ಇಂದಿನಿಂದ ಫಲಪುಷ್ಪ ಪ್ರದರ್ಶನ ಶುರು

KannadaprabhaNewsNetwork |  
Published : Aug 08, 2024, 01:41 AM IST
Lalbagh Flower show 12 | Kannada Prabha

ಸಾರಾಂಶ

ಗುರುವಾರದಿಂದ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಪ್ರಾರಂಭ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗುರುವಾರ (ಆ.8) ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ। ಬಿ.ಆರ್‌.ಅಂಬೇಡ್ಕರ್‌ ವಿಷಯಾಧಾರಿತ ಸ್ವಾತಂತ್ರ್ಯೋತ್ಸವ 216ನೇ ಫಲಪುಷ್ಪ ಪ್ರದರ್ಶನ ಆರಂಭಗೊಳ್ಳಲಿದೆ.

ಫಲಪುಷ್ಪ ಪ್ರದರ್ಶನವನ್ನು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಡಾ। ಬಿ.ಆರ್‌.ಅಂಬೇಡ್ಕರ್‌ ಅವರ ಮೊಮ್ಮಗ ಭೀಮರಾವ್‌ ಯಶವಂತ್‌ ಅಂಬೇಡ್ಕರ್‌ ಉಪಸ್ಥಿತರಿರುವರು. ಶಾಸಕ ಉದಯ್‌ ಬಿ.ಗರುಡಾಚಾರ್‌ ಅಧ್ಯಕ್ಷತೆ ವಹಿಸುವರು.

ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು ₹2.80 ಕೋಟಿ ವೆಚ್ಚ ಮಾಡಲಾಗಿದ್ದು, ಅಂಥೋರಿಯಂ, ಲಿಲ್ಲಿ, ಆರ್ಕಿಡ್, ಜರ್ಬೇರಾ, ಸೇವಂತಿಗೆ, ಇಂಪೇಷನ್ಸ್, ರೆಡ್ಹಾಟ್, ಪೋಕರ್ ಸೇರಿದಂತೆ ಸುಮಾರು 30ರಿಂದ 34 ಲಕ್ಷ ವಿವಿಧ ಪುಷ್ಪಗಳನ್ನು ಅಲಂಕಾರಕ್ಕೆ ಬಳಕೆ ಮಾಡಲಾಗುತ್ತಿದೆ.

ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರ ಸುರಕ್ಷತೆಗಾಗಿ ಲಾಲ್‌ಬಾಗ್ ನಾಲ್ಕು ಪ್ರವೇಶ ದ್ವಾರಗಳು ಮತ್ತು ಗಾಜಿನ ಮನೆಯ ಪ್ರವೇಶ ದ್ವಾರಗಳಲ್ಲಿ ಡೋರ್‌ಫ್ರೇಮ್‌ ಮೆಟಲ್‌ ಡಿಟೆಕ್ಟರ್ಸ್‌ ಅಳವಡಿಸಲಾಗಿದೆ. ಎಲ್ಲೆಡೆ 136 ಸಿಸಿ ಟಿವಿ ಕ್ಯಾಮೆರಾಗಳು, ಆಯ್ದ ಸ್ಥಳಗಳಲ್ಲಿ 5 ಎತ್ತರದ ಟವರ್‌ ವೇದಿಕೆಯಿಂದ ಪೊಲೀಸ್‌ ಕಣ್ಗಾವಲು, ಅಗ್ನಿಶಾಮಕ ದಳದ ವಾಹನ ನಿಯೋಜನೆ, ಒಟ್ಟು 38 ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು, ಪ್ಯಾರಾ ಮೆಡಿಕಲ್‌ ತಂಡವುಳ್ಳ ಮಿನಿ ಆಸ್ಪತ್ರೆ ತೆರೆಯಲಾಗಿದೆ.ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

ಫಲಪುಷ್ಪ ಪ್ರದರ್ಶನಕ್ಕೆ ವಿವಿಧ ಶಾಲೆಗಳಿಂದ ಸಮವಸ್ತ್ರದಲ್ಲಿ ಆಗಮಿಸುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶ ದೊರೆಯಲಿದೆ. ಆದರೆ, ರಜಾ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರುವುದಿಲ್ಲ. ಅವರು ಕೂಡ ₹30 ಟಿಕೆಟ್‌ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ತಿಂಡಿ, ಪ್ಲಾಸ್ಟಿಕ್‌ಗೆ ನಿಷೇಧ

ಲಾಲ್‌ಬಾಗ್‌ಗೆ ಯಾವುದೇ ರೀತಿಯ ತಿಂಡಿ, ತಿನಿಸು ತರುವುದನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್‌ ಕೈಚೀಲ ತರುವಂತಿಲ್ಲ. ಸಸ್ಯತೋಟದಲ್ಲಿ ಗಿಡ, ಹೂವುಗಳನ್ನು ಕೀಳುವಂತಿಲ್ಲ. ಪ್ರದರ್ಶನ ವೀಕ್ಷಣೆಗೆ ಬಂದವರು ಹುಲ್ಲು ಹಾಸಿನ ಮೇಲೆ ಅಥವಾ ಇತರೆಗೆ ಯಾವುದೇ ರೀತಿಯ ಆಟಗಳನ್ನು ಆಡುವುದನ್ನು ನಿಷೇಧಿಸಲಾಗಿದೆ. ಪ್ರದರ್ಶನದ ಅವಧಿಯಲ್ಲಿ ಲಾಲ್‌ಬಾಗ್‌ಗೆ ಬರುವ ವಾಯುವಿಹಾರಿಗಳ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...