ಖಾಸಗಿ ಬಸ್ ನಿಲ್ದಾಣ ಪಕ್ಕದ ಹೂ ಮಾರುಕಟ್ಟೆ ತೆರವು

KannadaprabhaNewsNetwork |  
Published : Jul 20, 2026, 12:30 AM IST
ಪೋಟೋ: 19ಎಸ್‌ಎಂಜಿಕೆಪಿ04ಶಿವಮೊಗ್ಗ ಖಾಸಗಿ ಬಸ್‌ ನಿಲ್ದಾಣ ಪಕ್ಕದಲ್ಲೇ ಇದ್ದ ಹೂವಿನಂಗಡಿಗಳು ಹಾಗೂ ಅಕ್ರಮ ಗೂಡಂಗಡಿಗಳ ವಿರುದ್ಧ  ಸಂಚಾರಿ ಪೊಲೀಸರು ಭಾನುವಾರ ಕಾರ್ಯಚರಣೆ ನಡೆಸಿ ತೆರವುಗೊಳಿಸಿದರು.  | Kannada Prabha

ಸಾರಾಂಶ

ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲೇ ಇದ್ದ ಹೂವಿನ ಮಳಿಗೆ ಹಾಗೂ ಅಕ್ರಮ ಗೂಡಂಗಡಿಗಳ ವಿರುದ್ಧ ಸಂಚಾರಿ ಪೊಲೀಸರು ಭಾನುವಾರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದು, ಹೂವಿನ ವ್ಯಾಪಾರಿಗಳು ಶಿವಪ್ಪನಾಯಕ ಮಾರುಕಟ್ಟೆಗೆ ಶಿಫ್ಟ್ ಆಗಲು ಒಂದು ವಾರದ ಗಡುವು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲೇ ಇದ್ದ ಹೂವಿನ ಮಳಿಗೆ ಹಾಗೂ ಅಕ್ರಮ ಗೂಡಂಗಡಿಗಳ ವಿರುದ್ಧ ಸಂಚಾರಿ ಪೊಲೀಸರು ಭಾನುವಾರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದು, ಹೂವಿನ ವ್ಯಾಪಾರಿಗಳು ಶಿವಪ್ಪನಾಯಕ ಮಾರುಕಟ್ಟೆಗೆ ಶಿಫ್ಟ್ ಆಗಲು ಒಂದು ವಾರದ ಗಡುವು ನೀಡಿದ್ದಾರೆ.

ಈ ಹಿಂದೆ ಶಿವಪ್ಪನಾಯಕ ಮಾರುಕಟ್ಟೆ ಕಾಮಗಾರಿ ಹಿನ್ನೆಲೆ ಇಲ್ಲಿದ್ದ ಹೂವಿನ ವ್ಯಾಪಾರಿಗಳನ್ನು ತಾತ್ಕಾಲಿಕವಾಗಿ ಬಸ್ ನಿಲ್ದಾಣದ ಪಕ್ಕದ ಜಾಗಕ್ಕೆ ಶಿಫ್ಟ್ ಮಾಡಲಾಗಿತ್ತು. ಈಗ ಶಿವಪ್ಪನಾಯಕ ಮಾರುಕಟ್ಟೆ ಕಟ್ಟಡ ಪೂರ್ಣಗೊಂಡಿದ್ದು, ಅಲ್ಲಿಯೇ ಹೂವಿನ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ವತಿಯಿಂದ ಶಾಶ್ವತ ಜಾಗದಲ್ಲಿ ಮಳಿಗೆ ಹಂಚಿಕೆ ಮಾಡಲಾಗಿದೆ. ಮಳಿಗೆ ಹಂಚಿಕೆಯಾಗಿದ್ದರೂ ಹೂವಿನ ವ್ಯಾಪಾರಿಗಳು ಅಲ್ಲಿಗೆ ಶಿಫ್ಟ್ ಆಗದೇ ಇಲ್ಲೇ ಇದ್ದ ಹಿನ್ನೆಲೆ ಭಾನುವಾರ ಸಂಚಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ನಗರದಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಫುಟ್‌ಪಾತ್ ಒತ್ತುವರಿದಾರರ ವಿರುದ್ಧ ಶಿವಮೊಗ್ಗ ನಗರ ಟ್ರಾಫಿಕ್ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಶಿವಮೊಗ್ಗದ ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣಗಳಿಗೆ ಪ್ರತಿದಿನ ಸಾವಿರಾರು ಪ್ರಯಾಣಿಕರು ಬಂದು ಹೋಗುತ್ತಾರೆ. ಆದರೆ, ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಅಧಿಕೃತ ಮಳಿಗೆಗಳ ಮಾಲೀಕರು ತಮಗೆ ಅಂಗಡಿಗಳಿದ್ದರೂ, ಸಾರ್ವಜನಿಕರು ಓಡಾಡುವ ಫುಟ್‌ಪಾತ್ ಮೇಲೆ ಹೂವುಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದಾಗಿ ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ರಸ್ತೆಯಲ್ಲೇ ನಡೆಯಬೇಕಾದ ಅನಿವಾರ್ಯತೆ ಇದೆ.

