ಸೋರುತಿಹುದು ಮಿನಿ ವಿಧಾನಸೌಧದ ಮಾಳಿಗೆ

KannadaprabhaNewsNetwork | Published : Aug 22, 2024 12:51 AM

ಸಾರಾಂಶ

ಇಲ್ಲಿಯ ಮಿನಿ ವಿಧಾನಸೌಧದ ಮಾಳಗಿ ಮಳೆ ಬಂದರೆ ಸೋರುತ್ತಿದೆ.

ತಹಸೀಲ್ದಾರ ಕೊಠಡಿ ಮುಂಭಾಗದಲ್ಲಿ ನಿಂತಿರುವ ಮಳೆ ನೀರು

ರಾಮಮೂರ್ತಿ ನವಲಿ

ಕನ್ನಡಪ್ರಭ ವಾರ್ತೆ ಗಂಗಾವತಿ

ಇಲ್ಲಿಯ ಮಿನಿ ವಿಧಾನಸೌಧದ ಮಾಳಗಿ ಮಳೆ ಬಂದರೆ ಸೋರುತ್ತಿದೆ!

ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಆನೆಗೊಂದಿ ರಸ್ತೆಯ ಮಾರ್ಗದಲ್ಲಿರುವ ಮಿನಿ ವಿಧಾನಸೌಧದ ಮಾಳಿಗೆ ಸೋರುತ್ತಿದ್ದು, ಒಳಗೆ ನೀರು ನುಗ್ಗಿದೆ. ಅಲ್ಲದೇ ತಹಸೀಲ್ದಾರ ಕೊಠಡಿ ಮುಂಭಾಗದಲ್ಲಿ ನೀರು ನಿಂತಿದೆ.

ಕುಮಾರಸ್ವಾಮಿ ಉದ್ಘಾಟನೆ:

ನಗರದ ಆನೆಗೊಂದಿ ರಸ್ತೆಯ ಮಾರ್ಗದಲ್ಲಿ 2007ರಲ್ಲಿ ₹1 ಕೋಟಿಗಿಂತ ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಮಿನಿ ವಿಧಾನಸೌಧವನ್ನು ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿದ್ದರು. ಆ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಇಕ್ಬಾಲ್ ಅನ್ಸಾರಿ ಮುತುವರ್ಜಿಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ವಿಶಾಲವಾದ ಜಾಗೆಯಲ್ಲಿ ಮಿನಿ ವಿಧಾನಸೌಧ ನಿರ್ಮಿಸಿದ್ದರು. ಈಗ ಈ ಕಟ್ಟಟಕ್ಕೆ 17 ವರ್ಷ ಗತಿಸಿವೆ. ಇದರ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಯವರು ನೋಡಿಕೊಳ್ಳಬೇಕಾಗಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಈಗ ಮಳೆ ಬಂದಾಗ ಮಿನಿವಿಧಾನಸೌಧ ಸೋರಲಾರಂಭಿಸಿದೆ. ತಹಸೀಲ್ದಾರ ಕೊಠಡಿ ಮುಂಭಾಗವೂ ಸಹ ನೀರು ತೊಟ್ಟಿಕ್ಕುತ್ತಿದ್ದು, ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಸೂಕ್ಷ್ಮವಾಗಿ ತಿರುಗಾಡುವ ಪರಿಸ್ಥಿತಿ ಒದಗಿದೆ.

ಸಾರ್ವಜನಿಕರಿಗೆ ತೊಂದರೆ:

ನಗರ ಸೇರಿದಂತೆ ಗ್ರಾಮೀಣ ಭಾಗದಿಂದ ಬರುತ್ತಿದ್ದ ಸಾರ್ವಜನಿಕರು ಮಳೆ ನೀರಿನಿಂದ ಜಾರಿ ಬಿದ್ದಿರುವ ಉದಾಹರಣೆಗಳಿವೆ. ಮೆಟ್ಟಿಲು ಕೆಳಗೆ ನೀರು ಬರುತ್ತಿದ್ದು, ಪಕ್ಕದಲ್ಲಿಯೇ ವಿದ್ಯುತ್ ಉಪಕರಣಗಳು ಇವೆ. ಉಪಕರಣಗಳ ಮೇಲೆ ನೀರು ಬಿದ್ದರೆ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಮಳೆ ನೀರಿನಿಂದ ಗೋಡೆ ತೇವಾಂಶವಾಗಿದೆ. ಇದರಿಂದ ಉಪ ನೋಂದಣಿ ಕಚೇರಿಗೆ ಹೋಗುವ ಮೆಟ್ಟಿಲುಗಳು ಕಿತ್ತು ಬೀಳುವ ಹಂತಕ್ಕೆ ತಲುಪಿವೆ. ಇನ್ನು ಆಹಾರ ಇಲಾಖೆಯ ಗೋಡೆಯು ಸಹ ತೇವಾಂಶಗೊಂಡಿದೆ. ಮಿನಿ ವಿಧಾನಸೌಧದಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಳೆನೀರನ್ನು ತೆಗೆಯುತ್ತಿದ್ದರೂ ಸಹ ನಿರಂತರವಾಗಿ ಸೋರಲಾರಂಭಿಸಿದೆ.

ಇನ್ನಾದರೂ ಮಿನಿ ವಿಧಾನಸೌಧದ ನಿರ್ವಹಣೆಗೆ ಆಡಳಿತ ವ್ಯವಸ್ಥೆ ಹೆಚ್ಚಿನ ಗಮನ ನೀಡುವುದರ ಜೊತೆಗೆ ಕೂಡಲೇ ಕಟ್ಟಡದ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಳೆ ಬಂದರೆ ಮಿನಿ ವಿಧಾನಸೌಧ ಸೋರುತ್ತದೆ. ಇದನ್ನು ದುರಸ್ತಿಗೊಳಿಸುವಂತೆ ಲೋಕೋಪಯೋಗಿ ಇಲಾಖೆಯವರಿಗೆ ಮಾಹಿತಿ ನೀಡುತ್ತೇನೆ. ಕಟ್ಟಡ ಬಹಳ ಹಳೆಯದಾಗಿದ್ದು, ನವೀಕರಣಗೊಳ್ಳಬೇಕಾಗಿದೆ ತಹಸೀಲ್ದಾರ ನಾಗರಾಜ್ ತಿಳಿಸಿದ್ದಾರೆ.

Share this article