ಭಾರತ್‌ ಜೋಡೋ ಯಾತ್ರೆಯನ್ನು ನಾವು ಇಂದು ನೆನಪಿಸಿಕೊಳ್ಳುವಾಗ, ಅದನ್ನು ಕೇವಲ ಒಂದು ರಾಜಕೀಯ ಯಾತ್ರೆ ಎಂದು ನೋಡಬಾರದು. ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸುತ್ತಿದ್ದ ಶಕ್ತಿಗಳ ವಿರುದ್ಧವಾಗಿ, ಒಡೆದ ಮನಸುಗಳನ್ನು ಒಂದು ಮಾಡಲು ನಡೆದ ಒಂದು ಚಳವಳಿಯಂತೆ ಕಾಣಬೇಕು.

- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಭಾರತ್‌ ಜೋಡೋ ಯಾತ್ರೆಯನ್ನು ನಾವು ಇಂದು ನೆನಪಿಸಿಕೊಳ್ಳುವಾಗ, ಅದನ್ನು ಕೇವಲ ಒಂದು ರಾಜಕೀಯ ಯಾತ್ರೆ ಎಂದು ನೋಡಬಾರದು. ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸುತ್ತಿದ್ದ ಶಕ್ತಿಗಳ ವಿರುದ್ಧವಾಗಿ, ಒಡೆದ ಮನಸುಗಳನ್ನು ಒಂದು ಮಾಡಲು ನಡೆದ ಒಂದು ಚಳವಳಿಯಂತೆ ಕಾಣಬೇಕು.

ರಾಹುಲ್‌ ಗಾಂಧಿಯವರು ಭಾರತ್ ಜೋಡೋ ಪಾದಯಾತ್ರೆಯ ನೇತೃತ್ವ ವಹಿಸಿದ್ದರೂ ಇದು ಕೇವಲ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮವಾಗಿರಲ್ಲ. ಇದು ಭಾರತೀಯರೆಲ್ಲರ ಕಾರ್ಯಕ್ರಮ. ದೇಶದ ಬೇರೆ ಬೇರೆ ಭಾಗಗಳಿಂದ, ಜಾತಿ, ಧರ್ಮ, ಪಕ್ಷ, ಪಂಥಗಳನ್ನೂ ಮೀರಿ ಜನ ಬಂದು ಇದರಲ್ಲಿ ಭಾಗವಹಿಸಿದ್ದರು.

ಮೂರು ದಶಕಗಳ ಹಿಂದೆ ಈ ದೇಶದಲ್ಲಿ ರಥಯಾತ್ರೆಯೊಂದು ಹೊರಟಿತ್ತು. ದ್ವೇಷ, ಸುಳ್ಳು, ಅಪನಂಬಿಕೆಗಳನ್ನು ಬಿತ್ತುತ್ತಾ ಸಾಗಿದ ಆ ಯಾತ್ರೆ ಬಹುತ್ವದ ಭಾರತದ ಎದೆಯೊಳಗೆ ಮಾಡಿದ ಗಾಯ ಇನ್ನೂ ಮಾಸಿಲ್ಲ. ಆ ಗಾಯಕ್ಕೆ ಪ್ರೀತಿ, ಶಾಂತಿ, ಸಹಬಾಳ್ವೆಯ ಮುಲಾಮು ಹಚ್ಚಿ ಗುಣಪಡಿಸುವ ಸದುದ್ದೇಶದಿಂದ ರಾಹುಲ್‌ ಗಾಂಧಿಯವರು ಪಾದಯಾತ್ರೆ ಶುರು ಮಾಡಿದ್ದರು. ದೇಶದಲ್ಲಿ ದ್ವೇಷದ ವಾತಾವರಣ ಸೃಷ್ಟಿಸಿ, ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಪ್ರಯತ್ನಗಳು ನಡೆಯುತ್ತಿದ್ದ ಸಂದರ್ಭದಲ್ಲಿ, ರಾಹುಲ್‌ ಗಾಂಧಿಯವರು ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಸಾಗಿದರು. ದ್ವೇಷದಿಂದ ದೇಶ ಕಟ್ಟಲು ಸಾಧ್ಯವಿಲ್ಲ, ಪ್ರೀತಿಯಿಂದ ಮಾತ್ರ ಕಟ್ಟಲು ಸಾಧ್ಯ ಎನ್ನುವ ಚಿಂತನೆಯನ್ನು ಜನರ ಮನಸ್ಸಿನಲ್ಲಿ ಬಿತ್ತಿದ್ದರು. ಪ್ರೀತಿ, ಸ್ನೇಹ, ಸೌಹಾರ್ದತೆ, ಭ್ರಾತ್ರುತ್ವಗಳೇ ಭಾರತ್‌ ಜೋಡೋ ಯಾತ್ರೆಯ ದೇಹ ಮತ್ತು ಆತ್ಮವಾಗಿತ್ತು.

