ರಾಜ್ಯದಲ್ಲಿ ಬರಕ್ಕೆ ರೈತರು ತತ್ತರಿಸಿ ಹೋಗಿದ್ದಾರೆ, ಆದರೆ ಸರ್ಕಾರ ರೈತರ ಸಂಕಷ್ಟಕ್ಕೆ ಕಿವಿಗೊಡುತ್ತಿಲ್ಲ

ಹೂವಿನಹಡಗಲಿ: ಸೆ.1ರಿಂದ 10ರವರೆಗೂ ನಡೆಯುತ್ತಿರುವ ಬಳ್ಳಾರಿ ಪಾದಯಾತ್ರೆ ಕೇವಲ ರಾಜಕೀಯ ಅಲ್ಲ, ಕಲ್ಯಾಣ ಕರ್ನಾಟಕ ಜನರ ಸಮಸ್ಯೆ ಮತ್ತು ಅಭಿವೃದ್ಧಿ ಕುಂಠಿತ, ಸರ್ಕಾರ ವೈಫಲ್ಯ ವಿರುದ್ಧ ಬಿಜೆಪಿ ಪಾದಯಾತ್ರೆ ನಡೆಯುತ್ತಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಪಟ್ಟಣದ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ₹187 ಕೋಟಿ ಬೇರೆ ರಾಜ್ಯಕ್ಕೆ ಕಳಿಸಿ, ಅಲ್ಲಿಂದ ಬೇರೆ ಬೇರೆ ವ್ಯಕ್ತಿಗಳ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಿ ಲೂಟಿ ಮಾಡಿರುವ ಕಾಂಗ್ರೆಸ್‌ ಸರ್ಕಾರ ಈವರೆಗೂ ನಯಾ ಪೈಸೆ ವಸೂಲಿ ಕುರಿತು ಬಾಯಿ ಬಿಡುತ್ತಿಲ್ಲ, ಜನರಿಗೆ ಮೋಸ ಮಾಡಲು ಹೊರಟಿದೆ ಎಂದು ದೂರಿದರು.

ರಾಜ್ಯದಲ್ಲಿ ಬರಕ್ಕೆ ರೈತರು ತತ್ತರಿಸಿ ಹೋಗಿದ್ದಾರೆ, ಆದರೆ ಸರ್ಕಾರ ರೈತರ ಸಂಕಷ್ಟಕ್ಕೆ ಕಿವಿಗೊಡುತ್ತಿಲ್ಲ, ಬಿಜೆಪಿ ಪಾದಯಾತ್ರೆಯಲ್ಲಿ ಎಲ್ಲ ವರ್ಗದ ಜನರು ಹಾಗೂ ರೈತರ ಜತೆಗೆ ಸಂವಾದ ಮಾಡಿ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಪಜಾ, ಪಪಂ ಜನಾಂಗದ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ₹45 ಸಾವಿರ ಕೋಟಿ ಅನುದಾನ ಸರ್ಕಾರ ತನ್ನ ಪಂಚ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬಿಜೆಪಿ ಬರ ವೀಕ್ಷಣೆ ತಂಡ ಮಾಡಿ ರೈತರ ಅಹವಾಲು, ಸಮಸ್ಯೆ ಆಲಿಸಿದ್ದೇವೆ, ಸರ್ಕಾರದ ಸಚಿವರು ವೀಕ್ಷಣೆ ಮಾಡಿದ್ದರು. ಆದರೆ ಸರ್ಕಾರ ಮಾತ್ರ ಇನ್ನೂ ಬರ ಪರಿಹಾರ ಕುರಿತು ಕ್ರಮ ಕೈಗೊಂಡಿಲ್ಲ, ಜನ ತಮ್ಮ ಮಕ್ಕಳೊಂದಿಗೆ ಗುಳೆ ಹೋಗಿದ್ದು, ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.

ಬಳ್ಳಾರಿ ಪಾದಯಾತ್ರೆಗೆ ಬಳ್ಳಾರಿ ನಗರಕ್ಕೆ ಬಂದಾಗ ನಮ್ಮ ಕ್ಷೇತ್ರದಿಂದ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಮತ್ತು ರೈತರು, ದಲಿತರು ಆಗಮಿಸುತ್ತಾರೆ ಎಂದರು.

ಶಾಕಾರ ಜಾಕ್ವೆಲ್‌ನಿಂದ ಕೆರೆ ತುಂಬಿಸುವ ಯೋಜನೆ ಪೈಪ್‌ಲೈನ್‌ ಸಂಪೂರ್ಣ ಕಳಪೆಯಾಗಿದೆ. ಈ ಕುರಿತು ಈ ಹಿಂದೆ ತನಿಖೆಗೆ ಪತ್ರ ಬರೆದರೂ ಸರ್ಕಾರ ಕ್ರಮಕ್ಕೆ ಮುಂದಾಗಿಲ್ಲ, ಹೆಚ್ಚುವರಿ ಪಂಪ್‌, ಮೋಟಾರ್‌ ಅಳವಡಿಸುವ ಗೋಜಿಗೆ ಅಧಿಕಾರಿಗಳು ಗಮನ ಹರಿಸಿಲ್ಲ, ಕಳೆದ 2 ವರ್ಷದಿಂದ ಯೋಜನೆ ನಿರ್ವಹಣೆಗೆ ಅನುದಾನ ಬಂದಿಲ್ಲ, ಪ್ರತಿ ವರ್ಷ ₹2 ಕೋಟಿ ಬದಲು ಅಲ್ಪ ಹಣ ನಿರ್ವಹಣೆಗೆ ನೀಡಿದ್ದಾರೆ. ನೀರಾವರಿ ಕಾಮಗಾರಿಗಳ ಟೆಂಡರ್‌ಗಳಲ್ಲಿ ಯಾವ ಗುತ್ತಿಗೆದಾರರು ಭಾಗವಹಿಸುತ್ತಿಲ್ಲ, ಸರ್ಕಾರದಿಂದ ಸರಿಯಾಗಿ ಬಿಲ್‌ ಪಾವತಿಯಾಗುತ್ತಿಲ್ಲ, ಕರ್ನಾಟಕ ನೀರಾವರಿ ನಿಗಮವೊಂದರಲ್ಲೇ ₹6 ಸಾವಿರ ಕೋಟಿ ಬಿಲ್‌ ಬಾಕಿ ಇದೆ. ಜತೆಗೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ವಿದ್ಯುತ್‌ ಬಿಲ್‌ ₹117 ಕೋಟಿ ಬಾಕಿ ಇದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಯಾವುದಕ್ಕೂ ಅನುದಾನ ನೀಡುತ್ತಿಲ್ಲ ಎಂದರು.

ಶಾಕಾರ ಜಾಕ್ವೆಲ್‌ನ ಪಂಪ್‌ ರಿಪೇರಿ ಕಾರ್ಯ ನಡೆಯುತ್ತಿದ್ದು, ನಮ್ಮ ಆಪ್ತ ಸಹಾಯಕ ಹರಿಹರದಲ್ಲಿ ಇಡೀ ರಾತ್ರಿ ಸ್ಥಳದಲ್ಲಿದ್ದು ಕೆಲಸ ಮಾಡಿಸುತ್ತಿದ್ದರು. 2 ದಿನಗಳಲ್ಲಿ ಕೆರೆಗೆ ನೀರು ಹರಿಸುವ ಕೆಲಸ ಮಾಡುತ್ತೇವೆಂದು ಹೇಳಿದರು.