ಇಷ್ಟೇ ಅಲ್ಲದೇ, ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಲು ಬರುವ ವಾಹನ ಸವಾರರಿಗೂ ಇದು ತೀವ್ರ ಕಿರಿಕಿರಿ ಉಂಟುಮಾಡುತ್ತಿತ್ತು. ಸಾರ್ವಜನಿಕರು ಮತ್ತು ಪ್ರಯಾಣಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆ ಶಿವಮೊಗ್ಗ ಟ್ರಾಫಿಕ್ ಇನ್ಸ್‌ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ತೆರವು ಕಾರ್ಯಾಚರಣೆ ಕೈಗೊಂಡಿತು.

ಫುಟ್‌ಪಾತ್ ಮೇಲೆ ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಎಲ್ಲ ಹೂವಿನ ಮಳಿಗೆಗಳನ್ನು ಹಾಗೂ ಗೂಡಂಗಡಿಗಳನ್ನು ಸ್ಥಳದಲ್ಲೇ ತೆರವುಗೊಳಿಸಲಾಯಿತು. ಪಾದಚಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವುದೇ ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ ಎಂದು ಪೊಲೀಸರು ತಿಳಿಸಿದ್ದಾರೆ.

ಈಗಾಗಲೇ ಶಿವಮೊಗ್ಗ ನಗರದಾದ್ಯಂತ ಹಲವೆಡೆ ಯಶಸ್ವಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿರುವ ಟ್ರಾಫಿಕ್ ಪೊಲೀಸರು, ಇಂದಿನ ಕಾರ್ಯಾಚರಣೆ ಬೆನ್ನಲ್ಲೇ ಒತ್ತುವರಿದಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಫುಟ್‌ಪಾತ್ ಮೇಲಿರುವ ಉಳಿದ ಎಲ್ಲಾ ಹೂವಿನಂಗಡಿ ಹಾಗೂ ಅಕ್ರಮ ಶೇಡ್‌ಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಿಕೊಳ್ಳಲು ಮುಂದಿನ ಶನಿವಾರದವರೆಗೆ ಅಂತಿಮ ಗಡುವು ನೀಡಲಾಗಿದೆ. ಒಂದುವೇಳೆ ಗಡುವಿನ ಒಳಗಾಗಿ ಒತ್ತುವರಿ ತೆರವುಗೊಳಿಸದಿದ್ದರೆ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಿ, ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

- - -

-19ಎಸ್‌ಎಂಜಿಕೆಪಿ04:

ಶಿವಮೊಗ್ಗ ಖಾಸಗಿ ಬಸ್‌ ನಿಲ್ದಾಣ ಪಕ್ಕದಲ್ಲೇ ಇದ್ದ ಹೂವಿನಂಗಡಿಗಳು ಹಾಗೂ ಅಕ್ರಮ ಗೂಡಂಗಡಿಗಳ ವಿರುದ್ಧ ಸಂಚಾರ ಠಾಣೆ ಪೊಲೀಸರು ಭಾನುವಾರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ಷರ ದಾಸೋಹ ಸಿಬ್ಬಂದಿಯ ಆರೋಗ್ಯಕ್ಕೂ ಆದ್ಯತೆ
ನರರೋಗ ಸಮಸ್ಯೆ ಪರಿಹಾರಕ್ಕೆ ಸಲಕರಣೆಗಳ ನೆರವು: ಡಾ.ರಾಜೇಶ್