ನಾನು ಕೂಡ ರಾಹುಲ್ ಜತೆ ಹೆಜ್ಜೆ ಹಾಕಿದ್ದೆ:

ಕರ್ನಾಟಕಕ್ಕೆ ಭಾರತ್‌ ಜೋಡೋ ಯಾತ್ರೆ ಬಂದಾಗ ನಾನೂ ರಾಹುಲ್‌ ಗಾಂಧಿಯವರೊಂದಿಗೆ ಹೆಜ್ಜೆ ಹಾಕಿದ್ದೆ. ಆ ದಿನಗಳನ್ನು ನಾನು ಮರೆಯಲು ಸಾಧ್ಯವಿಲ್ಲ. ಬಿಸಿಲು, ಮಳೆ, ದಣಿವು ಯಾವುದನ್ನೂ ಲೆಕ್ಕಿಸದೆ ರಾಹುಲ್‌ ಗಾಂಧಿಯವರು ಜನರಿಗೆ ಜೊತೆಯಾಗಿ ಅವರ ಕಷ್ಟ-ಸುಖಗಳಿಗೆ ಕಿವಿಯಾಗುತ್ತಾ ಸಾಗಿದರು. ಈ ಯಾತ್ರೆಯುದ್ದಕ್ಕೂ ರೈತರನ್ನು, ಕಾರ್ಮಿಕರನ್ನು, ಯುವಜನರನ್ನು, ಮಹಿಳೆಯರು, ಮಕ್ಕಳು ಹೀಗೆ ಸಮಾಜದ ಎಲ್ಲಾ ವರ್ಗದ ಜನರ ನೋವು ಮತ್ತು ನಿರೀಕ್ಷೆಗಳನ್ನು ನೇರವಾಗಿ ಆಲಿಸಿದರು. ಜನರ ನಡುವೆ ನಡೆಯುವ ನಾಯಕನಿಗೆ ಜನರ ನಿಜವಾದ ಬದುಕು ಅರ್ಥವಾಗುತ್ತದೆ ಎಂಬುದಕ್ಕೆ ಈ ಯಾತ್ರೆ ಬಳಿಕ ರಾಹುಲ್ ಗಾಂಧಿಯವರ ವ್ಯಕ್ತಿತ್ವ ಹಾಗೂ ಹೋರಾಟಗಳಲ್ಲಿ ನಾನು ಕಂಡ ಬದಲಾವಣೆಗಳು ಸಾಕ್ಷಿ. ಭಾರತ್‌ ಜೋಡೋ ಯಾತ್ರೆ ರಾಹುಲ್‌ ಗಾಂಧಿಯವರನ್ನು ಜನರ ಹತ್ತಿರಕ್ಕೆ ಕರೆದೊಯ್ದಿತು. ಅವರನ್ನು ಭಾರತೀಯ ಸಮಾಜದ ಬಡ, ಅವಕಾಶ ವಂಚಿತ, ಶೋಷಿತ ಜನರ ಬದುಕಿನ ಕನ್ನಡಿಯಾಗಿ ರೂಪಿಸಿತು.

