-ಕಲಬುರಗಿಯಲ್ಲಿ ಅಂಬಿಗರ ಚೌಡಯ್ಯನವರ ಬಾವಚಿತ್ರ, ವಚನ ಗ್ರಂಥ ಮೆರವಣಿಗೆ । ಜನಮನ ಸೆಳೆದ ಹೆಲಿಕಾಪ್ಟರ್ ಪುಷ್ಪವೃಷ್ಟಿ
ಕನ್ನಡಪ್ರಭ ವಾರ್ತೆ ಕಲಬುರಗಿ
ನಗರ ಹಾಗೂ ಜಿಲ್ಲಾದ್ಯಂತ ಅಂಬಿಗ ಚೌಡಯ್ಯ ನವರ 906ನೇ ಜಯಂತ್ಯುತ್ಸವ ಸಂಭ್ರಮದಿಂದ ನಡೆಯಿತು.ಜಯಂತಿ ಅಂಗವಾಗಿ ಕಳೆದ 2 ದಿನಗಳಿಂದಲೇ ನಗರದಲ್ಲಿ ಭಕ್ತಿಭಾವ ಮತ್ತು ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಜಯಂತ್ಯುತ್ಸವ ಪ್ರಯುಕ್ತ ನಡೆದ ಬೃಹತ್ ರ್‍ಯಾಲಿ, ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಜನಮನ ಸೆಳೆಯಿತು.
ವಿವಿಧ ಸಮುದಾಯದ ಮುಖಂಡರು, ಗಣ್ಯರು, ಕಾರ್ಯಕರ್ತರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರ್‍ಯಾಲಿ ಮಾರ್ಗದುದ್ದಕ್ಕೂ ಭಕ್ತರು ಜಯಘೋಷ ಕೂಗಿ, ನಿಜ ಶರಣ ಅಂಬಿಗ ಚೌಡಯ್ಯ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಜಗತ್ ವೃತ್ತದಲ್ಲಿ ನಿಜ ಶರಣರ ಭಾವಚಿತ್ರದ ಗೋಪುರ ಜನಮನ ಸೆಳೆಯಿತು.
ಗಂಜ್ ಪ್ರದೇಶದ ನಗರೇಶ್ವರ ಶಾಲೆಯ ಆವರಣದಿಂದ ಅಂಬಿಗರ ಚೌಡಯ್ಯನವರ ಭಾವಚಿತ್ರ ಹಾಗೂ ವಚನಗ್ರಂಥ ಹೊತ್ತ ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಪಂಡಿತರಂಗಮಂದಿರದಲ್ಲಿ ನಡೆದ ಜಯಂತಿ ವೇದಿಕೆ ಕಾರ್ಯಕ್ರಮದಲ್ಲಿ ಮಲ್ಲಣ್ಣಪ್ಪ ಮಹಾಸ್ವಾಮಿಗಳು, ಸುಲಫಲಮಠದ ಮಹಾಂತಶಿವಾಚಾರ್ಯರು ಸೇರಿದಂತೆ ಪೂಜ್ಯರು, ಜನಪ್ರತಿನಿಧಿಗಳು ಅಧಿಕಾರಿಗಳು ಪಾಲ್ಗೊಂಡಿದ್ದರು. ಪ್ರೊ. ಎಚ್.ಟಿ ಪೋತೆ ಅವರು ವಿಶೇಷ ಉಪನ್ಯಾಸ ನೀಡಿದರು. ಪ್ರತಿಭಾವಂತ ಮಕ್ಕಳಿಗೆ ಸನ್ಮಾನ, ಲ್ಯಾಪ್ ಟಾಪ್ ವಿತರಣೆ, ವಿಕಲಚೇತನ ಮಕ್ಕಳಿಗೆ ತ್ರಿಚಕ್ರ ಸೈಕಲ್ ವಿತರಿಸಲಾಯಿತು. ಸಂಜೆ ನಿಜಶರಣ ಅಂಬಿಗರ ಚೌಡಯ್ಯನವರ ಯುವಕ ಮಂಡಳಿಯಿಂದ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದವರೆಗೆ ಭವ್ಯ ಮೆರವಣಿಗೆ ನಡೆಯಿತು.
ಸಮಿತಿ ಅಧ್ಯಕ್ಷ ಜಯಪ್ರಕಾಶ ಕಮಕನೂರ್, ಮೇಯರ್ ವರ್ಷಾ ಜಾನೆ, ಶಿವು ಹೊನಗುಂಟಿ, ಸುಲಫಲ ಶ್ರೀಗಳು ಚಾಲನೆ ನೀಡಿದರು.
ಫೋಟೋ- ಜಯಂತಿ 1
ಫೋಟೋ- ಜಯಂತಿ 2, ಜಯಂತಿ 3
ಕಲಬುರಗಿಯಲ್ಲಿನ ಅಂಬಿಗರ ಚೌಡಯ್ಯನವರ ರ್‍ಯಾಲಿಗೆ ಡೀಸಿ ಫೌಜಿಯಾ ತರನ್ನುಮ್, ಶಾಸಕ ತಿಪ್ಪಣ್ಣ ಕಮಕನೂರ್, ಅಲ್ಲಂಪ್ರಭು ಪಾಟೀಲ್, ಬಸವರಾಜ ಮತ್ತಿಮಡು ಚಾಲನೆ ನೀಡಿದರು.ಫೋಟೋ- ಜಯಂತಿ 4
ಕಲಬುರಗಿ ನಗರದಲ್ಲಿಂದು ನಡೆದ ಅಂಬಿಗರ ಚೌಡಯ್ಯನವರ ಬಾವಚಿತ್ರ, ವಚನ ಗ್ರಂಥ ಮೆರವಣಿಗೆ ಮೇಲೆ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ನಡೆಯಿತು.