ರಾಜಾಸೀಟಿನಲ್ಲಿ ಫಲಪುಷ್ಪ ಪ್ರದರ್ಶನ: ಪಾಡಿ ಇಗ್ಗುತಪ್ಪ ದೇವಾಲಯ ಕಲಾಕೃತಿ ಪ್ರಮುಖ ಆಕರ್ಷಣೆ

KannadaprabhaNewsNetwork | Published : Jan 12, 2024 1:45 AM

ಸಾರಾಂಶ

ಜ.26ರಿಂದ ಮೂರು ದಿನಗಳ ಕಾಲ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಬಾರಿ ಪಾಡಿ ಇಗ್ಗುತಪ್ಪ ದೇವಾಲಯದ ಹೂವಿನ ಕಲಾಕೃತಿ ಪ್ರಮುಖ ಆಕರ್ಷಣೆಯಾಗಿರಲಿದೆ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗಿನ ಪ್ರಮುಖ ಪ್ರವಾಸಿ ತಾಣ ರಾಜಾಸೀಟಿನಲ್ಲಿ ಜ.26ರಿಂದ ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಈ ಬಾರಿ ಮಳೆ ದೈವ ಎಂದೇ ಕರೆಯಲಾಗುವ ಪಾಡಿ ಇಗ್ಗುತಪ್ಪ ದೇವಾಲಯದ ಹೂವಿನ ಕಲಾಕೃತಿ ಪ್ರಮುಖ ಆಕರ್ಷಣೆಯಾಗಿ ಕಂಡು ಬರಲಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಈಗಾಗಲೇ ರಾಜಾಸೀಟು ಹೂವಿನ ಪ್ರದರ್ಶನಕ್ಕೆ ಸಿದ್ಧಗೊಳ್ಳುತ್ತಿದೆ. ಈ ಬಾರಿ ಸುಮಾರು 12 ಸಾವಿರ ಹೂವಿನ ಕುಂಡಗಳಲ್ಲಿ ಹಲವು ಬಗೆಯ ಹೂವುಗಳನ್ನು ಬೆಳೆಸಲಾಗಿದೆ. ಅಂದಾಜು 25 ಲಕ್ಷ ರು. ವೆಚ್ಚದಲ್ಲಿ ಫಲಪುಷ್ಪ ಪ್ರದರ್ಶನವನ್ನು ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ಸುಮಾರು 50 ಸಾವಿರ ಮಂದಿ ಸ್ಥಳೀಯರು ಹಾಗೂ ಪ್ರವಾಸಿಗರು ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಕಕ್ಕಬ್ಬೆಯಲ್ಲಿರುವ ಪಾಡಿ ಇಗ್ಗುತಪ್ಪ ದೇವಾಲಯವನ್ನು ಮಳೆ ದೈವ ಎಂದೇ ಕರೆಯಲಾಗುತ್ತದೆ. ಇದು ಕೊಡವರ ಅತ್ಯಂತ ಪ್ರಮುಖ ದೇವಸ್ಥಾನವೆಂದು ಪರಿಗಣಿಸಲಾಗಿದೆ. ತೀರ್ಥಯಾತ್ರೆಯ ಅತ್ಯುತ್ತಮ ಸ್ಥಳಗಳಲ್ಲಿ ಇದೂ ಒಂದಾಗಿದೆ. ಪಾಡಿ ಇಗುತಪ್ಪ ದೇವಾಲಯವನ್ನು 1810 ರಲ್ಲಿ ಲಿಂಗ ರಾಜೇಂದ್ರ ನಿರ್ಮಿಸಿದರು. ಲಿಂಗ ರಾಜೇಂದ್ರ ಆಳ್ವಿಕೆಯಲ್ಲಿ ಈ ದೇವಾಲಯವು ಪೂಜಾ ಸ್ಥಳವಾಗಿತ್ತು. ದೇವಸ್ಥಾನವನ್ನು 2008 ರಲ್ಲಿ ಕರ್ನಾಟಕ ಸರ್ಕಾರದಿಂದ ಪುನನಿರ್ಮಿಸಲಾಯಿತು.

ಮಳೆಗಾಗಿ ಇಗ್ಗುತಪ್ಪನನ್ನು ಪ್ರಾರ್ಥಿಸುತ್ತಾರೆ. ಈ ಮೂಲಕ ಉತ್ತಮ ಬೆಳೆಗಳನ್ನು ಪಡೆಯಬಹುದು ಎಂಬ ನಂಬಿಕೆಯಿದೆ. ಪ್ರತಿ ವರ್ಷವೂ ಹುತ್ತರಿ ಹಬ್ಬದಂದು ಬತ್ತವನ್ನು ಮೊದಲ ಬಾರಿಗೆ ಇಗ್ಗುತಪ್ಪನಿಗೆ ಸೇರಿದ ಕ್ಷೇತ್ರಗಳಲ್ಲಿ ಕೊಯ್ಲು ಮಾಡಲಾಗುತ್ತದೆ. ಹತ್ತುರಿ ಸುಗ್ಗಿಯ ಉತ್ಸವದ ಸಮಯದಲ್ಲಿ ವರ್ಷದ ಮೊದಲ ಭತ್ತದ ಕದಿರನ್ನು ಇಗ್ಗುತಪ್ಪನಿಗೆ ಅರ್ಪಿಸಲಾಗುತ್ತದೆ.