ಜನರ ಬಳಿಗೆ ರಾಹುಲ್ ಗಾಂಧಿ

ರಾಹುಲ್‌ ಗಾಂಧಿಯವರ ಮೇಲೆ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ವೈಯಕ್ತಿಕ ಟೀಕೆಗಳು ನಡೆದಿವೆ. ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ತೇಜೋವಧೆ ಮಾಡುವ ಘಟನೆಗಳೂ ನಡೆದಿವೆ. ಅವರ ನಾಯಕತ್ವ ಪ್ರಶ್ನಿಸಲಾಗಿದೆ. ಚಾರಿತ್ರ್ಯಹನನದ ಪ್ರಯತ್ನಗಳೂ ಆಗಿವೆ. ಆದರೆ ಅವರು ಅದಕ್ಕೆ ಪ್ರತಿಯಾಗಿ ದ್ವೇಷವನ್ನು ಆಯ್ಕೆ ಮಾಡದೆ ಪ್ರೀತಿಯ ಹಾದಿ ಆಯ್ದುಕೊಂಡರು, ದೇಶಕ್ಕಾಗಿ ದೇಶದ ಜನರ ಜೊತೆ ಹೆಜ್ಜೆ ಹಾಕಿದರು. ಹೀಗಾಗಿ ಭಾರತ್‌ ಜೋಡೋ ಯಾತ್ರೆ ಕೇವಲ ರಾಜಕೀಯ ಉತ್ತರವಾಗಿರಲಿಲ್ಲ. ಅದು ವೈಯಕ್ತಿಕ ದಾಳಿಗಳಿಗೆ ಜನರ ಪ್ರೀತಿಯ ಮೂಲಕ ನೀಡಿದ ಉತ್ತರವಾಗಿತ್ತು. ಒಬ್ಬ ರಾಜಕಾರಣಿ ಬಗ್ಗೆ ಮಾಧ್ಯಮಗಳಲ್ಲಿ ಏನು ಹೇಳಲಾಗುತ್ತದೆ ಎನ್ನುವುದಕ್ಕಿಂತ, ಜನ ಆ ನಾಯಕನನ್ನು ನೇರವಾಗಿ ಭೇಟಿಯಾದಾಗ ಏನು ಅನುಭವಿಸುತ್ತಾರೆ ಎಂಬುದು ಮುಖ್ಯ. ಭಾರತ್‌ ಜೋಡೋ ಯಾತ್ರೆ ರಾಹುಲ್‌ ಗಾಂಧಿಯವರಿಗೆ ಜನರ ಜೊತೆ ನೇರ ಸಂಪರ್ಕಕ್ಕೆ ವೇದಿಕೆ ಕಲ್ಪಿಸಿ ಕೊಟ್ಟಿತು.

ದೇಶದ ಏಕತೆಗಾಗಿ ನಡೆದ ಪಾದಯಾತ್ರೆ:

ವಿವಿಧತೆಯಲ್ಲಿ ಏಕತೆಯೇ ಭಾರತದ ಶಕ್ತಿ ಮತ್ತು ಸೌಂದರ್ಯ. ನಮ್ಮ ದೇಶದಲ್ಲಿ ಹಲವು ಧರ್ಮಗಳಿವೆ. ಹಲವು ಭಾಷೆಗಳಿವೆ. ಹಲವು ಸಂಸ್ಕೃತಿಗಳಿವೆ. ಹಲವು ಜಾತಿ ಮತ್ತು ಸಮುದಾಯಗಳಿವೆ. ಇಷ್ಟೊಂದು ವೈವಿಧ್ಯತೆಯ ನಡುವೆಯೂ ನಾವೆಲ್ಲರೂ ಒಂದೇ ದೇಶದ ನಾಗರಿಕರು. ಈ ವೈವಿಧ್ಯತೆಯನ್ನು ವಿಭಜನೆಯ ಕಾರಣವನ್ನಾಗಿ ಮಾಡುವುದು ಸುಲಭ. ಅದನ್ನು ಏಕತೆಯ ಶಕ್ತಿಯನ್ನಾಗಿ ಮಾಡುವುದು ನಿಜವಾದ ನಾಯಕತ್ವ. ಇಲ್ಲೇ ಭಾರತ್‌ ಜೋಡೋ ಯಾತ್ರೆಯ ಮಹತ್ವ ಇದೆ. ಒಬ್ಬ ಹಿಂದೂ ಮತ್ತೊಬ್ಬ ಮುಸ್ಲಿಮನನ್ನು, ಒಬ್ಬ ಮುಸ್ಲಿಂ ಇನ್ನೊಬ್ಬ ಹಿಂದೂವನ್ನು ಅನುಮಾನದಿಂದ ನೋಡುವ ವಾತಾವರಣ ನಿರ್ಮಾಣವಾದರೆ ದೇಶ ದುರ್ಬಲವಾಗುತ್ತದೆ. ಆದ್ದರಿಂದ ಧಾರ್ಮಿಕ ಸಹಿಷ್ಣುತೆ, ಪರಸ್ಪರ ಗೌರವ ಮತ್ತು ಸಾಮಾಜಿಕ ಸಾಮರಸ್ಯ ಬೆಳೆಸುವುದು ಕೇವಲ ರಾಜಕೀಯ ಘೋಷಣೆಯಲ್ಲ. ಅದು ಭಾರತದ ಭವಿಷ್ಯಕ್ಕಾಗಿ ಅಗತ್ಯವಾದ ಕರ್ತವ್ಯ. ಜನ ಒಬ್ಬರನ್ನೊಬ್ಬರು ಭೇಟಿಯಾಗಬೇಕು .ಒಬ್ಬರ ಮಾತನ್ನು ಮತ್ತೊಬ್ಬರು ಕೇಳಬೇಕು. ಒಬ್ಬರ ನೋವನ್ನು ಮತ್ತೊಬ್ಬರು ಅರ್ಥ ಮಾಡಿಕೊಳ್ಳಬೇಕು. ಇಂಥ ಪಾದಯಾತ್ರೆಗಳು ಜನರನ್ನು ನೇರವಾಗಿ ಪರಸ್ಪರ ಸಂಪರ್ಕಿಸುತ್ತವೆ. ರಸ್ತೆ ಮೇಲೆ ಒಟ್ಟಿಗೆ ನಡೆಯುವ ಹೆಜ್ಜೆಗಳು, ಮನಸ್ಸಿನ ನಡುವಿನ ಅಂತರವನ್ನೂ ಕಡಿಮೆಮಾಡುತ್ತವೆ ಎನ್ನುವುದು ನನ್ನ ಅನಿಸಿಕೆ.

ಆಕ್ಸಿಜನ್ ದುರಂತ- ಮಿಡಿದ ರಾಹುಲ್ ಹೃದಯ

ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್‌ ಗಾಂಧಿಯವರ ಜನಸ್ಪಂದನೆಯ ಮತ್ತೊಂದು ಪ್ರಮುಖ ಉದಾಹರಣೆ ಚಾಮರಾಜನಗರದ ಆಕ್ಸಿಜನ್‌ ದುರಂತದಲ್ಲಿ ಮಡಿದವರ ಕುಟುಂಬವನ್ನು ಭೇಟಿಯಾಗಿ ಸಂತೈಸಿದ್ದು. ಚಾಮರಾಜನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ಅನೇಕ ಅಮಾಯಕ ಜೀವಗಳು ಬಲಿಯಾದವು. ಇದು ಘಟಿಸಿದ ಕೆಲ ಸಮಯದ ತರುವಾಯ ಭಾರತ್ ಜೋಡೋ ಪಾದಯಾತ್ರೆ ಚಾಮರಾಜನಗರ ಜಿಲ್ಲೆಯನ್ನು ಹಾದು ಹೋಗುವಾಗ ರಾಹುಲ್‌ ಗಾಂಧಿಯವರು ಸಂತ್ರಸ್ತ ಕುಟುಂಬಗಳನ್ನು ಭೇಟಿಯಾದರು. ಸರ್ಕಾರದ ನಿರ್ಲಕ್ಷ್ಯದಿಂದಾಗಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳ ನೋವು ಆಲಿಸುವ ಮಾನವೀಯತೆಯನ್ನು ಆ ದಿನ ಕಣ್ಣಾರೆ ಕಂಡೆ. ಕುಟುಂಬದ ಒಬ್ಬ ಸದಸ್ಯನನ್ನು ಕಳೆದುಕೊಂಡಾಗ ಆ ಕುಟುಂಬದ ಬದುಕೇ ಬದಲಾಗುತ್ತದೆ. ಆ ಕುಟುಂಬಗಳಿಗೆ ಸಾಂತ್ವನದ ಮಾತುಗಳಷ್ಟೆ ಸಾಲದು. ಅವರ ಮುಂದಿನ ಬದುಕಿಗೆ ಆಧಾರ ಬೇಕು. ರಾಹುಲ್‌ ಗಾಂಧಿಯವರು ಸಂತ್ರಸ್ತ ಕುಟುಂಬಗಳಿಗೆ ಬದುಕಿನ ಆಧಾರ ಕಲ್ಪಿಸುವ ಭರವಸೆ ನೀಡಿದ್ದರು. ನಮ್ಮ ಸರ್ಕಾರ ಆ ಭರವಸೆಯನ್ನು ಕಾರ್ಯರೂಪಕ್ಕೆ ತಂದಿತು. ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ನಮ್ಮ ಸರ್ಕಾರ ರಾಹುಲ್ ಗಾಂಧಿಯವರು ನೀಡಿದ್ದ ವಾಗ್ದಾನ ಈಡೇರಿಸಿತ್ತು. ಇದು ನಮ್ಮ ಪಕ್ಷದ ಬದ್ಧತೆ ಎಂಬುದನ್ನು ಅತ್ಯಂತ ಹೆಮ್ಮೆಯಿಂದ ಹೇಳಬಯಸುತ್ತೇನೆ.

