ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಲಾಗಿದ್ದು, ಬಗೆ ಬಗೆಯ ಹೂವುಗಳಿಂದ ರಾಜಾಸೀಟು ಕಣ್ಮನ ಸೆಳೆಯುತ್ತಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ರಾಜಾಸೀಟು ಉದ್ಯಾನವನದಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಶಾಸಕ ಡಾ.ಮಂತರ್ ಗೌಡ ಚಾಲನೆ ನೀಡಿದರು.ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಈ ಬಾರಿ ಓಂಕಾರೇಶ್ವರ ದೇವಾಲಯ ಹಾಗೂ ಕೊಡಗಿನ ಜೇನು ಆಕರ್ಷಣೀಯವಾಗಿದ್ದು, ಗಮನ ಸೆಳೆಯುತ್ತಿದೆ. ಹಾಗೆಯೇ ಫಲಪುಷ್ಪ ಪ್ರದರ್ಶನದಲ್ಲಿ ಸೆಲ್ಫಿ ಫೋಟೋ ಸೆರೆ ಹಿಡಿಯಲೂ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
35 ಲಕ್ಷ ರು. ವೆಚ್ಚದಲ್ಲಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಪ್ರವಾಸಿಗರು ಸೇರಿದಂತೆ ಎಲ್ಲರೂ ಸ್ವಚ್ಚತೆಗೆ ಒತ್ತು ನೀಡಬೇಕು ಎಂದರು.
ಕಳೆದ ಬಾರಿಯಂತೆ ಈ ಬಾರಿಯೂ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಜವಾಹರ್ ಲಾಲ್ ನೆಹರು, ಸರದಾರ್ ವಲ್ಲಭಬಾಯಿ ಪಟೇಲ್, ಡಾ.ಎಪಿಜೆ ಅಬ್ದುಲ್ ಕಲಾಂ, ಸರ್.ಎಂ.ವಿಶ್ವೇಶ್ವರಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಗುಡ್ಡೆಮನೆ ಅಪ್ಪಯ್ಯಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್, ಸುಭಾಷ್‌ಚಂದ್ರ ಬೋಸ್, ಡಾ.ಮನಮೋಹನ್ ಸಿಂಗ್, ಕುವೆಂಪು, ಡಾ.ರಾಜಕುಮಾರ್, ಪುನೀತ್ ರಾಜ್‌ಕುಮಾರ್, ರೋಹನ್ ಬೋಪಣ್ಣ, ಸಚಿನ್ ತಂಡೂಲ್ಕರ್ ಹೀಗೆ ಸುಮಾರು 50 ಕ್ಕೂ ಹೆಚ್ಚು ಮಹನೀಯರ ಕಲಾಕೃತಿಗಳು ಗಮನ ಸೆಳೆಯುತ್ತಿರುವುದು ವಿಶೇಷವಾಗಿದೆ.
ಮಡಿಕೇರಿಯ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಸ್ಥಾನದ ಹೂವಿನ ಕಲಾಕೃತಿ, ಕರ್ನಾಟಕ ಜೇನಿನ ಹಾಗೂ ಕೊಡಗು ಜೇನಿನ ‘ಕೂರ್ಗ್ ಹನಿ’ ಬ್ರ್ಯಾಂಡ್ ವಿವಿಧ ಕಲಾಕೃತಿಗಳು, ಮಕ್ಕಳು, ಮಹಿಳೆಯರಿಗೆ ಆಕರ್ಷಣೀಯ ಮನೋರಂಜನಾತ್ಮಕ ಹಾಗೂ ಫೋಟೋ ಪಾಯಿಂಟ್‌ಗಳ ಹೂವಿನ ವಿವಿಧ ಕಲಾಕೃತಿಗಳು, ವಿವಿಧ ಕಲಾಕೃತಿಗಳ ತರಕಾರಿ ಕೆತ್ತನೆ, ವಿವಿಧ ಹೂವಿನ ಕುಂಡಗಳ ಪ್ರದರ್ಶನ, ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಖಾಸಗಿ ಕಂಪನಿಗಳ ಮಳಿಗೆಗಳು, ವಿವಿಧ ನರ್ಸರಿಗಳ ಗಿಡಗಳ ಮಾರಾಟ ಮಳಿಗೆಗಳು ಆಕರ್ಷಿಸುತ್ತಿವೆ.
ಜ.27 ರವರೆಗೆ ಮಡಿಕೇರಿ ನಗರದ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.
ಕೊಡಗಿನ ಪ್ರಸಿದ್ದ ಶ್ರೀ ಓಂಕಾರೇಶ್ವರ ದೇವಸ್ಥಾನದ ಕಲಾಕೃತಿಯನ್ನು 22 ಅಡಿ ಎತ್ತರದಲ್ಲಿ 30 ಅಡಿ ಉದ್ದ, 38 ಅಡಿ ಅಗಲದಲ್ಲಿ ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಸುಮಾರು 5 ಲಕ್ಷ ಹೂವುಗಳಿಂದ ಅಲಂಕರಿಸಿ ನಿರ್ಮಿಸಲಾಗಿದೆ.
ವಿವಿಧ ಅಲಂಕಾರಿಕ ಗಿಡಗಳು ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡನೆಯ ಪ್ರದರ್ಶನಗಳನ್ನು ಏರ್ಪಾಡಿಸಲಾಗಿದೆ. ಈ ರೀತಿಯಾಗಿ 16 ವಿವಿಧ ರೀತಿಯ ಹೂವಿನ ಕಲಾಕೃತಿಗಳನ್ನು ಒಟ್ಟು 8 ರಿಂದ 10 ಲಕ್ಷ ಸಂಖ್ಯೆಯ ಸೇವಂತಿಗೆ, ಆರ್ಕಿಡ್, ಡೆಸ್ಸಿ ಹಾಗೂ ವಿವಿಧ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗಿದೆ.