ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆಲಸ ಮಾಡಿ ಒಂದೂವರೆ ತಿಂಗಳು ಕಳೆದರೂ ಸಕಾಲಕ್ಕೆ ಕೂಲಿ ಹಣ ಪಾವತಿಯಾಗುತ್ತಿಲ್ಲ ಎಂದು ಆರೋಪಿಸಿ ಹಾವೇರಿ ತಾಲೂಕು ಕನವಳ್ಳಿ ಗ್ರಾಮದ ಕೂಲಿ ಕಾರ್ಮಿಕರು ಸೋಮವಾರ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ನಡೆಸಿ ಜಿಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಾವೇರಿ: ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆಲಸ ಮಾಡಿ ಒಂದೂವರೆ ತಿಂಗಳು ಕಳೆದರೂ ಸಕಾಲಕ್ಕೆ ಕೂಲಿ ಹಣ ಪಾವತಿಯಾಗುತ್ತಿಲ್ಲ ಎಂದು ಆರೋಪಿಸಿ ಹಾವೇರಿ ತಾಲೂಕು ಕನವಳ್ಳಿ ಗ್ರಾಮದ ಕೂಲಿ ಕಾರ್ಮಿಕರು ಸೋಮವಾರ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ನಡೆಸಿ ಜಿಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಎಂ.ಎಂ. ವೃತ್ತದಿಂದ ಪಾದಯಾತ್ರೆ ಆರಂಭಿಸಿದ ಕಾರ್ಮಿಕರು ನಗರಸಭೆ ಮುಂಭಾಗ, ಎಂ.ಜಿ.ವೃತ್ತ, ಜೆ.ಪಿ.ವೃತ್ತ, ಗುರುಭವನ ರಸ್ತೆ, ಜೆ.ಎಚ್. ಪಟೇಲ್ ಸರ್ಕಲ್ ಮಾರ್ಗವಾಗಿ ಸಂಚರಿಸಿ ಡಿಸಿ ಕಚೇರಿಯನ್ನು ತಲುಪಿದರು. ಈ ವೇಳೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಗ್ರಾಪಂ ಮಾಜಿ ಸದಸ್ಯ ಪರಮೇಶಪ್ಪ ದೊಡ್ಡಜಾಲಿ ಮಾತನಾಡಿ, ಹಾವೇರಿ ತಾಲೂಕು ಕನವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೆರೆಗೆ ನೀರು ಹರಿದುಬರಲು ಕಾಲುವೆ ನಿರ್ಮಾಣ, ಭರಡಿ ರಸ್ತೆ, ಭರಡಿ ರಸ್ತೆಯಿಂದ ಬಸಾಪುರ ಹದ್ದಿನವರೆಗೆ ರಸ್ತೆ ಕಾಮಗಾರಿ, ಕಲ್ಲೇದೇವರ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕೆಲಸ ಮಾಡಲಾಗಿದೆ. ಪ್ರತಿದಿನ ಸುಮಾರು 200ರಿಂದ 250 ಕಾರ್ಮಿಕರು ಕಾಮಗಾರಿಗಳಲ್ಲಿ ಕೆಲಸ ಮಾಡಿದ್ದು, ಸುಮಾರು 30 ಲಕ್ಷ ರು. ಕೂಲಿ ಹಣ ಪಾವತಿಯಾಗಬೇಕಿದೆ ಎಂದರು.