ಗಿಗ್ ಕಾರ್ಮಿಕರ ಬದುಕು ಬದಲಾಯಿಸಿದ ಯಾತ್ರೆ

ಇದೇ ರೀತಿ ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್‌ ಗಾಂಧಿಯವರು ಹೊಸ ಆರ್ಥಿಕ ವ್ಯವಸ್ಥೆಯಲ್ಲಿ ಹುಟ್ಟಿಕೊಂಡಿರುವ ಗಿಗ್‌ ಕಾರ್ಮಿಕರನ್ನು ಭೇಟಿಯಾಗಿ, ಅವರ ಸಮಸ್ಯೆಗಳನ್ನೂ ಆಲಿಸಿದರು. ಇಂದು ಸಾವಿರಾರು ಯುವಕರು ಆ್ಯಪ್ ಆಧಾರಿತ ಕೆಲಸಗಳ ಮೂಲಕ ತಮ್ಮ ಜೀವನ ನಡೆಸುತ್ತಿದ್ದಾರೆ. ಆದರೆ ಅವರಲ್ಲಿ ಅನೇಕರಿಗೆ ಉದ್ಯೋಗ ಭದ್ರತೆ ಇಲ್ಲ. ಸಾಮಾಜಿಕ ಭದ್ರತೆ ಇಲ್ಲ. ಅಪಘಾತವಾದರೆ ರಕ್ಷಣೆ ಇಲ್ಲ. ಆರೋಗ್ಯ ಸಮಸ್ಯೆ ಬಂದರೆ ಆರ್ಥಿಕ ಭದ್ರತೆ ಇಲ್ಲ. ಇಂತಹ ಕಾರ್ಮಿಕರ ಬದುಕಿನ ಅನಿಶ್ಚಿತತೆ ಅರ್ಥ ಮಾಡಿಕೊಳ್ಳುವುದು ಅತ್ಯಂತ ಮುಖ್ಯ. ರಾಹುಲ್‌ ಗಾಂಧಿಯವರು ಅವರ ಮಾತು ಕೇಳಿದರು. ಅವರ ಸಮಸ್ಯೆಗಳನ್ನು ರಾಷ್ಟ್ರೀಯ ಚರ್ಚೆಯ ಭಾಗವನ್ನಾಗಿ ಮಾಡಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗಿಗ್‌ ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗಾಗಿ ವಿಮಾ ಯೋಜನೆ ಜಾರಿಗೆ ತಂದಿದೆ. ಜನರ ಅಹವಾಲು, ಆಶೋತ್ತರವನ್ನು ಸರ್ಕಾರವೊಂದು ತನ್ನ ನೀತಿಯಾಗಿ ಪರಿವರ್ತಿಸಿ, ಜನಪರ ಆಡಳಿತದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿತು.

ರಾಜಕೀಯದ ಎಲ್ಲೆ ಮೀರಿದ ಭಾರತ್ ಜೋಡೋ:

ಭಾರತ್ ಜೋಡೋ ಯಾತ್ರೆಯ ಫಲವನ್ನು ಕೇವಲ ಚುನಾವಣಾ ಸ್ಥಾನಗಳ ಸಂಖ್ಯೆಯಲ್ಲಿ ಅಳೆಯಲು ಸಾಧ್ಯವಿಲ್ಲ. ಹೌದು, ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಯಾತ್ರೆಯು ಹೊಸ ಚೈತನ್ಯ ನೀಡಿತು. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮೂಡಿಸಿತು. ಜನರೊಂದಿಗೆ ಪಕ್ಷದ ನೇರ ಸಂಪರ್ಕ ಬಲಪಡಿಸಿತು. ರಾಜಕೀಯ ವಾತಾವರಣದಲ್ಲಿ ಬದಲಾವಣೆಗೆ ಕಾರಣವಾಯಿತು. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ದೊರೆತ ಭರ್ಜರಿ ಜನಾದೇಶದ ಹಿಂದೆ ಹಲವು ಕಾರಣಗಳಿದ್ದವು. ಅವುಗಳಲ್ಲಿ ಭಾರತ್‌ ಜೋಡೋ ಯಾತ್ರೆಯು ಪಕ್ಷದ ಸಂಘಟನೆ ಮತ್ತು ಜನಸಂಪರ್ಕಕ್ಕೆ ನೀಡಿದ ಚೈತನ್ಯವೂ ಒಂದು ಪ್ರಮುಖ ಅಂಶ. ಆದರೆ ಅದರ ನಿಜವಾದ ಫಲ ಇಷ್ಟಕ್ಕೆ ಸೀಮಿತವಾಗಲಿಲ್ಲ.

