷ್ಣ.