ಗ್ರಾಪಂ ಖಾತೆಗೆ 38 ಲಕ್ಷ ರು. ಹಣ ಜಮೆಯಾಗಿದ್ದು, ಕೆ-2 ಮೂಲಕ ಹಣ ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆ.12ರಂದು ಪಂಚಾಯಿತಿ ಖಾತೆಗೆ ಹಣ ಜಮೆಯಾಗಿದ್ದರೂ, ಇದುವರೆಗೆ ಕಾರ್ಮಿಕರ ಖಾತೆಗಳಿಗೆ ಕೂಲಿ ಹಣ ವರ್ಗಾವಣೆಯಾಗಿಲ್ಲ. ಪಿಡಿಒ ಅವರನ್ನು ವಿಚಾರಿಸಿದಾಗ `ಹಣ ಬಂದಿದೆ, ಆದರೆ ಪ್ರೊಸೆಸ್ ಆಗುತ್ತಿಲ್ಲ'''''''''''''''' ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ನರೇಗಾ ಕೂಲಿ ಹಣವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಮಕ್ಕಳ ಶಿಕ್ಷಣ, ಹಬ್ಬ-ಹರಿದಿನದ ಖರ್ಚು ಎದುರಾಗಿದೆ. ದುಡಿದ ಹಣ ಸಿಗದಿದ್ದರೆ ಕುಟುಂಬ ನಿರ್ವಹಣೆ ಹೇಗೆ? ಎಂದು ಪ್ರಶ್ನಿಸಿದರು. ಈ ಕೂಡಲೇ ದುಡಿದ ಹಣವನ್ನು ಕಾರ್ಮಿಕರ ಖಾತೆಗಳಿಗೆ ಜಮಾ ಮಾಡಬೇಕೆಂದು ಆಗ್ರಹಿಸಿದರು.ಇನ್ನೋರ್ವ ಗ್ರಾಪಂ ಮಾಜಿ ಸದಸ್ಯ ಶಿವಯೋಗೆಪ್ಪ ಮರಗಾಲ ಮಾತನಾಡಿ, ಕಾರ್ಮಿಕರು ಬಿಸಿಲು, ಮಳೆ ಎನ್ನದೆ ಕೆಲಸ ಮಾಡಿದ್ದಾರೆ. ದುಡಿದ ಕೂಲಿ ಹಣಕ್ಕಾಗಿ ಈಗ ಪಂಚಾಯಿತಿ ಕಚೇರಿಗೆ ಅಲೆಯುವಂತಾಗಿದೆ. ಮನೆಯಲ್ಲಿ ವಯೋವೃದ್ಧರಿಗೆ ಆರೋಗ್ಯ ಸಮಸ್ಯೆಯಿದ್ದು, ಔಷಧಿ ಖರೀದಿಸಲೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಕೂಡಲೇ ಅಧಿಕಾರಿಗಳು ಕ್ರಮ ಕೈಗೊಂಡು ತಾಂತ್ರಿಕ ಸಮಸ್ಯೆ ಬಗೆಹರಿಸಿ ಕಾರ್ಮಿಕರ ಖಾತೆಗೆ ನೇರ ಹಣ ಪಾವತಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಶಿವಬಸಪ್ಪ ಗೋವಿ, ಕಾರ್ಮಿಕರಾದ ಪಾಲಾಕ್ಷಯ್ಯ ಹಿರಿಯಾಳಮಠ, ರಮೇಶ ಕಾಟೇನವರ, ರಫಿಕ್‌ಸಾಬ ಭೂಸಿ, ಹೊನ್ನಪ್ಪ ಬಾರ್ಕಿ, ತಿಮ್ಮಣ್ಣ ವಡ್ಡರ, ಉಡಚಪ್ಪ ಸಂಗಪ್ಪನವರ, ಪರಮೇಶ ಕದಂ, ಮಲ್ಲಾರೆಪ್ಪ ಕಾಟೇನವರ, ಶಿವರಾಜ ಕತ್ತಿ, ಮೌಲಾಲಿ ಬನ್ನಿಹಟ್ಟಿ, ಪರಮೇಶ್ವರ ಧೂಳಣ್ಣನವರ, ನಾಗಪ್ಪ ಹರವಿ, ಮಾರುತಿ ಶಿಂಧೆ, ಯಲ್ಲಪ್ಪ ಕಾಳಶೆಟ್ಟಿ, ಸತೀಶ ಕತ್ತೆಬೆನ್ನೂರ, ಮೂಕಪ್ಪ ಹರವಿ, ಕೊಟ್ರಯ್ಯ ಪೂಜಾರ, ಮುತ್ತುರಾಜ ಧೂಳಣ್ಣನವರ, ತಿರಕಪ್ಪ ಗೋಣಿ, ಶರಣಯ್ಯ ಮಠಪತಿ, ಪಾರಮ್ಮ ಸೋಮನಕಟ್ಟಿ, ಹೊನ್ನವ್ವ ಗುತ್ತಲ, ಕವಿತಾ ದೊಡ್ಡಜಾಲಿ, ಪುಷ್ಪಾ ಹಳೇಮನಿ, ಸಾವಿತ್ರವ್ವ ಮಠಪತಿ, ನಾಗವ್ವ ಮಠಪತಿ ಸೇರಿದಂತೆ ಅನೇಕ ಕಾರ್ಮಿಕರು ಇದ್ದರು.