ಭಾರತದ ರಾಜಕಾರಣದಲ್ಲಿ ದ್ವೇಷದ ಬದಲು ಪ್ರೀತಿ ಮತ್ತು ಸಾಮರಸ್ಯದ ಮಾತನ್ನು ಮತ್ತೆ ಮುನ್ನೆಲೆಗೆ ತಂದದ್ದು ಇದರ ನಿಜವಾದ ಫಲ ಎಂದು ನಾನು ತಿಳಿದಿದ್ದೇನೆ. ಯುವಜನರು, ಕಾರ್ಮಿಕರು, ರೈತರು, ಮಹಿಳೆಯರು ಸೇರಿದಂತೆ ಸಾಮಾನ್ಯ ಜನರೊಂದಿಗೆ ನೇರ ಸಂವಾದಕ್ಕೆ ರಾಜಕೀಯ ನಾಯಕತ್ವವನ್ನು ಕರೆದೊಯ್ದದ್ದು ಕೂಡ ಭಾರತ್ ಜೋಡೋ ಪಾದಯಾತ್ರೆಯ ಸಾಧನೆಗಳಲ್ಲಿ ಒಂದಾಗಿದೆ.

ರಾಹುಲ್ ಗಾಂಧಿಯವರ ನಾಯಕತ್ವಕ್ಕೆ ವೇದಿಕೆ:

ರಾಹುಲ್‌ ಗಾಂಧಿಯವರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ ಅವರಲ್ಲಿ ಕಂಡದ್ದು ಕೇವಲ ರಾಜಕೀಯ ನಾಯಕತ್ವವಲ್ಲ. ಜನರ ನೋವು ಅರ್ಥಮಾಡಿಕೊಳ್ಳುವ ಮನಸ್ಸು. ವೈಯಕ್ತಿಕ ಟೀಕೆಗಳಿಗೆ ತಾಳ್ಮೆಯಿಂದ ಉತ್ತರಿಸುವ ಗುಣ. ಜನರ ನಡುವೆ ನಿರಂತರವಾಗಿ ಇರುವ ಬದ್ಧತೆ. ವಿಭಜನೆಯ ರಾಜಕಾರಣಕ್ಕೆ ಬದಲಾಗಿ ಏಕತೆಯ ಸಂದೇಶ ನೀಡುವ ಧೈರ್ಯ. ಹೀಗೆ ಒಬ್ಬ ಜನನಾಯಕನಿಗೆ ಇರಬೇಕಾದ ಎಲ್ಲಾ ಗುಣಗಳನ್ನು ರಾಹುಲ್ ಗಾಂಧಿಯವರು ಯಾತ್ರೆಯ ಹಾದಿ ಸಾಗಿದಂತೆ ಮೈಗೂಡಿಸಿಕೊಳ್ಳುತ್ತಾ ಬಂದರು.

