ಕನ್ನಡಪ್ರಭ ವಾರ್ತೆ ತಾಳಿಕೋಟೆಡೋಣಿ ನದಿಯಲ್ಲಿ ಪ್ರವಾಹದ ಏರಿಳಿತ ಮುಂದುವರೆದಿದ್ದು, ವಿಜಯಪುರ ಮಾರ್ಗದ ರಾಜ್ಯ ಹೆದ್ದಾರಿಯ ಸಂಚಾರ ಇನ್ನು ಸ್ಥಗಿತಗೊಂಡಿದೆ. ಡೋಣಿ ನದಿಯ ಪ್ರವಾಹದಿಂದ ನೂರಾರು ಎಕರೆ ಕೃಷಿ, ತೋಟಗಾರಿಕೆ ಭೂಮಿ ಜಲಾವೃತವಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಇದೀಗ ತಾಲೂಕಾಡಳಿತದ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ.ತಹಸೀಲ್ದಾರ್ ಡಾ.ವಿನಯಾ ಹೂಗಾರ ಸಿಬ್ಬಂದಿಗಳೊಂದಿಗೆ ಹಾಗೂ ವಿಪತ್ತು ನಿರ್ವಹಣಾ ಅಧಿಕಾರಿಗಳ ತಂಡ, ಕೃಷಿ ಇಲಾಖೆಯ ಅಧಿಕಾರಿ ಭಾವಿಕಟ್ಟಿ ಮತ್ತು ಮಹೇಶ ಜೋಶಿ ಎಂಬುವರೊಂದಿಗೆ ಬೋಳವಾಡ, ಗುತ್ತಿಹಾಳ ಮತ್ತು ತಾಳಿಕೋಟೆ ವ್ಯಾಪ್ತಿಯ ಜಮೀನುಗಳಿಗೆ ಭೇಟಿ ನೀಡಿ ಹಾನಿಗೊಳಗಾಗಿ ಹತ್ತಿ, ತೊಗರಿ ಸೇರಿದಂತೆ ಇನ್ನಿತರೆ ಬೆಳೆಗಳನ್ನು ಪರಿಶೀಲಿಸಿದರು. ಈ ಕುರಿತು ಜಿಲ್ಲಾಡಳಿತದೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.ಕಳೆದ ನಾಲ್ಕೈದು ದಿನಗಳಿಂದ ಬೆಂಬಿಡದೇ ಸುರಿಯುತ್ತಿರುವ ಮಳೆಯ ಪರಿಣಾಮ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗೋಡೆಗಳು ಕುಸಿದಿದ್ದರ ಬಗ್ಗೆ ವರದಿಯಾಗಿದೆ. ಆದರೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ, ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಎರಡು ಮನೆಗೋಡೆಗಳು ಕುಸಿದು ಬಿದ್ದಿವೆ. ಅಗಾಗ್ಗೆ ಸುರಿಯುತ್ತಿರುವ ಮಳೆಯಿಂದ ಮನೆಯಿಂದ ಜನರು ಹೊರಬರಲು ಹಿಂಜರಿಯುತ್ತಿದ್ದಾರೆ. ಬಡವರ ಮನೆಗಳು ಈಗಲೋ ಆಗಲೋ ಕುಸಿಯುವ ಸ್ಥಿತಿಗೆ ತಲುಪಿದ್ದರಿಂದ ಮನೆಯಿಂದ ಪಕ್ಕದ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇನ್ನೂ ಕೂಲಿ ಕಾರ್ಮಿಕರು ಮಳೆಯ ಅವಾಂತರದಿಂದ ಕೆಲಸವಿಲ್ಲದೇ ಮನೆಯಲ್ಲಿಯೇ ಉಳಿದುಕೊಳ್ಳುವಂತಾಗಿದೆ. ಮಳೆ ಹೀಗೆ ಇನ್ನೂ ನಾಲ್ಕೈದು ದಿನ ಮುಂದುವರೆದರೆ ಬಿತ್ತದ ಬೆಳೆಗಳೆಲ್ಲವೂ ನೇಟೆರೋಗಕ್ಕೆ ತುತ್ತಾಗುತ್ತದೆ ಎಂದು ರೈತರಲ್ಲಿ ಆತಂಕ ಶುರುವಾಗಿದೆ. ಡಂಗುರ ಸಾರಿದ ತಾಲೂಕಾಡಳಿತ
ತಹಸೀಲ್ದಾರ್ ಡಾ.ವಿನಯಾ ಹೂಗಾರ ಡೋಣಿ ನದಿ ತೀರದ ಸುತ್ತಮುತ್ತಲು ಜನ, ಜಾನುವಾರುಗಳು ಅಲ್ಲದೇ ಸುತ್ತಲಿನ ಪ್ರದೇಶಗಳ ಜಮೀನುಗಳಲ್ಲಿ ರೈತರು ವಾಸ ಮಾಡದಂತೆ ಮತ್ತು ಕುರಿಗಾಹಿಗಳು ಸಹ ನದಿ ತೀರದತ್ತ ಸುಳಿಯದಂತೆ ಡಂಗುರದ ಮೂಲಕ ಸಾರಿ ಎಚ್ಚರಿಕೆಯನ್ನು ನೀಡಿದ್ದಾರೆ.ವಿಜಯಪುರ ಮತ್ತು ಮುದ್ದೇಬಿಹಾಳ ಮಾರ್ಗದ ಕಡೆಗೆ ಸದ್ಯ ವಾಹನ ಸಂಚಾರ ಸ್ಥಗಿತವಾಗಿದ್ದು, ವಾಹನಗಳು ಹಡಗಿನಾಳ ರಸ್ತೆಯ ಮೂಲಕ ಸಂಚರಿಸುತ್ತಿವೆ. ಮಳೆಯಿಂದ ಮೂಕಿಹಾಳ ಗ್ರಾಮದ ಹತ್ತಿರದ ಹಳ್ಳವು ತುಂಬಿ ಹರಿಯುತ್ತಿದೆ. ಸೇತುವೆಯ ಮೇಲಿನ ನೀರಿನ ಪ್ರಮಾಣವನ್ನು ಅವಲೋಕಿಸಿ ಬಸ್ ಹಾಗೂ ವಾಹನಗಳ ಸಂಚಾರ ಮುಂದುವರಿದಿದೆ.ಕೋಟ್‌ಸತತ ಮಳೆಯಿಂದ ಡೋಣಿ ನದಿಯಲ್ಲಿ ಪ್ರವಾಹ ಏರಿಳಿತವಾಗುತ್ತಿದೆ. ವಾಹನ ಸಂಚಾರಕ್ಕೆ ಹಡಗಿನಾಳ ರಸ್ತೆಯ ಮೂಲಕ ವ್ಯವಸ್ಥೆ ಮಾಡಿದ್ದೇವೆ ಮೂಕಿಹಾಳ ಹಳ್ಳದ ಹತ್ತಿರ ಪೊಲೀಸ್ ಸಿಬ್ಬಂದಿ ಮತ್ತು ನಮ್ಮ ಇಲಾಖೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಡೋಣಿ ನದಿಯ ಪ್ರವಾಹ ಮತ್ತು ಮಳೆಯಿಂದ ಬೆಳೆ, ಮನೆ ಹಾನಿಯ ಬಗ್ಗೆ ಮಾಹಿತಿ ಕಲೆ ಹಾಕುವ ಕಾರ್ಯ ನಡೆದಿದೆ. ಈ ಕುರಿತು ಜಿಲ್ಲಾಡಳಿತದೊಂದಿಗೆ ನಿತ್ಯ ಸಂಪರ್ಕದಲ್ಲಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ.ಡಾ.ವಿನಯಾ ಹೂಗಾರ, ತಹಸೀಲ್ದಾರ್