ಕಳೆದ ವರ್ಷ ರಾಜಾಸೀಟಿನಲ್ಲಿ ನಾಲ್ಕುನಾಡು ಅರಮನೆಯ ಕಲಾಕೃತಿಯನ್ನು ನಿರ್ಮಿಸಲಾಗಿತ್ತು. ಈ ಬಾರಿ ಇಗ್ಗುತಪ್ಪ ದೇವಾಲಯ ಕಲಾಕೃತಿಯೊಂದಿಗೆ ಹೂವಿನಿಂದಲೇ ಬಗೆ ಬಗೆಯ ಕಲಾಕೃತಿಗಳು ಪ್ರದರ್ಶನದಲ್ಲಿ ಕಂಡುಬರಲಿದೆ. ಇದಲ್ಲದೆ ವಿವಿಧ ಇಲಾಖೆಗಳ ಮಾಹಿತಿಯ ಸ್ಟಾಲ್ ಇರಲಿದೆ. ಟಿಕೆಟ್ ದರ ಎಂದಿನಂತೆ ರು.20 ಇರಲಿದೆ.

ಪಿರಂಗಿ ಮತ್ತು ರಾಷ್ಟ್ರ ಧ್ವಜ ಜೊತೆ ಸೈನಿಕ, ಮಕ್ಕಳಿಗಾಗಿ ಚೋಟಾಭೀಮ್, ಬಾರ್ಬಿ ಗರ್ಲ್ ಸೇರಿದಂತೆ ವಿವಿಧ ಕಲಾಕೃತಿಗಳು, ಸಿಟ್ಟಿಂಗ್ ಲೇಡಿ ಕಲಾಕೃತಿ, ಮೂರು ಸೆಲ್ಫಿ ಪಾಯಿಂಟ್ ಗಳು ಇರಲಿದೆ. ವಿವಿಧ ರೀತಿಯ ಹೂವುಗಳಾದ ಪೇಟೂನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಕ್ಯಾಲಾಂಡೂಲಾ, ಪ್ಲಾಕ್ಸ್, ವಿಂಕಾ ರೋಸಿಯಾ, ಡೇಲಿಯಾ, ಅಲಿಸಂ ಮತ್ತಿತರ ಗಿಡಗಳನ್ನು ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ನಾಟಿ ಮಾಡಲಾಗಿದ್ದು, ಪ್ರದರ್ಶನದಲ್ಲಿ ನೋಡುಗರ ಮನ ಸೆಳೆಯಲಿದೆ. ತರಕಾರಿ ಕೆತ್ತನೆ ಹಾಗೂ ಹಣ್ಣಿನ ಕೆತ್ತನೆ ಕೂಡ ಇರಲಿದೆ.

ಗಾಂಧಿ ಮೈದಾನದಲ್ಲಿ ವಿವಿಧ ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ, ತೋಟಗಾರಿಕೆ, ಇತರೆ ಇಲಾಖೆಯ ವಸ್ತು ಪ್ರದರ್ಶನದ ಮಳಿಗೆ ಇರಲಿದೆ. ರೈತರು ಬೆಳೆದಿರುವ ವಿಶಿಷ್ಟವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಂಬಾರ ಬೆಳೆಗಳನ್ನು ಪ್ರದರ್ಶಿಸಲು ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದೆ. ರಾಜಾಸೀಟಿನಲ್ಲಿ ಜ.26ರಿಂದ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದೆ. ಈ ಬಾರಿ ಪಾಡಿ ಇಗ್ಗುತಪ್ಪ ದೇವಾಲಯದ ಕಲಾಕೃತಿ ಪ್ರಮುಖವಾಗಿರಲಿದೆ. ಇದರೊಂದಿಗೆ ಇತರೆ 11 ಕಲಾಕೃತಿಗಳು ಕೂಡ ಇರಲಿದೆ. ಈಗಾಗಲೇ ರಾಜಾಸೀಟಿನಲ್ಲಿ ವಿವಿಧ ಬಗೆಯ ಹೂವುಗಳನ್ನು 12 ಸಾವಿರ ಕುಂಡಗಳಲ್ಲಿ ಬೆಳೆಸಲಾಗಿದ್ದು, ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

-ಯೋಗೇಶ್ ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ ಮಡಿಕೇರಿ

Share this article