ಭಾರತ್‌ ಜೋಡೋ ಯಾತ್ರೆ ರಾಹುಲ್ ಗಾಂಧಿಯವರ ರಾಜಕೀಯ ಬದುಕಿನಲ್ಲಿ ಅಂತಹ ಒಂದು ಮಹತ್ವದ ತಿರುವು. ವರ್ಷಗಳ ಕಾಲ ಅವರ ಬಗ್ಗೆ ಕೇಳುತ್ತಿದ್ದ ಮಾತುಗಳಿಗಿಂತ, ಯಾತ್ರೆ ಸಂದರ್ಭದಲ್ಲಿ ಜನ ತಮ್ಮ ಕಣ್ಣಾರೆ ಕಂಡ ರಾಹುಲ್‌ ಗಾಂಧಿಯವರೇ ಮುಖ್ಯರಾದರು. ಅಪಪ್ರಚಾರದ ಚಿತ್ರಣವನ್ನು ಜನರ ನೇರ ಅನುಭವ ತಿರಸ್ಕರಿಸುವಂತೆ ಮಾಡಿತು. ನಾವು ಆ ಯಾತ್ರೆಯಲ್ಲಿ ಹಾಕಿದ ಪ್ರತಿಯೊಂದು ಹೆಜ್ಜೆಯೂ ಭಾರತದ ಏಕತೆಯ ಕಡೆಗೆ ಇಟ್ಟ ಹೆಜ್ಜೆಯಾಗಿತ್ತು. ದೇಶದಲ್ಲಿ ಧಾರ್ಮಿಕ ಸಾಮರಸ್ಯ, ಸಾಮಾಜಿಕ ನ್ಯಾಯ, ಸಂವಿಧಾನದ ಪರ ಅಲೆಯನ್ನು ರಾಹುಲ್ ಗಾಂಧಿಯವರ ನಾಯಕತ್ವದ ಭಾರತ್ ಜೋಡೋ ಯಾತ್ರೆ ಹುಟ್ಟು ಹಾಕಿತ್ತು.

ದೇಶ ಗೆಲ್ಲುವುದಕ್ಕಿಂತ ಮನಸ್ಸು ಗೆಲ್ಲುವುದು ದೊಡ್ಡದು:

ಭಾರತದ ಭವಿಷ್ಯ ಕಟ್ಟಬೇಕಾದರೆ ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು; ಆದರೆ ಹೃದಯಗಳಲ್ಲಿ ದ್ವೇಷ ಇರಬಾರದು. ನಮ್ಮಲ್ಲಿ ಬೇರೆ ಬೇರೆ ಧರ್ಮಗಳಿರಬಹುದು; ಆದರೆ ದೇಶ ಒಂದೇ. ನಮ್ಮಲ್ಲಿ ಬೇರೆ ಬೇರೆ ಭಾಷೆಗಳಿರಬಹುದು; ಆದರೆ ಭಾರತ ಒಂದೇ. ನಮ್ಮಲ್ಲಿ ಬೇರೆ ಬೇರೆ ಜಾತಿಗಳಿರಬಹುದು; ಆದರೆ ಸಂವಿಧಾನ ಎಲ್ಲರಿಗೂ ಒಂದೇ. ಇದೇ ಭಾರತ್‌ ಜೋಡೋ ಯಾತ್ರೆಯ ಸಂದೇಶ.

ನಾನು ಆ ಯಾತ್ರೆಯಲ್ಲಿ ರಾಹುಲ್‌ ಗಾಂಧಿಯವರೊಂದಿಗೆ ಹೆಜ್ಜೆ ಹಾಕಿದವನಾಗಿ ಹೇಳುತ್ತೇನೆ. ಭಾರತವನ್ನು ಜೋಡಿಸುವ ಈ ಪಯಣ ನಿಲ್ಲಬಾರದು. ಸಾಮರಸ್ಯದ ಸಂದೇಶ ನಿರಂತರವಾಗಿರಬೇಕು.

ಧಾರ್ಮಿಕ ಸಹಿಷ್ಣುತೆಯ ಧ್ವನಿ ಮತ್ತಷ್ಟು ಗಟ್ಟಿಯಾಗಬೇಕು. ಜನರಿಗಾಗಿ, ಜನರ ಜೊತೆ ನಡೆಯುವ ರಾಜಕಾರಣ ನಿಲ್ಲಬಾರದು. ಏಕೆಂದರೆ, ದೇಶವನ್ನು ಗೆಲ್ಲುವುದಕ್ಕಿಂತ ದೇಶದ ಮನಸುಗಳನ್ನು ಗೆಲ್ಲುವುದು ದೊಡ್ಡದು. ಭಾರತ್‌ ಜೋಡೋ ಯಾತ್ರೆ ದೇಶದ ಮನಸುಗಳನ್ನು ಗೆಲ್ಲುವ ಪಯಣವಾಗಿತ್ತು. ಆ ಪಯಣ ಮುಂದುವರಿಯಲಿ. ಭಾರತ ಒಂದಾಗಿರಲಿ. ಭಾರತ ಬಲಿಷ್ಠವಾಗಿರಲಿ ಎಂದು ಹಾರೈಸುತ್ತೇನೆ.